ಮಾಲ್‌ನಲ್ಲಿ ಚಾಕೋಲೇಟ್ ಕದ್ದ ವಿಡಿಯೋ ವೈರಲ್ : ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ
ಕೋಲ್ಕತ್ತಾ: ಕಾಲೇಜು ವಿದ್ಯಾರ್ಥಿನಿಯೊಬ್ಬಳು ಮಾಲ್ ಒಂದರಲ್ಲಿ ಚಾಕೋಲೇಟ್ ಕದ್ದಿರುವ ವಿಡಿಯೋ ವೈರಲ್ ಆಗಿರುವುದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಪಶ್ಚಿಮ ಬಂಗಾಳದ ಅಲಿಪುರ್‌ದವಾರ್ ಜಿಲ್ಲೆಯಲ್ಲಿ ನಡೆದಿದೆ.
ಜೈಗಾಂವ್‌ನ ಶಾಪಿಂಗ್ ಮಾಲ್‌ನಲ್ಲಿ ಚಾಕೋಲೇಟ್ ಕಳವು ಮಾಡಿದ್ದಾಳೆ. ಈ ವೇಳೆ ಮಾಲ್‌ನ ಸಿಬ್ಬಂದಿ ಅದನ್ನು ಆಕೆಗೆ ಕಾಣದ ರೀತಿ ವಿಡಿಯೋ ಮಾಡಿಕೊಂಡಿದ್ದಾರೆ. ಬಳಿಕ ಆಕೆ ಮಾಲ್ ನಿಂದ ಹೊರಹೋಗಲು ಸಿದ್ಧಳಾಗುತ್ತಿದ್ದಂತೆ ಆಕೆಯನ್ನು ಹಿಡಿದುಕೊಂಡಿದ್ದಾರೆ.
ಬಳಿಕ ಮಾಲೀಕನ ಬಳಿಕೆ ಕರುಕೊಂಡು ಹೋಗಿದ್ದಾರೆ. ಈ ವೇಳ ಕಳವು ಮಾಡಿದ್ದನ್ನು ಮಾಲೀಕರ ಮುಂದೆ ತಪ್ಪಾಯಿತು ಎಂದು ಒಪ್ಪಿಕೊಂಡ ಆಕೆ ಅದಕ್ಕೆ ತಕ್ಕ ಬೆಲೆಯನ್ನು ಕಟ್ಟಿ ಕ್ಷಮೆ ಕೇಳಿ ಹೊರ ಬಂದಿದ್ದಾಳೆ.
ಈ ವೇಳೆ ದಯಮಾಡಿ ನೀವು ಮಾಡಿರುವ ವಿಡಿಯೋವನ್ನು ಎಲ್ಲಿಯೂ ಹಂಚಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾಳೆ. ಆದರೆ, ಆ ವೇಳೆ ಒಪ್ಪಿಕೊಂಡ ಅಂಗಡಿ ಮಾಲೀಕ ನಂತರ ವಿಡಿಯೋ ವನ್ನು ಸ್ಥಳೀಯವಾಗಿ ಹರಿಯ ಬಿಟ್ಟಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿಯ ಕುಟುಂಬದವರು ಆಕೆ ತಪ್ಪು ಮಾಡಿದ್ದಾಳೆ. ಆದರೆ ಆಕೆ ಸಿಕ್ಕಿ ಬಿದ್ದ ಬಳಿಕ ಚಾಕೋಲೇಟ್‌ಗೆ ಹಣವನ್ನು ಕಟ್ಟಿ ಕ್ಷೆಮೆ ಕೇಳಿ ಹೊರ ಬಂದಿದ್ದಾಳೆ. ಇದಾದ ಬಳಿಕವೂ ಆಕೆಯನ್ನು ನಿಂದಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ವಿಡಿಯೋ ವೈರಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಮಗಳನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟುವಂತಿತ್ತು.
ಘಟನೆಯ ಬಳಿಕ ಆಕೆ ತುಂಬಾ ಒತ್ತಡದಲ್ಲಿದ್ದಳು. ಇದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆ ವಿಡಿಯೋವನ್ನು ಏಕೆ ವೈರಲ್ ಮಾಡಬೇಕಿತ್ತು? ಆತ್ಮಹತ್ಯೆ ಮಾಡಿಕೊಂಡಿರುವ ಮಗಳನ್ನು ಮತ್ತೆ ಬದುಕಿಸಲು ಸಾಧ್ಯವೆ? ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆಯ ಬಳಿಕ ಕ್ರೋಧಗೊಂಡ ಜನರು ಸೋಮವಾರ ಶಾಪಿಂಗ್ ಮಾಲ್ ಮುಂದೆ ಜಮಾಯಿಸಿ, ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದರೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ.