ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಚೇರಿಯಿಂದ ಪತ್ರಕರ್ತರಿಗೆ ಲಂಚ ನೀಡಿದ ವರದಿಯ ಬಗ್ಗೆ ತನಿಖೆಯಾಗಬೇಕು’ ಎಂದು ರಾಜ್ಯ ಕಾಂಗ್ರೆಸ್ ಒತ್ತಾಯಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ”ಮುಖ್ಯಮಂತ್ರಿ ಕಚೇರಿಯಿಂದ ಪತ್ರಕರ್ತರಿಗೆ ಹಬ್ಬದ ನೆಪದಲ್ಲಿ 2.5 ಲಕ್ಷ ರೂ. ಉಡುಗೊರೆ ನೀಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. 40% ಕಮಿಷನ್‌ನಲ್ಲಿ ನೀಡಿದ ಹಣವೇ?
40% ಕಮಿಷನ್ ಕರ್ಮಕಾಂಡಗಳನ್ನು ಮುಚ್ಚಿಡಲು ನೀಡಿದ ಲಂಚವೇ? ಮಾಧ್ಯಮಗಳನ್ನು ಖರೀದಿಸುವ ವ್ಯವಹಾರವೇ? ಆ ‘ಲಂಚ’ದ ಬಗ್ಗೆ ತಾವು ಜನತೆಗೆ ಉತ್ತರಿಸಬೇಕು” ಎಂದು ಒತ್ತಾಯಿಸಿದೆ.
ಪತ್ರಕರ್ತರಿಗೆ ನೀಡಿದ ಆ ಹಣ ಯಾರದ್ದು? ಸರ್ಕಾರದ್ದೇ? ಬಿಜೆಪಿ ಪಕ್ಷದ್ದೇ? ಮುಖ್ಯಮಂತ್ರಿಗಳದ್ದೇ? 40% ಕಮಿಷನ್ ಆ ಹಣದ ಮೂಲವೇ? ಪಡೆದ ಲಂಚವು ಕೊಡುವ ಲಂಚವಾಗಿ ಮಾರ್ಪಟ್ಟಿದೆಯೇ? ನಿಮ್ಮ ಕಚೇರಿಯಲ್ಲಿ ನಡೆದಿದ್ದಕ್ಕೆ ನೀವೇ ಉತ್ತರದಾಯಿ, ತನಿಖೆಯಾಗಬೇಕಲ್ಲವೇ? ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನೆ ಮಾಡಿದೆ.
ಸಿಎಂ ಕಚೇರಿ ನೀಡಿದ 2.5 ಲಕ್ಷ ರೂ. ಲಂಚವನ್ನು ವಾಪಸ್ ಮಾಡುವ ಮೂಲಕ ಪತ್ರಿಕಾಧರ್ಮವನ್ನು ಎತ್ತಿ ಹಿಡಿದಿದ್ದಾರೆ ಎಂಬುದು ತಿಳಿದುಬಂದಿದೆ. ಕರ್ನಾಟಕದ ಪತ್ರಕರ್ತರು ಪತ್ರಿಕಾಧರ್ಮದ ಪಾವಿತ್ರ್ಯತೆಗೆ ಧಕ್ಕೆ ತರುವುದಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಪತ್ರಕರ್ತರಿಗೆ ಲಂಚ ನೀಡಿದ್ದೇಕೆ ಎಂಬುದನ್ನು ಸಿಎಂ ಉತ್ತರಿಸಬೇಕು ಎಂದು ತಿಳಿಸಿದೆ.