NEWSನಮ್ಮಜಿಲ್ಲೆನಮ್ಮರಾಜ್ಯ

ಕಬ್ಬಿಗೆ 4500 ರೂ. ದರ ನಿಗದಿಗಾಗಿ ಪ್ರತಿಭಟನೆ, ಸಿಎಂ ಅಣಕು ಶವಯಾತ್ರೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಮಂಡ್ಯ: ಕಬ್ಬಿಗೆ ದರ ನಿಗದಿ ಮಾಡಲು ಸರ್ಕಾರಕ್ಕೆ ತಾಕತ್ತಿಲ್ಲ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯದಲ್ಲಿ ಕಳೆದ 10 ದಿನಗಳಿಂದ ರೈತರು ಕ್ವಿಂಟಾಲ್‌ ಕಬ್ಬಿಗೆ 4500 ರೂ. ದರ ನಿಗದಿ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದು, ಬುಧವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು. ಸರ್ಕಾರದ ಪ್ರತಿನಿಧಿಯಾಗಿ ಮುಖ್ಯಮಂತ್ರಿ ಬೊಮ್ಮಾಯಿ ಅವರ ಅಣಕು ಶವಯಾತ್ರೆ ಮಾಡಿ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಅವರು, ಮಲಗಿದ್ದ ಜಿಲ್ಲಾಡಳಿತವನ್ನು ಬಡಿದೇಳಿಸಲು ಕಚೇರಿಗೆ ಮುತ್ತಿಗೆ ಹಾಕಬೇಕಾಯಿತು. ಯಾವುದೇ ವ್ಯಕ್ತಿಯ ಸಾವು ಬಯಸುವುದಿಲ್ಲ. ಆದರೆ, ಸರ್ಕಾರ ಸತ್ತೋಗಿದೆ. ಹಾಗಾಗಿ ಸರ್ಕಾರದ ಪ್ರತಿನಿಧಿಯಾಗಿ ಸಿಎಂ ಹೆಸರಲ್ಲಿ ಶವಯಾತ್ರೆ ಮಾಡಿದ್ದೇವೆ. ಅವರ ಅಕ್ಕಪಕ್ಕ ಕುಳಿತುಕೊಳ್ಳುವ ಬಿಜೆಪಿ ನಾಯಕರೆಲ್ಲ ಸಕ್ಕರೆ ಕಾರ್ಖಾನೆ ಹೊಂದಿದ್ದು, ಸಕ್ಕರೆ ಕಾರ್ಖಾನೆ ಮಾಲೀಕರನ್ನು ಮಣಿಸಿ ರೈತರಿಗೆ ನ್ಯಾಯ ಕೊಡಿಸುವ ವಿಚಾರದಲ್ಲಿ ಬೊಮ್ಮಾಯಿ ಅಪ್ರಯೋಜಕರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಾದ್ಯಂತ ಕಬ್ಬು ಬೆಳೆಗೆ ದರ ನಿಗದಿಗೆ ಆಗ್ರಹಿಸುತ್ತಿದ್ದು, ಮಂಡ್ಯದಲ್ಲಿ ಕಳೆದ 10 ದಿನಗಳಿಂದ, ಮುದೋಳ-1 ತಿಂಗಳು, ಹರಿಯಾಣದಲ್ಲಿ ಒಂದೂವರೆ ತಿಂಗಳು, 20 ದಿನಗಳಿಂದ ಬಾಗಲಕೋಟೆ, ಕಾರವಾರದ ಹಳಿಯಾಳಗಳಲ್ಲಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ಇದುವರೆಗೂ ರೈತರ ಸಭೆ ನಡೆಸುವ ತಾಕತ್ತು ಮುಖ್ಯಮಂತ್ರಿಗಿಲ್ಲ. ರೈತರ ಪ್ರಶ್ನೆಗಳನ್ನು ಎದುರಿಸುವ ಯೋಗ್ಯತೆ ಇಲ್ಲದ್ದರಿಂದ ಕಳ್ಳರಂತೆ ತಲೆಮರೆಸಿಕೊಂಡು ತಿರುಗುತ್ತಿದ್ದಾರೆ. ಆದರೆ, ನಮ್ಮ ಕಬ್ಬಿಗೆ ಬೆಲೆ ಪಡೆದೇ ಪಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಧುಚಂದನ್‌ ಮಾತನಾಡಿ, ಓಟು ಕೇಳಲು ಎಲ್ಲರೂ ಪಕ್ಷಾತೀತವಾಗಿ ರೈತರ ಬಳಿಗೆ ಬರುತ್ತಾರೆ. ಆದರೆ, ನಮ್ಮ ಸಂಕಷ್ಟ ಕೇಳಲು, ಬೆಳೆಗೆ ಬೆಲೆ ಕೊಡಲು ಯಾವ ಜನಪ್ರತಿನಿಧಿಯೂ ಬಂದಿಲ್ಲ. ಅವರಿಗೆಲ್ಲ ನಾಚಿಕೆಯಾಗಬೇಕು. ಚುನಾವಣೆ ಹತ್ತಿರದಲ್ಲಿದೆ ಅಂತ ಅಕಾಂಕ್ಷಿಗಳೆಲ್ಲ ಯಾತ್ರೆ ಮಾಡಿಕೊಂಡು ರೈತರನ್ನು ಯಾಮಾರಿಸುತ್ತಿದ್ದಾರೆ. ರೈತ ನಾಯಕ ಪುಟ್ಟಣ್ಣ ಅವರು ಇದ್ದಿದ್ದರೆ ನಾವು ರಸ್ತೆಯಲ್ಲಿ ಕೂರುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ವಿಷಾದಿಸಿದರು.

