ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ನೌಕರರನ್ನು ಬಕ್ರಾಗಳಾಗಿ ಮಾಡಿಕೊಂಡಿರುವ ಕೆಲ ಸಂಘಟನೆಗಳು ನೌಕರರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ಅದಕ್ಕೆ ನಿಗಮಗಳ ಕೆಲ ಭ್ರಷ್ಟ ಅಧಿಕಾರಿಗಳು ಕೂಡ ಸಾಥ್ ನೀಡುತ್ತಿದ್ದಾರೆ.
ಹೌದು! ಈ ಹಿಂದೆ ಎಸ್‌ಎಸ್‌ಎಲ್‌ಸಿಯೂ ಇಲ್ಲದ ಅಂದರೆ ಕೇವಲ ಹೆಬ್ಬೆಟ್ಟಿನ ಮಂದಿ (ಓದಲು ಬರೆಯಲು ಬರದಿದ್ದರು ತಮ್ಮ ಹೆಸರು ಬರೆಯಲು ಕಲಿತ ಅಥವಾ 6-7ನೇ ತರಗತಿ ಓದಿಕೊಂಡಿದ್ದವರು) ಚಾಲಕರಾಗಿ ನಿಗಮಗಳಲ್ಲಿ ಸೇರಿಕೊಂಡಿದ್ದರು. ಹೀಗಾಗಿ ಅವರಿಗೆ ನಿಮ್ಮ ಪರ ಇದ್ದೇವೆ ಎಂದು ಹೇಳಿಕೊಂಡು ಅವರಿಂದ ತಿಂಗಳು ತಿಂಗಳು ಸಂಘಟನೆಯನ್ನು ಬೆಳೆಸಬೇಕಾದರೆ ಇಂತಿಷ್ಟು ನೀವು ಕೊಡಲೇ ಬೇಕು ಎಂದು ವೇತನದಲ್ಲೇ ಕಡಿತವಾಗುವಂತೆ ಮಾಡಿಕೊಂಡಿದ್ದರು (ಈಗ ಅದನ್ನು ಕೆಲವರು ಹಿಂಪಡೆದಿದ್ದಾರೆ).
ಆದರೆ, ನೌಕರರಿಗೆ ಸೌಲಭ್ಯ ಒದಗಿಸಿಕೊಡಬೇಕಾದ ಈ ಸಂಘಟನೆಗಳು ನೌಕರರನ್ನೇ ಸುಲಿಗೆ ಮಾಡುವ ಜತೆಗೆ ಕೆಲ ಭಂಡ, ಭ್ರಷ್ಟ ಅಧಿಕಾರಿಗಳ ಜತೆ ಶಾಮೀಲಾಗಿ ನೌಕರರಿಗೆ ವಂಚಿಸಿಕೊಂಡು ಈಗಲೂ ಬರುತ್ತಿದ್ದಾರೆ. ಅಂದರೆ ನೌಕರರಿಗೆ ಒಳ್ಳೆ ವೇತನ, ನಿವೃತ್ತರಾದವರೆಗೆ ಒಳ್ಳೆ ಪಿಂಚಣಿ ಕೊಡಿಸುವ ಬದಲು ತಮ್ಮ ಜೇಬು ತುಂಬಿಸಿಕೊಂಡು ವಂಚಿಸಿದ್ದಾರೆ. ಇದನ್ನು ಬಿಡಿಸಿ ಹೇಳಬೇಕಿಲ್ಲ. ಕಾರಣ ನಿವೃತ್ತ ನೌಕರರು ಮತ್ತು ಹಾಲಿ ದುಡಿಯುತ್ತಿರುವ ನೌಕರರ ಸ್ಥಿತಿ ನೋಡಿದರೆ ತಿಳಿಯುತ್ತದೆ.
