ಕೊಪ್ಪಳ: ಪ್ರಸ್ತುತ ರಾಜ್ಯ ಸೇರಿದಂತೆ ಇಡೀ ಪ್ರಪಂಚದಲ್ಲೇ ಮುಂಚೂಣಿಯಲ್ಲಿರುವ ಮಾಧ್ಯಮವೆಂದರೆ ಅದು ಡಿಜಿಟಲ್ ಮೀಡಿಯಾ ಎಂದು ಹಿರಿಯ ಪತ್ರಕರ್ತ, ನಟ, ನಿರ್ದೇಶಕ ಗೌರೀಶ್ ಅಕ್ಕಿ ಹೇಳಿದ್ದಾರೆ.
ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗ-ಐಕ್ಯೂಎಸಿ ಅಡಿಯಲ್ಲಿ ಹಮ್ಮಿಕೊಂಡಿದ್ದ ಸಿನಿಮಾ-ಮಾಧ್ಯಮದಲ್ಲಿ ಉದ್ಯೋಗವಕಾಶಗಳು ಕುರಿತ ಒಂದು ದಿನದ ಕಾರ್ಯಾಗಾರವನ್ನು ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ ಕಾಲೇಜು ರಂಗದ ಐದನೇ ಸಂಚಿಕೆ ಬಿಡುಗಡೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕೋವಿಡ್ ಸಂದರ್ಭದಲ್ಲಿ ಹಲವು ಉದ್ದಿಮೆಗಳಂತೆ ಮಾಧ್ಯಮರಂಗದಲ್ಲೂ ಉದ್ಯೋಗಾವಕಾಶಗಳ ಬಾಗಿಲು ಬಹುತೇಕ ಮುಚ್ಚಿತ್ತು. ಆದರೆ, ಈಗ ಎಲ್ಲ ರಂಗಗಳು ಚೇತರಿಕೆ ಕಂಡಿದ್ದು, ಪತ್ರಿಕೋದ್ಯಮವೂ ಪುಟಿದೆದ್ದಿದೆ ಎಂದರು.
ಇವತ್ತು ಡಿಜಿಟಲ್ ಮೀಡಿಯಾದಲ್ಲಿ ಉದ್ಯೋಗವಕಾಶಗಳ ಮಹಾಪೂರವೇ ಇದೆ. ಮಾಧ್ಯಮದಲ್ಲಿ ಧ್ವನಿ ನೀಡಬಹುದು, ಸ್ಕ್ರಿಪ್ಟ್ ಬರೆಯಬಹುದು, ಸಂಕಲನ ಮಾಡಬಹುದು, ನಿರೂಪಣೆ ಮಾಡಬಹುದು, ಕ್ಯಾಮೆರಾ ವರ್ಕ್ ಪರಿಣತಿ ಹೊಂದಬಹುದು. ಹೀಗೆ ಸಾಕಷ್ಟು ಕೌಶಲ್ಯಗಳನ್ನು ಕಲಿತು ಬದುಕು ರೂಪಿಸಿಕೊಳ್ಳಬಹುದು. ಆದರೆ ಕಲಿತ ತಕ್ಷಣ, ಕೆಲಸ ಸಿಕ್ಕ ತಕ್ಷಣ ಎಲ್ಲ ಕೌಶಲ್ಯಗಳು ಒಮ್ಮೆಲೆ ಕರಗತವಾಗಲ್ಲ. ದಿಢೀರನೇ ಜನಪ್ರಿಯತೆ ಕೂಡ ಸಿಗಲ್ಲ. ಅದಕ್ಕೆ ಕಠಿಣ ಶ್ರಮ, ತಲ್ಲೀನತೆ ಬೇಕೇ ಬೇಕು ಎಂದರು.
ಇನ್ನು ಮಾಧ್ಯಮ ಅಥವಾ ಸಿನಿಮಾ ರಂಗದಲ್ಲಿ ಕೋರ್ಸ್ ಮಾಡಬೇಕು ಎಂಬುದು ಆದ್ಯತೆಯಷ್ಟೇ ಹೊರತು ಪ್ರಮುಖ ಅರ್ಹತೆಯಲ್ಲ, ಆಸಕ್ತಿ, ಪರಿಶ್ರಮ, ವಿಭಿನ್ನ ಚಿಂತನೆಗಳೇ ಪತ್ರಕರ್ತನನ್ನು ಜೀವಂತವಾಗಿ ಇಡುತ್ತವೆ. ಇಲ್ಲದಿದ್ದರೆ ಎಲ್ಲರೊಳಗೊಬ್ಬರು ಎನ್ನುವಂತಾಗುತ್ತದೆ ಎಂದು ಕಿವಿ ಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ.ತಿಮ್ಮಾರಡ್ಡಿ ಮೇಟಿ ಮಾತನಾಡಿ, ಬಡತನ ಸಾಧನೆಗೆ ಅಡ್ಡಿಯಲ್ಲ. ಬಡತನ ಕುಟುಂಬದಲ್ಲೇ ಜನಿಸಿದ ರಜನೀಕಾಂತ್ ಸೇರಿದಂತೆ ಅನೇಕರು ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ್ದಾರೆ. ಇಷ್ಟದ ಕ್ಷೇತ್ರದಲ್ಲಿ ಕಷ್ಟಗಳನ್ನು ಎದುರಿಸಿದಾಗಲೇ ಯಶಸ್ಸು ಅರಸಿ ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಯೋಜಕ ಡಾ.ಪ್ರಭುರಾಜ್ ನಾಯಕ್, ಕನ್ನಡ ವಿಭಾಗದ ಮುಖ್ಯಸ್ಥರಾದ ಗಾಯತ್ರಿ ಬಾವಿಕಟ್ಟಿ ಮಾತನಾಡಿದರು.
ಕಾಲೇಜಿನ ಬೋಧಕ ಸಿಬ್ಬಂದಿಯಾದ ಡಾ.ಪ್ರಕಾಶ್ ಬಳ್ಳಾರಿ, ಡಾ.ತುಕಾರಾಂ ನಾಯಕ್, ಡಾ.ಶಿವಣ್ಣ, ಯಂಕಮ್ಮ, ನಜ್ಮಾ, ಶಿವಣ್ಣ.ಎಂ., ಮಲ್ಲಿಕಾರ್ಜುನ, ಗಿರಿಜಾ ತುರಮುರಿ, ಪ್ರಮೀಳಾ ದೊಡ್ಡಮನಿ, ಡಾ.ಲಕ್ಷಿö್ಮÃಬಾಯಿ, ಸಾವಿತ್ರಿ, ಡಾ.ವಾರುಣಿ ಟಿ.ವಿ, ಸಂತೋಷಿಕುಮಾರಿ, ಕಾಲೇಜಿನ ವಿದ್ಯಾರ್ಥಿಗಳು ಮತ್ತಿತರರು ಇದ್ದರು.
ಉಷಾ ಪ್ರಾರ್ಥಿಸಿದರು. ವಿಜಯಕುಮಾರ್ ಕುಲಕರ್ಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಸವರಾಜ ಕರುಗಲ್ ಅತಿಥಿ ಪರಿಚಯ ಮಾಡಿಕೊಟ್ಟರು. ಡಾ.ಸಣ್ಣದೇವೇಂದ್ರಸ್ವಾಮಿ ಸ್ವಾಗತಿಸಿದರು. ಜ್ಞಾನೇಶ್ವರ ಪತ್ತಾರ ನಿರೂಪಿಸಿದರು. ಗೋಣಿಬಸಪ್ಪ ವಂದಿಸಿದರು.