ಉದಯೋನ್ಮುಖ ಜನಪ್ರತಿನಿಧಿಯೊಬ್ಬರು ಹೀಗೆ ಮಾತನಾಡುತ್ತಿದ್ದಾಗ ರೈತ ಔಷಧ ತೆಗೆದುಕೊಂಡು ಹೊಲಕ್ಕೆ ಹೋಗುತ್ತಿದ್ದಾರೆ ಎಂದು ತೋರಿಸಿದರೆ, ಹೊಲಕ್ಕೆ ಹೋಗಿ ಯಾಕೆ ಕುಡಿಯುತ್ತಾರೆ. ಮನೆಯಲ್ಲೇ ಕುಡಿದು ಸಾಯಬಹುದಲ್ಲ ಎಂದರು.

ನೇಗಿಲು, ಉಳುಮೆ, ಪಟ ಹೊಡೆಯೋದು, ಹುರಿ, ಗುಂಟೆ ಅಂದರೆ ಏನು ಎಂಬುದೇ ಗೊತ್ತಿಲ್ಲ. ರೈತರ ಭಾಷೆ ಅರ್ಥವಾಗಲ್ಲ. ʼಹುರಿʼ ಎಂದರೆ ʼತುರಿʼ ಎನ್ನುತ್ತಾರೆ. ಅಂಥವರನ್ನೆಲ್ಲ ನಂಬಿ ರೈತ ಬದುಕು ನಡೆಸುವುದು ನಿರರ್ಥಕಾರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರ ಹೆಸರಲ್ಲಿ ಅಧಿಕಾರಕ್ಕೆ ಬಂದು ರೈತ ವಿರೋಧಿ ನಿಯಮ ತರುತ್ತಾರೆ. ಬೆಂಗಳೂರಿನಿಂದ ಮಂಡ್ಯಕ್ಕೆ ಬಂದು ರಾಜಕೀಯ ಮಾಡುತ್ತಾರೆ. ಹಾಗಾಗಿ ಇನ್ನೆಂದೂ ರೈತನ ಮಗ ಎಂದವರಿಗೆ ಮತ ಕೊಡುವುದು ಬೇಡ; ನೇರವಾಗಿ ರೈತನಿಗೆ ಮತ ಹಾಕಲು ಬದ್ಧರಾಗೋಣ. ಚುನಾವಣೆವರೆಗೂ ರೈತರನ್ನು ಬೀದಿಯಲ್ಲಿ ನಿಲ್ಲಿಸಲಿ, ಮಂಡ್ಯ ಕಾರ್ಖಾನೆಯ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಕುಳಿತೇ ಚುನಾವಣೆ ಎದುರಿಸಿ ಪಾಠ ಕಲಿಸೋಣ, ಈ ಬಿಜೆಪಿ ಸರ್ಕಾರವನ್ನು ಮಟ್ಟ ಹಾಕೋಣ‌” ಎಂದು ಮಧುಚಂದನ್ ಕರೆ ನೀಡಿದರು.

