KSRTC: ಸಾರಿಗೆ ನೌಕರರಿಗೆ MASTER PAY SCALE ಏಕಿಲ್ಲ – ಬೂಟಾಟಿಕೆ ಮಾತು ಬಿಟ್ಟು ಸರಿ ಸಮಾನ ವೇತನಕ್ಕೆ ಆದ್ಯತೆ ನೀಡಿ…!
ಬೆಂಗಳೂರು: ಭಾರತ ಸರ್ಕಾರ ಮತ್ತು ಎಲ್ಲ ರಾಜ್ಯ ಸರ್ಕಾರದ ಇಲಾಖೆಗಳು ಮತ್ತು ನಿಗಮ ಮಂಡಳಿಗಳು ವೇತನಕ್ಕೆ ಸಂಬಂಧಿಸಿದಂತೆ ಮುಖ್ಯ ವೇತನ ಶ್ರೇಣಿ (MASTER PAY SCALE) ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ, KSRTC ಯಂತಹ ದೊಡ್ಡ ಸಂಸ್ಥೆಯಲ್ಲಿ ಅದನ್ನು ಏಕೆ ಅಳವಡಿಸಲಾಗಿಲ್ಲ ಎಂದು ನೌಕರರು ಈಗ ಮತ್ತು ಹಿಂದೆ ಅಧಿಕಾರ ಅನುಭವಿಸಿರುವ ಸಚಿವರು ಮತ್ತು ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ.
ಒಂದು ಲಕ್ಷಕ್ಕೂ ಹೆಚ್ಚು ನೌಕರರನ್ನು ಹೊಂದಿರುವ KSRTC ಮಾಸ್ಟರ್ ಪೇ ಸ್ಕೇಲ್ ವ್ಯವಸ್ಥೆಯನ್ನು ಏಕೆ ಅಳವಡಿಸಿಕೊಂಡಿಲ್ಲ? ಇಲ್ಲಿಯವರೆಗೆ ನೇಮಕಗೊಂಡಿರುವ ವ್ಯವಸ್ಥಾಪಕ ನಿರ್ದೇಶಕರು ಈ ವ್ಯವಸ್ಥೆ ಅಳವಡಿಸಿರುವುದನ್ನು ಗಮನಿಸಿಲ್ಲವೇ? ಇದು ಗಮನಕ್ಕೆ ಬಂದಿದ್ದರೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಕೇಳುತ್ತಿದ್ದಾರೆ.
ಇನ್ನು ಈಗಿನ ವ್ಯವಸ್ಥಾಪಕ ನಿರ್ದೇಶಕರು ಮುಖ್ಯ ವೇತನ ಶ್ರೇಣಿಯನ್ನು ಅಳವಡಿಸಿಕೊಳ್ಳದಿರುವುದನ್ನು ಹೇಗೆ ಸಮರ್ಥಿಸಿಕೊಳ್ಳಬಹುದು? ಮುಖ್ಯ ವೇತನ ಶ್ರೇಣಿ ಅಳವಡಿಸಿಕೊಳ್ಳದಿರುವುದರ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸುತ್ತಿದ್ದಾರೆ.
ಆದರೆ, ಇದಕ್ಕೆ ಉತ್ತರ ಕೊಡಬೇಕಾದ ಅಧಿಕಾರಿಗಳಲ್ಲಿ ಬಹುತೇಕರು ವರ್ಗಾವಣೆ ಇಲ್ಲ ನಿವೃತ್ತಿ ಹೊಂದಿದ್ದಾರೆ. ಇನ್ನು ಇರುವ ಅಧಿಕಾರಿಗಳು ನಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಕೆಲ ಅಧಿಕಾರಿಗಳು ಲಂಚಬಾಕರಾಗಿದ್ದು, ಸುಲಿಗೆ ಮಾಡುವುದರಲ್ಲೇ ನಿರತರಾಗಿದ್ದಾರೆ. ಹೀಗಿರುವಾಗ ಸಂಸ್ಥೆ ಮತ್ತು ನೌಕರರ ಬಗ್ಗೆ ಕಾಳಜಿಯುಳ್ಳ ಅಧಿಕಾರಿಗಳು ಬಂದರೂ ಅವರ ಬಾಯಿ ಮುಚ್ಚಿಸುವ ಕೆಲಸವನ್ನು ಈ ಲಂಚಕೋರ ಅಧಿಕಾರಿಗಳು ಮಾಡುತ್ತಿರುತ್ತಾರೆ.