ಇನ್ನು ಇಷ್ಟೆಲ್ಲ ನೌಕರರಿಗೆ ಉಂಡೆ ನಾಮ ಹಾಕಿಯೂ ನಾವು ಅವರಿಗೆ ಒಳ್ಳೆಯದನ್ನೇ ಮಾಡುತ್ತಿದ್ದೇವೆ ಎಂಬ ಹೇಳಿಕೆ, ಜತೆಗೆ ನಾವು ಅನುಕೂಲ ಮಾಡಿಕೊಡಬೇಕು ಎಂದೇ ಹೋರಾಟ ಮಾಡಿದ್ದೆವು ಆದರೆ ಸರ್ಕಾರ ನಮ್ಮ ಹೋರಾಟವನ್ನು ಕಡೆಗಣಿಸಿತು ಎಂದು ನಾಚಿಗೆ ಬಿಟ್ಟು ಹೇಳಿಕೆ ನೀಡುತ್ತಿದ್ದಾರೆ.
ಅಂದರೆ, ಇವರಿಗೆ ನೌಕರರ ಬಗೆಗಿನ ಕಾಳಜಿಗಿಂತ ತಮ್ಮ ಜೇಬು ತುಂಬಿಸಿಕೊಳ್ಳುವುದೇ ಮುಖ್ಯ ಎಂಬಂತಾಯಿತು. ಹೀಗಾದರೆ ಏಕೆ ತಿಂಗಳಿಗೆ ಇಂತಿಷ್ಟು ಎಂದು ಸಂಘಟನೆಗಳನ್ನು ಬೆಳೆಸಲು ದೇಣಿಗೆ ನೀಡಬೇಕು. ಇವರು ನೌಕರರ ಹಿತ ಕಾಯಲು ನಾಲಾಯಕ್ ಎಂದಮೇಲೆ ಇವರಿಂದ ಮೂರು ಕಾಸಿನ ಪ್ರಯೋಜನವೂ ನೌಕರರಿಗೆ ಇಲ್ಲ ಎಂದ ಮೇಲೆ ಇವರ ಹಿಂದೆ ಏಕೆ ಹೋಗಬೇಕು?
ಇನ್ನು ಈ ನಾಲಾಯಕ್ ಕೆಲ ಸಂಘಟನೆಳು ಮತ್ತು ಅವುಗಳು ಪದಾಧಿಕಾರಿಗಳು ದಾರಿ ತಪ್ಪಿಸುವ ಹೇಳಿಕೆ ನೀಡಿ, ಮಾಧ್ಯಮಗಳ ಕ್ಯಾಮರಾ ಮುಂದೆ ಮೊಸಳೆ ಕಣ್ಣೀರು ಸುರಿಸಿ ತಮ್ಮ ಜೇಬು ತುಂಬಿಸಿಕೊಂಡು ಸರ್ಕಾರ ಮತ್ತು ನಿಗಮಗಳ ಕೆಲ ಭ್ರಷ್ಟ ಅಧಿಕಾರಿಗಳ ಜತೆ ಕೈ ಜೋಡಿಸಿ ನೌಕರರು ಬೀದಿಗೆ ಬೀಳುವಂತೆ ಮಾಡಿರುವ ಇಂಥ ನೀಚ ಸಂಘಟನೆಗಳು ಬೇಕೆ?
ಹೀಗಾಗಿ ಈಗಲಾದರೂ ಇವುಗಳನ್ನು ದೂರವಿಟ್ಟು ನಿಮ್ಮ ಬೇಡಿಕೆಗಳನ್ನು ಈಡೇರಿಕೊಳ್ಳುವತ್ತ ಮನಸ್ಸು ಮಾಡಿ. ಇಲ್ಲವೆಂದರೆ ನೀವು ಈ ಸಂಘಟನೆಗಳನ್ನು ನಂಬಿಕೊಂಡರೆ ಇನ್ನಷ್ಟು ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಂಡಂತೆಯೇ…
.………..ಮುಂದುವರಿಯುವುದು.