ಹೋರಾಟದಲ್ಲಿ ಭಾಗಿಯಾಗಿದ್ದ ಸುನೀತಾ ಪುಟ್ಟಣ್ಣಯ್ಯ ಮಾತನಾಡಿ, ರೈತ ಸಂಘ ಹಿಂದಿನಿಂದಲೂ ಪ್ರೀತಿ, ಶಾಂತಿ, ಸಹಬಾಳ್ವೆ ಸಾರಿದೆ. ವಿಷ ಉಣಿಸುವವರಿಗೂ ಪ್ರೀತಿ ಹಂಚಿದೆ. ಹಾಗಾಗಿ ಬೊಮ್ಮಾಯಿ ರೈತರ ಪರವಾಗಿ ಕೆಲಸ ಮಾಡದಿದ್ದರೂ ಪರವಾಗಿಲ್ಲ. ಅವರು ಸಾಯುವುದು ಬೇಡ. ಪಾಪ ಅವರಿಗೂ ಹೆಂಡತಿ ಮಕ್ಕಳಿದ್ದಾರೆ; ಹಾಗಾಗಿ ಅವರು ಚೆನ್ನಾಗಿರಲಿ. ಹಿಂದೆಲ್ಲ ಸರ್ಕಾರಗಳು ಪ್ರತಿಭಟನೆಗೆ ಬಗ್ಗಿ ಬೇಡಿಕೆ ಈಡೇರಿಸುತ್ತಿದ್ದವು. ಆದರೆ, ಈ ಬಿಜೆಪಿ ಸರ್ಕಾರ ಯಾವುದಕ್ಕೂ ಮಣಿಯುತ್ತಿಲ್ಲ ಎಂದು ಆರೋಪಿಸಿದರು.

ಜನ ಬಳಸುವ ಸೂಜಿಗೂ ಬೆಲೆ ನಿಗದಿಯಾಗಿರುತ್ತದೆ. ಆದರೆ, ರೈತರ ಯಾವುದೇ ಬೆಳೆಗೆ ಬೆಲೆ ನಿಗದಿಯಾಗಿಲ್ಲ. ಇವತ್ತು ಬಿಜೆಪಿ ಸರ್ಕಾರಕ್ಕೆ ಹಾಗೂ ಇತರೆ ಪಕ್ಷಗಳಿಗೆಲ್ಲ ಚುನಾವಣೆ ಗೆಲ್ಲುವ ತಂತ್ರವಷ್ಟೇ ಮುಖ್ಯವಾಗಿದೆ. ರೈತರು ಬೆಳೆದ ಬೆಳೆಗೆ ಬೆಲೆ ಕೇಳುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸ, ಆಸ್ಪತ್ರೆಯಂತಹ ಖರ್ಚುಗಳನ್ನು ನಿಭಾಯಿಸಿ ಸಾಮಾನ್ಯ ಜೀವನ ನಡೆಸಲು ಕಷ್ಟವಾಗಿದೆ. ಹಾಗಾಗಿ, ನಮ್ಮ ಹೋರಾಟ ಮುಂದುವರಿಯಲಿ ಎಂದರು.

ರೈತರು ಹಾಗೂ ಪೊಲೀಸರ ನಡುವೆ ವಾಕ್ಸಮರ: ಮಂಡ್ಯ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ರೈತರು ಹಾಗೂ ಪೊಲೀಸರ ನಡುವೆ ವಾಕ್ಸಮರ, ಹಲವರ ಬಂಧನ ಸಾವಿರಾರು ರೈತರು ಪ್ರತಿಭಟನೆಯುದ್ದಕ್ಕೂ ನೆರೆದಿದ್ದಲ್ಲದೆ, ಜಿಲ್ಲಾಡಳಿತ ಕಚೇರಿಗೆ ಬೀಗ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರೊಂದಿಗೆ ವಾಕ್ಸಮರ ನಡೆದು ಲಾಠಿ ಚಾರ್ಜ್‌ ಮಾಡಿ ರೈತರನ್ನು ಹಿಮ್ಮೆಟ್ಟಿಸಲು ಯತ್ನಿಸಿದ್ದು, ಹಲವು ರೈತ ಮುಖಂಡರು ಹಾಗೂ ರೈತರನ್ನು ಬಂಧಿಸಲಾಯಿತು.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