ಇನ್ನು ಪ್ರಸ್ತುತ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಇರುವ ವ್ಯವಸ್ಥಾಪಕ ನಿರ್ದೇಶಕರು ಕಾನೂನಾತ್ಮಕವಾಗಿ ನೌಕರರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಶ್ರಮಿಸುತ್ತಿದ್ದಾರೆ. ಅಲ್ಲದೆ ತಮ್ಮ ವ್ಯಾಪ್ತಿಗೆ ಬರುವ ಅಧಿಕಾರವನ್ನು ಚಲಾಯಿಸಿ ನೌಕರರಿಗೆ ಈಗಗಾಲೇ ಸಾಕಷ್ಟು ಸೌಲಭ್ಯ ಕಲ್ಪಿಸಿರುವುದು ಪ್ರತಿಯೊಬ್ಬ ನೌಕರರನಿಗೂ ತಿಳಿದಿದೆ.
ಅದರಂತೆ 4ವರ್ಷಕ್ಕೆ ಒಮ್ಮೆ ಮಾಡುತ್ತಿರುವ ವೇತನ ಪರಿಷ್ಕರಣೆ ಪದ್ಧತಿ ಬಿಟ್ಟು ಸರ್ಕಾರಿ ನೌಕರರಂತೆ ಅಥವಾ ಇತರ ನಿಗಮಗಳಲ್ಲಿ ಇರುವಂತೆ ಮುಖ್ಯ ವೇತನ ಶ್ರೇಣಿಯಡಿ ನೌಕರರಿಗೆ ವೇತನ ನೀಡಬೇಕು ಎಂಬ ನಿಯಮವನ್ನು ಅಳವಡಿಸಿಕೊಳ್ಳುವ ಬಗ್ಗೆ ಎಂಡಿಗಳು ತಿಳಿಸಿ ಅದನ್ನು ಜಾರಿಗೆ ತರುವ ಬಗ್ಗೆ ಯೋಜನೆ ರೂಪಿಸುವಂತೆ ಅವರ ಅಧೀನ ಅಧಿಕಾರಿಗಳಿಗೆ ಸೂಚಿಸಿದರೆ ಅಂಥ ಎಂಡಿಗಳನ್ನು ರಜೆ ಮೇಲೆ ಕಳುಹಿಸುವ ಕೆಲಸವನ್ನು ಮಾಡಿರುವುದು ಕೂಡ ನೌಕರರಿಗೆ ತಿಳಿಯದಿರದು.
ಇಂಥ ಪರಿಸ್ಥಿತಿಯಲ್ಲಿ ನೌಕರರು ನೀಡುತ್ತಿರುವ ದೇಣಿಗೆ ಹಣದಿಂದಲೇ ತಮಗೆ ಬೇಕಾದ ರೀತಿಯ ಕಚೇರಿ ಅನುಕೂಲತೆಗಳನ್ನು ಮಾಡಿಕೊಂಡಿರುವ ಕೆಲ ಸಂಘಟನೆಗಳು ನೌಕರರಿಗೆ ಅನುಕೂಲಕರವಾದ ಯೋಜನೆಯನ್ನು ಜಾರಿಗೊಳಿಸಲು ಹೋರಾಟ ಮಾಡಬೇಕು. ಆದರೆ ಇಲ್ಲಿ ನೌಕರರು ಏನಾದರೇನು ನಮಗೆ ಕೆಲ ಲಂಚಬಾಕ ಅಧಿಕಾರಿಗಳು ಮತ್ತು ಕೆಲ ನೀಚ ರಾಜಕೀಯ ಮಾಡುತ್ತಿರುವ ಮಂತ್ರಿಗಳು ನೀಡುವ ಕಪ್ಪುಹಣ ಬಂದು ಸೇರಿದರೆ ಸಾಕು ಎನ್ನುವ ಮನಸ್ಥಿತಿಯಲ್ಲಿ ನೌಕರರಿಗೆ ಸಿಗಬೇಕಾದ ಸೌಲಭ್ಯಗಳು ಇನ್ನೂ ಮರೀಚಿಕೆಯಾಗಿಯೇ ಉಳಿಸಿದ್ದಾರೆ. ಇದು ದುರಂತವೇ ಸರಿ.
