ಮುಂಬೈ: ಪೊಲೀಸ್ ಠಾಣೆಗಳಲ್ಲಿ ವಿಡಿಯೋ ರೆಕಾರ್ಡಿಂಗ್ ಮಾಡುವುದು ಅಪರಾದವಲ್ಲ ಎಂದು ಬಾಂಬೆ ಹೈ ಕೋರ್ಟ್ ಅಭಿಪ್ರಾಯಪಟ್ಟಿದೆ.
ಅಧಿಕೃತ ರಹಸ್ಯಗಳ ಕಾಯ್ದೆ (Official Secrets Act) ಅಡಿ ಪೊಲೀಸ್ ಠಾಣೆಗಳು ನಿಷೇಧಿತ ಪ್ರದೇಶಗಳಲ್ಲ, ಹೀಗಾಗಿ ಪೊಲೀಸ್ ಠಾಣೆಯೊಳಗೆ ವಿಡಿಯೋ ಚಿತ್ರೀಕರಣ ಮಾಡುವುದು ಅಪರಾಧವಲ್ಲ ಎಂದು ಹೈಕೋರ್ಟ್‌ನ ನಾಗ್ಪುರ ಪೀಠವು ಅಭಿಪ್ರಾಯಪಟ್ಟಿದೆ.
ಪೊಲೀಸ್ ಠಾಣೆಯೊಳಗೆ ವಿಡಿಯೋ ರೆಕಾರ್ಡಿಂಗ್ ಮಾಡಿದ್ದಕ್ಕಾಗಿ ಪೊಲೀಸರು ಅಧಿಕೃತ ರಹಸ್ಯಗಳ ಕಾಯ್ದೆ ಅಡಿ ದಾಖಲಿಸಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ರವೀಂದ್ರ ಉಪಾಧ್ಯಾಯ ಎಂಬುವರು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮನೀಶ್ ಪಿತಳೆ ಹಾಗೂ ನ್ಯಾಯಮೂರ್ತಿ ವಾಮ್ಲೀಕಿ ಮೆನೆಜಿಸ್ ಅವರಿದ್ದ ದ್ವಿಸದಸ್ಯ ಪೀಠ, ಅಧಿಕೃತ ರಹಸ್ಯಗಳ ಕಾಯ್ದೆ ವ್ಯಾಖ್ಯಾನದ ಪ್ರಕಾರ ಪೊಲೀಸ್ ಠಾಣೆ ನಿಷೇಧಿತ ಸ್ಥಳವಲ್ಲ. ಅಧಿಕೃತ ರಹಸ್ಯ ಕಾಯ್ದೆಯ ಸೆಕ್ಷನ್ 2(8) ರಲ್ಲಿ ವ್ಯಾಖ್ಯಾನಿಸಿರುವ ನಿಷೇಧಿತ ಸ್ಥಳ ವ್ಯಾಪ್ತಿಯಲ್ಲಿ ಪೊಲೀಸ್ ಠಾಣೆಯು ಬರುವುದಿಲ್ಲ.
ಹೀಗಾಗಿ ಅರ್ಜಿದಾರರ ವಿರುದ್ಧ ಈ ಕಾಯ್ದೆ ಅಡಿ ದಾಖಲಿಸಿರುವ ಎಫ್ಐಆರ್ ಸರಿಯಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೇ ಪೊಲೀಸರು ದಾಖಲಿಸಿದ್ದ ಎಫ್ಐಆರ್ ಅನ್ನು ರದ್ದುಪಡಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: 2018ರ ಮಾರ್ಚ್‌ನಲ್ಲಿ ರವೀಂದ್ರ ಉಪಾಧ್ಯಾಯ ಎಂಬುವವರು ನೆರೆ ಮನೆಯ ವ್ಯಕ್ತಿಯೊಂದಿಗಿನ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಪತ್ನಿಯೊಂದಿಗೆ ವಾದ್ರಾ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಈ ವೇಳೆ ನೆರೆ ಮನೆ ವ್ಯಕ್ತಿ ಕೂಡ ಪ್ರತಿ ದೂರು ದಾಖಲಿಸಿದ್ದರು.
ಈ ವೇಳೆ ಠಾಣೆಯಲ್ಲಿ ನಡೆಯುವ ಮಾತುಕತೆಯನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದರು. ಮೊಬೈಲ್ ನಲ್ಲಿ ಚಿತ್ರೀಕರಿಸುವುದು ತಿಳಿದ ಪೊಲೀಸರು ರವೀಂದ್ರ ವಿರುದ್ಧ ಅಧಿಕೃತ ರಹಸ್ಯಗಳ ಕಾಯ್ದೆ ಅಡಿ ಎಫ್ಐಆರ್ ದಾಖಲಿಸಿದ್ದರು.
ನಂತರ ಎಫ್ಐಆರ್ ಹಾಗೂ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ರವೀಂದ್ರ ಉಪಾಧ್ಯಾಯ ಹೈಕೋರ್ಟ್ ಮೆಟ್ಟಿಲೇರಿದ್ದರು.