ದಾವಣಗೆರೆ: ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರ ಬದ್ಧವಾಗಿದ್ದು, ಆದಷ್ಟು ಬೇಗ ನೌಕರರಿಗೆ ಸಿಹಿ ಸುದ್ದಿ ಕೊಡುತ್ತೇನೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಮತ್ತೊಮ್ಮೆ ಭರವಸೆ ನೀಡಿದ್ದಾರೆ.
ಶುಕ್ರವಾರ ದಾವಣಗೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಲು ತೆರಳಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ವಾಯವ್ಯ ಕರ್ನಾಟಕ ಸಾರಿಗೆ ನಿಗಮ (NWKRTC), ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ (KKRTC) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ನಿಗಮಗಳ ನೌಕರರಿಗೆ ಕಳೆದ ಸುಮಾರು ಏಳು ವರ್ಷದಿಂದ ವೇತನ ಪರಿಷ್ಕರಣೆ ಆಗಿಲ್ಲ. ಹೀಗಾಗಿ ಆ ಬಗ್ಗೆ ಶೀಘ್ರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಇನ್ನು 6ನೇ ವೇತನ ಆಯೋಗದ ಮಾದರಿಯಲ್ಲಿ ಸಾರಿಗೆ ನೌಕರರಿಗೆ ವೇತನ ಕೊಡುವ ಬಗ್ಗೆ ಅತೀ ಶೀಘ್ರದಲ್ಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇನೆ. ಈ ಮೂಲಕ ಆದಷ್ಟೂ ಬೇಗ ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಮಾಡುತ್ತೇನೆ ಎಂದು ಹೇಳಿದರು.
ಕಳೆದ 2021ರ ಏಪ್ರಿಲ್‌ನಲ್ಲಿ ನಡೆದ ಮುಷ್ಕರದ ವೇಳೆ ಹಲವರನ್ನು ಅದರಲ್ಲೂ ಹೆಚ್ಚಾಗಿ ಬಿಎಂಟಿಸಿಯಲ್ಲಿ ವಜಾ ಮಾಡಲಾಗಿದೆ. ಈ ಬಗ್ಗೆಯೂ ಅಂತಿಮ ನಿರ್ಧಾರ ತೆಗೆದುಕೊಂಡು ವಜಾ ಗೊಂಡಿರುವ ಎಲ್ಲ ನೌಕರರನ್ನು ಕಾನೂನಿನ ಚೌಕಟ್ಟಿನೊಳಗೆ ಮರು ನೇಮಕ ಮಾಡಿಕೊಳ್ಳುತ್ತೇನೆ. ಇನ್ನು ಕೆಎಸ್ಆರ್ಟಿಸಿ ಮತ್ತು ಇತರ ನಿಗಮಗಳ ಹಲವು ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಸರ್ಕಾರವೇ ಪರಿಹಾರ ಒದಗಿಸಲು ಯೋಜನೆ ರೂಪಿಸುತ್ತಿದೆ ಎಂದು ತಿಳಿಸಿದರು.
2016ರ ನಂತರ ಸಾರಿಗೆ ನಿಗಮಗಳಲ್ಲಿ ವೇತನ ಪರಿಷ್ಕರಣೆ ಆಗಿಲ್ಲ. ಇಲಾಖೆಯಲ್ಲಿ ಹಲವು ಸಮಸ್ಯೆಗಳಿವೆ. ಬಸ್ ದರ ಹೆಚ್ಚಳ ಮಾಡುವ ಬಗ್ಗೆಯೂ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಆದಷ್ಟು ಬೇಗ ವೇತನ ಪರಿಷ್ಕರಣೆ ವಿಚಾರ ಇತ್ಯರ್ಥ ಮಾಡುತ್ತೇನೆ. ಇನ್ನು ನೌಕರರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದರು.
ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸ್ವಾಮೀಜಿ: ಇತ್ತ ಸಾರಿಗೆ ನೌಕರರ ಕೂಟ ಸರ್ಕಾರ ಮತ್ತು ನಾಲ್ಕೂ ನಿಗಮಗಳ ಆಡಳಿತ ಮಂಡಳಿಗಳು ಕೊಟ್ಟಿರುವ ಭರವಸೆಯನ್ನು ಇನ್ನೂ ಈಡೇರಿಸಿಲ್ಲ ಎಂದು ರಾಜ್ಯಾದ್ಯಂತ ಬೃಹತ್ ಸೈಕಲ್ ಜಾಥಾ ಹಮ್ಮಿಕೊಂಡಿದ್ದು, ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಒತ್ತಾಯಿಸಿ ಮನವಿ ಸಲ್ಲಿಸುತ್ತಿದೆ.
ಅಲ್ಲದೆ ಕಳೆದ ಇದೇ ಅ. 27ರಂದು ಕಲಬುರಗಿಯಲ್ಲಿ ಸಾರಿಗೆ ನೌಕರರ ಮಹಾ ಸಮಾವೇಶ ಮಾಡಿದ್ದು, ಈ ಸಮಾವೇಶದಲ್ಲಿ ಸುಮಾರು ಮೂರು ಸಾವಿರ ನೌಕರರು ಭಾಗವಹಿಸಿದ್ದರು. ಜತೆಗೆ ಸ್ವಾಮೀಜಿಗಳು ವಿವಿಧ ಸಂಘಟನೆಗಳ ಪ್ರಮುಖರು ಆಗಮಿಸಿ ಸಮಾವೇಶ ಯಶಸ್ವಿಗೊಳಿಸಿದ್ದಾರೆ. ಇನ್ನು ಮುಂದಿನ ವಿಧಾನಸಭೆ ಚುನಾವಣೆ ಬರುವುದರೊಳಗಾಗಿ ನೌಕರರ ವೇತನ ಪರಿಷ್ಕರಣೆಯಾಗಬೇಕು ಎಂದು ಎಲ್ಲರೂ ಒಕ್ಕೋರಲಿನಿಂದ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಎಲ್ಲದರ ಬಿಸಿ ಈಗಾಗಲೇ ಸರ್ಕಾರ ಮತ್ತು ಸಾರಿಗೆ ಸಚಿವರಿಗೆ ತಟ್ಟಿದ್ದು ತಮ್ಮ ಭವಿಷ್ಯ ಮುಂದಿನ ಚುನಾವಣೆಯಲ್ಲಿ ಡೋಲಾಯಮಯವಾಗುತ್ತದೆ ಎಂಬ ನಡುಕವು ಶುರುವಾಗಿದೆ. ಹೀಗಾಗಿ ನಿನ್ನೆ ದಾವಣಗೆರೆಯಲ್ಲಿ ನೌಕರರ ಸಮಸ್ಯೆ ಬಗೆಹರಿಸುತ್ತೇನೆ ಎಂಬ ಭರವಸೆಯನ್ನು ಸಚಿವರು ನೀಡಿದ್ದಾರೆ.
ಈ ಹಿಂದಿನಿಂದಲೂ ಅಂದರೆ ಕಳೆದ 17 ತಿಂಗಳಿನಿಂದಲೂ ಸರ್ಕಾರ ಈ ಭರವಸೆಯನ್ನು ಕೊಡುತ್ತಲೇ ಬಂದಿದೆ. ಆದರೆ ತಾನೇ ಕೊಟ್ಟ ಲಿಖಿತ ಭರವಸೆಯನ್ನು ಈಡೇರಿಸುವಲ್ಲಿ ಹಿಂದೆ ಸರಿದಿರುವುದಕ್ಕೆ ಸಮಾವೇಶದಲ್ಲಿ ಸ್ವಾಮೀಜಿ ಕೂಡ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರವೇ ತಾನೆ ಕೊಟ್ಟ ಭರವಸೆ ಈಡೇರಿಸದಿದ್ದರೆ ಮತ್ತಾರನ್ನು ಕೇಳ ಬೇಕು ಎಂದು ಕಿಡಿಕಾರಿದ್ದರು. ಇದನ್ನು ಕೂಡ ಸರ್ಕಾರ ಗಮನಿಸಿದ್ದು, ಅತೀ ಶೀಘ್ರದಲ್ಲೇ ವೇತನ ಪರಿಷ್ಕರಣೆ ಮಾಡಲಿದೆ ಎನ್ನಬಹುದು.