ಇನ್ನು ಈ ಹಿಂದಿನಿಂದಲೂ ಸಾರಿಗೆ ನೌಕರರ ಏಳಿಗಾಗಿ ಶ್ರಮಿಸುತ್ತಿದ್ದೇವೆ ಎಂದು ಹೇಳಿಕೊಳ್ಳುವ ಇಂಥ ಸಂಘಟನೆಗಳು ಏನೇನು ಅನುಕೂಲ ಮಾಡಿಕೊಟ್ಟಿದ್ದೇವೆ ಎಂಬ ಪಟ್ಟಿಯನ್ನಾದರೂ ಬಿಡುಗಡೆ ಮಾಡಬೇಕಲ್ಲವೇ? ಅದನ್ನು ಬಿಟ್ಟು ನಾವು ಕೇಳಿದ್ದೆವು ಆದರೆ ಸರ್ಕಾರ ಮತ್ತು ಆಡಳಿತ ಮಂಡಳಿ ನಮ್ಮನ್ನು ದೂರವಿಟ್ಟು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿತು ಎಂದು ಜಾರಿಕೊಳ್ಳುವ ಉತ್ತರ ನೀಡುವ ನೀಚತನವನ್ನು ಏಕೆ ತೋರಿಸುತ್ತಿವೆ?
ನಿಜವಾಗಲೂ ನೌಕರರಿಗೆ ಒಳ್ಳೆಯದನ್ನು ಮಾಡಬೇಕು ಎಂಬುವುದೆ ಈ ಸಮಘಟನೆಗಳ ನಿಲುವಾಗಿದ್ದರೆ, ಸರ್ಕಾರ ಮತ್ತ ಆಡಳಿತ ಮಂಡಳಿ ತೆಗೆದುಕೊಂಡ ಏಕಕ್ಷೀಯ ನಿರ್ಧಾರವನ್ನು ಏಕೆ ವಿರೋಧೀಸಿ ರಸ್ತೆಗಿಳಿಯಲ್ಲಿಲ್ಲ. ಅಂದರೆ ಇವರಿಗೆ ಬರಬೇಕಿರುವುದು ಸಿಕ್ಕಿತು. ಅಂದಮೇಲೆ ನಾವು ನೌಕರರ ಪರ ಏಕೆ ಹೋರಾಡಬೇಕು ಎಂದು ಆ ಹೇಸಿಗೆಯನ್ನು ಶೂಟ್ಕೇಸ್ನಲ್ಲಿ ತೆಗೆದುಕೊಂಡು ಹೋಗಿ ನೌಕರರನ್ನು ಬೀದಿಪಾಲು ಮಾಡಿದವೇ?
ಈಗ ಇದು ಕಣ್ಣ ಮುಂದೆ ಇದ್ದರೂ ಇನ್ನು ವಾಮ ಮಾರ್ಗವನ್ನು ಅನುಸರಿಸಿ ನೌಕರರ ದಿಕ್ಕು ತಪ್ಪಿಸುವ ಹೇಳಿಕೆ ನೀಡುವುದು, ಮಾತೆತ್ತಿದರೆ ಸರ್ಕಾರ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿತು ಎನ್ನುವುದು. ಅಂದಮೇಲೆ ಈ ಸಂಘಟನೆಗಳ ಮಾತು ಸರ್ಕಾರ ಮತ್ತು ಆಡಳಿತ ಮಂಡಳಿಯಲ್ಲಿ ನಡೆಯೋದಿಲ್ಲ ಎಂದ ಮೇಲೆ ಇವುಗಳಿಗೆ ನೌಕರರು ಏಕೆ ದೇಣಿಗೆ ನೀಡಬೇಕು. ಇವುಗಳನ್ನು ಏಕೆ ಬೆಳಸಬೇಕು? ಅಲ್ಲವೇ?
