ಬೆಂಗಳೂರು: ಖ್ಯಾತ ನಟ ಡಾ. ಪುನೀತ್ ರಾಜ್‌ಕುಮಾರ್ ಅವರನ್ನು ರಾಜ್ಯ ಪ್ರವಾಸೋದ್ಯಮದ ಶಾಶ್ವತ ರಾಯಭಾರಿ ಎಂದು ಘೋಷಿಸಿ, ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಮೋಹನ್ ದಾಸರಿ, “ರಾಜ್ಯದ ಪ್ರವಾಸೋದ್ಯಮವು ಕಳೆದ ಹತ್ತಾರು ವರ್ಷಗಳಲ್ಲಿ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಬಹತೇಕ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯಗಳ ಕೊರೆತೆಯಿದೆ. ಪ್ರವಾಸಿ ತಾಣಗಳಿಗೆ ಜನರನ್ನು ಆಕರ್ಷಿಸಲು ಸರ್ಕಾರ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ.
ಹೀಗಾಗಿ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಪ್ರವಾಸಿ ತಾಣಗಳ ಅಭಿವೃದ್ಧಿ ಬಗ್ಗೆ ಅಪಾರ ಕಾಳಜಿ ಇದ್ದಿದ್ದರಿಂದ, ಅವರನ್ನು ಪ್ರವಾಸೋದ್ಯಮದ ಶಾಶ್ವತ ರಾಯಭಾರಿಯಾಗಿ ಘೋಷಿಸಬೇಕು. ಪುನೀತ್ ಸ್ಮರಣಾರ್ಥ ಪ್ರವಾಸೋದ್ಯಮ ಅಭಿವೃದ್ಧಿಗೆ ಕಾಲಕ್ಕೆ ತಕ್ಕಂತೆ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಸಿನಿಮಾ ʻಗಂಧದ ಗುಡಿʼ ಪರಿಸರ ಕಾಳಜಿ ಹೊಂದಿದೆ. ವಿಶೇಷವಾಗಿ ಮಕ್ಕಳು ಈ ಸಿನಿಮಾವನ್ನು ನೋಡಬೇಕಿದೆ. ಗಂಧದ ಗುಡಿ ವೀಕ್ಷಣೆಯಿಂದ ಮಕ್ಕಳಲ್ಲಿ ಕಾಡು ಹಾಗೂ ವನ್ಯಜೀವಿಗಳ ಮೇಲೆ ಬಗ್ಗೆ ಜ್ಞಾನ ಹೆಚ್ಚಾಗುತ್ತದೆ. ಆದ್ದರಿಂದ ಶಾಲಾ ಮಕ್ಕಳಿಗೆ ಗಂಧದ ಗುಡಿ ಸಿನಿಮಾವನ್ನು ಉಚಿತವಾಗಿ ತೋರಿಸಲು ಸರ್ಕಾರ ವ್ಯವಸ್ಥೆ ಕಲ್ಪಿಸಬೇಕು. ಆಗ ಮಾತ್ರ ನಟ ಪುನೀತ್ ರಾಜ್‌ಕುಮಾರ್ ಹಾಗೂ ಚಿತ್ರತಂಡದ ಶ್ರಮ ಸಾರ್ಥಕವಾಗುತ್ತದೆ” ಎಂದು ಮೋಹನ್ ದಾಸರಿ ಹೇಳಿದರು.