ಬೆಳಗಾವಿ: ಕಕ್ಷೀದಾರರಿಗೆ ವಂಚಿಸಿದ ಆರೋಪದ ಮೇಲ್ನೋಟಕ್ಕೆ ಸತ್ಯವೆಂದು ತಿಳಿದು ಬಂದಿರುವ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಭಾರತೀಯ ವಕೀಲರ ಪರಿಷತ್ (Bar Council of India) ವಕೀಲ ಕೆ.ಬಿ ನಾಯಕ್ ಎಂಬುವರನ್ನು ಅಮಾನತು ಮಾಡಿದೆ.
ಇನ್ನು ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಮೇಲ್ಮನವಿ ಅರ್ಜಿ ಇತ್ಯರ್ಥವಾಗುವವರೆಗೂ ದೇಶದ ಯಾವುದೇ ನ್ಯಾಯಾಲಯದಲ್ಲಿ ವಕೀಲಿಕೆ ಮಾಡುವಂತೇಯೂ ಇಲ್ಲ ಎಂದು ಭಾರತೀಯ ವಕೀಲರ ಪರಿಷತ್ತು ನಿರ್ಬಂಧಿಸಿದೆ.
ಪ್ರಕರಣ: ಬೆಳಗಾವಿಯ ವಕೀಲ ಬಸವರಾಜ ಜರಳಿ ಎಂಬುವರು ವಕೀಲ ಕೆ.ಬಿ ನಾಯಕ್ ಅವರ ವಿರುದ್ಧ ವೃತ್ತಿ ದುರ್ನಡತೆಗೆ ಸಂಬಂಧಿಸಿದಂತೆ ದೂರು ನೀಡಿದ್ದರು. ಈ ದೂರನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಪರಿಗಣಿಸಲಿಲ್ಲ.
ರಾಜ್ಯ ವಕೀಲರ ಪರಿಷತ್ತಿನ ಕ್ರಮ ಪ್ರಶ್ನಿಸಿ ವಕೀಲ ಬಸವರಾಜ ಜರಳಿ ಅವರು ಭಾರತೀಯ ವಕೀಲರ ಪರಿಷತ್ತಿನಲ್ಲಿ ಮೇಲ್ಮನವಿ ಸಲ್ಲಿಸಿದರು. ಆ ಅರ್ಜಿ ವಿಚಾರಣೆ ನಡೆಸಿದ ಭಾರತೀಯ ವಕೀಲರ ಪರಿಷತ್ತಿನ ಮೂವರು ಸದಸ್ಯರ ಶಿಸ್ತುಪಾಲನಾ ಸಮಿತಿ ಕೆ.ಬಿ ನಾಯಕ್ ಅವರಿಗೆ ವಕೀಲಿಕೆ ಮಾಡದಂತೆ ನಿರ್ಬಂಧಿಸಿದೆ.
ವಕೀಲ ಕೆ.ಬಿ ನಾಯಕ್ ಅವರಿಗೆ ವಕೀಲಿಕೆ ಮಾಡದಂತೆ ನಿರ್ಬಂಧಿಸಿರುವ ಬಿಸಿಐ ಆರೋಪಿತ ವಕೀಲರು ತಮ್ಮ ವಿರುದ್ಧದ ಆರೋಪಗಳಿಗೆ 4 ವಾರಗಳಲ್ಲಿ ಉತ್ತರಿಸುವಂತೆ ನೋಟಿಸ್ ಜಾರಿ ಮಾಡಿದೆ.
ಸುಳ್ಳು ಮಾಹಿತಿ ನೀಡಿಕೆ: ನ್ಯಾಯಾಂಗ ಬಂಧನದಲ್ಲಿದ್ದ ಸವದತ್ತಿಯ ಬವಸರೆಡ್ಡಿ ಎಂಬುವರಿಗೆ ವಕೀಲ ಕೆ.ಬಿ ನಾಯಕ್ ಅವರು ಸುಳ್ಳು ಮಾಹಿತಿ ನೀಡಿ ಅವರ ಜಮೀನಿನ ಜಿಪಿಎ ಪಡೆದಿದ್ದಾರೆ. ನಂತರ ಅಕ್ರಮವಾಗಿ ಬೇರೊಬ್ಬರಿಗೆ ಮಾರಾಟ ಮಾಡಿದ್ದಾರೆ. ಈ ಮೂಲಕ ವೃತ್ತಿ ದುರ್ನಡತೆ ತೋರಿದ್ದಾರೆ ಎಂದು ವಕೀಲ ಬಸವರಾಜ್ ಆರೋಪಿಸಿದ್ದರು.
ವೃತ್ತಿ ದುರ್ನಡತೆ ತೋರಿರುವ ವಕೀಲ ನಾಯಕ್ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಕೋರಿ ರಾಜ್ಯ ವಕೀಲರ ಪರಿಷತ್ತಿಗೆ ದೂರು ನೀಡಿದ್ದರು. ಈ ದೂರಿಗೆ ಸಂಬಂಧಿಸಿದಂತೆ ರಾಜ್ಯ ವಕೀಲರ ಪರಿಷತ್ತು ಸೂಕ್ತ ಕ್ರಮ ಜರುಗಿಸದ ಹಿನ್ನೆಲೆಯಲ್ಲಿ ದೂರುದಾರರು ಭಾರತೀಯ ವಕೀಲರ ಪರಿಷತ್ತಿಗೆ ಮೇಲ್ಮನವಿ ಸಲ್ಲಿಸಿದ್ದರು.