ಇನ್ನು ನೌಕರರು ಕೊಟ್ಟ ದೇಣಿಗೆ ಹಣದಿಂದಲ್ಲೇ ಮೆರೆಯುತ್ತಿರುವ ಇವರು ಈಗಲಾದರೂ ನೌಕರರಿಗೆ ಅನುಕೂಲ ಮಾಡಿಕೊಡುವ ಹೇಳಿಕೆ ನೀಡುತ್ತಿದ್ದಾರೆಯೇ? ಇಲ್ಲ. ತಮ್ಮ ಅನುಕೂಲಕ್ಕೆ ತಕ್ಕ ಹೇಳಿಕೆ ನೀಡುತ್ತಿದ್ದಾರೆ. ಈ ಮೂಲಕ ಮತ್ತೆ ನೌಕರರನ್ನು ಯಾಮಾರಿಸುವ ಕೆಲಸ ಮಾಡುತ್ತಿದ್ದಾರೆ ಎಂದರೆ ಅದು ತಪ್ಪಾಗಲಾರದು. ಏಕೆಂದರೆ ಕಣ್ಣಮುಂದೆಯೇ ಎಲ್ಲ ನಡೆಯುತ್ತಿದೆ. ಅದನ್ನು ಯಾಮಾರಿಸುವ ಪ್ರಯತ್ನ ಮಾಡಿದರೆ ನೌಕರರು ಕುರುಡರೆ?
ಅಂದರೆ ಈಗಲೂ ಕೂಡ ನೌಕರರನ್ನು ಯಾಮಾರಿಸುವ ಹೇಳಿಕೆ ನೀಡುತ್ತಿದ್ದಾರೆ. ಇದನ್ನು ಸಮರ್ಥಿಸಿಕೊಳ್ಳಲು ಕೆಲ ಹಿಂಬಾಲಕ ಇದೇ ಸಾರಿಗೆ ನೌಕರರು ಈ ಹಿಂದಿನಿಂದಲೂ ನಮ್ಮ ಸಂಘಟನೆಗಳು ಮತ್ತು ಅವುಗಳ ಅಧ್ಯಕ್ಷರು ಮಾಡಿರುವುದೇ ಸರಿ ಎಂದು ಹೇಳಿಕೆ ನೀಡುತ್ತಿದ್ದಾರೆ. ಈ ಹೇಳಿಕೆಗಳನ್ನು ಕೇಳಿಕೊಂಡು ಕೂರುವುದಕ್ಕೆ ಈಗ ಇರುವ ನೌಕರರು ಬರಿ 5-9ನೇ ತರಗತಿಯನ್ನಷ್ಟೇ ಓದಿ ಕೆಲಸಕ್ಕೆ ಸೇರಿದ್ದಾರೆಯೇ? ಪದವಿ ಸ್ನಾತಕೋತ್ತರ ಪದವಿ ಪಡೆದವರು ಮತ್ತು ಕಾನೂನು ಅರಿವು ಹೊಂದಿರುವವರು ಇಲ್ಲವೇ?
ಹೀಗಾಗಿ ಇನ್ನಾದರೂ ಇಂಥ ಬೂಟಾಟಿಕೆ ಮಾತುಗಳನ್ನು ಬಿಟ್ಟು ನೌಕರರಿಗೆ ಇತರ ನಿಗಮ ಮಂಡಳಿಗಳು ಮತ್ತು ಸರ್ಕಾರಿ ನೌಕರರಿಗೆ ಇರುವಂತೆ ಸೌಲಭ್ಯ ಮತ್ತು ವೇತನ ಕಲ್ಪಿಸಿಕೊಡುವುದಕ್ಕೆ ಮುಂದಾಗಿ ನೌಕರರ ಋಣವನ್ನು ಈ ಮೂಲಕವಾದರೂ ಸ್ವಲ್ಪ ತೀರಿಸುವ ಪ್ರಯತ್ನ ಮಾಡಿ…