ಪ್ರಧಾನಮಂತ್ರಿ ಕಾರ್ಯಕ್ರಮಕ್ಕೆ ಬಿಎಸ್‌ಬಿಪಿ ಸ್ಥಳ ಪರಿಶೀಲನೆ ನಡೆಸಿದ ಸಚಿವ ವಿ.ಸೋಮಣ್ಣ
ಬೆಂಗಳೂರು ಗ್ರಾಮಾಂತರ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ‘ಪ್ರಗತಿಯ ಪ್ರತಿಮೆ’ ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನವೆಂಬರ್ 11 ರಂದು ಲೋಕಾರ್ಪಣೆಗೊಳಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಸಲು ಗುರುತಿಸಲಾಗಿರುವ ವಿಮಾನ ನಿಲ್ದಾಣದ ಪಕ್ಕದ ಬಿಎಸ್‍ಬಿಪಿ ಸ್ಥಳವನ್ನು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಇಂದು ಪರಿಶೀಲನೆ ನಡೆಸಿದರು.
ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ವ್ಯಾಪ್ತಿಯ ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವತಿಯಿಂದ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದಲ್ಲಿ 418 ಎಕರೆ ಪ್ರದೇಶದಲ್ಲಿ ಅಭಿವೃದ್ಧಿ ಪಡಿಸಿರುವ ಬೆಂಗಳೂರು ಸಿಗ್ನೇಚರ್ ಬಿಜಿನೆಸ್ ಪಾರ್ಕ್(ಬಿಎಸ್‍ಬಿಪಿ) ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪಾಲ್ಗೊಳ್ಳಲಿರುವ ಸಾರ್ವಜನಿಕ ಸಭೆ ಕಾರ್ಯಕ್ರಮದ ವೇದಿಕೆ ನಿರ್ಮಾಣ ಮಾಡಲಾಗುವುದು ಎಂದು ಇದೇ ವೇಳೆ ಮಾಧ್ಯಮದವರಿಗೆ ತಿಳಿಸಿದರು.
ಅಂದಾಜು ಎರಡು ಲಕ್ಷಕ್ಕೂ ಅಧಿಕ ಜನರು ಭಾಗವಹಿಸಲಿರುವುದರಿಂದ ಅಗತ್ಯ ಸಿದ್ಧತೆ ಕೈಗೊಳ್ಳಬೇಕು. ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಭಾಗಿಯಾಗಲಿದ್ದು, ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ತೊಂದರೆಯಾಗದಂತೆ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಬೇಕು. ಐತಿಹಾಸಿಕ ಕಾರ್ಯಕ್ರಮಕ್ಕೆ ಸೂಕ್ತ ಭದ್ರತೆ ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಕೆಂಪೇಗೌಡ ಅಂತಾರಾಷ್ಟಿಯ ವಿಮಾನ ನಿಲ್ದಾಣದ ಬಳಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಮತ್ತು ಥೀಮ್ ಪಾರ್ಕ್ ಸ್ಥಾಪನೆಗಾಗಿ ಸರ್ಕಾರವು 84 ಕೋಟಿ ರೂ. ವಿನಿಯೋಗಿಸುತ್ತಿದೆ. ಹೊರ ದೇಶದಿಂದ ಬರುವ ವಿದೇಶಿ ಪ್ರವಾಸಿಗರಿಗೆ ಮತ್ತು ನಮ್ಮ ಮುಂದಿನ ಪೀಳಿಗೆಗೆ ನಾಡಪ್ರಭು ಕೆಂಪೇಗೌಡರ ಆಶಯಗಳನ್ನು ಸಂಕೇತಿಸಲು “ಪ್ರಗತಿಯ ಪ್ರತಿಮೆ” ಪ್ರತಿರೂಪವಾಗಲಿದೆ ಎಂದರು.
ಬೆಂಗಳೂರು ಜಾಗತಿಕ ಮಟ್ಟದಲ್ಲಿ ಇಂದು ಹೆಸರು ಗಳಿಸಲು ಕೆಂಪೇಗೌಡರೇ ಮೂಲಕಾರಣ. ದೂರದೃಷ್ಟಿ ಹೊಂದಿದ ನಾಯಕರಾಗಿದ್ದ ಕೆಂಪೇಗೌಡ ಅವರಿಂದ ಬೆಂಗಳೂರು ಸುರಕ್ಷಿತ ಮತ್ತು ಸುಭದ್ರವಾಗಿದೆ. ಕೆಂಪೇಗೌಡರು ಎಲ್ಲಾ ಸಮುದಾಯದ ಏಳಿಗೆಗಾಗಿ ಪೇಟೆಗಳನ್ನು ನಿರ್ಮಿಸಿದ್ದ ಜಾತ್ಯತೀತ ನಾಯಕ. ಅಂತಹ ಮಹಾಪುರುಷನ ನೆನಪನ್ನು ರಾಜ್ಯ ಸರಕಾರ ಅಜರಾಮರಗೊಳಿಸುತ್ತಿದೆ. 23 ಎಕರೆ ವಿಸ್ತೀರ್ಣದಲ್ಲಿ ಥೀಮ್ ಪಾರ್ಕ್, ನಾಡಪ್ರಭುವಿನ ಜೀವನ, ಸಂದೇಶಗಳ ಪಡಿಯಚ್ಚು ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.
ಸರ್ಕಾರದ ಅಪರ ಕಾರ್ಯದರ್ಶಿ ಗೌರವ್‌ಗುಪ್ತ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳದಲ್ಲಿ ಉಪಸ್ಥಿತರಿದ್ದರು.