ಬೆಂಗಳೂರು: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಸಾರಿಗೆ ನೌಕರರು ವೇತನ ಸೇರಿದಂತೆ ಕೆಲವು ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಮೂರು ವರ್ಷದಿಂದಲೂ ಮನವಿ ಮೇಲೆ ಮನವಿ ಪತ್ರ ಸಲ್ಲಿಸುತ್ತ ಬಂದರೂ ಕ್ಯಾರೆ ಎನ್ನದ ಹಿನ್ನೆಲೆಯಲ್ಲಿ, ಸಾರಿಗೆ ನೌಕರರು ಸಿಡಿದೆದ್ದಿದ್ದು ಬಿಜೆಪಿಯ ಸಾರಿಗೆ ಸಚಿವರ ಕ್ಷೇತ್ರ ಸೇರಿದಂತೆ ಇನ್ನು ಹಲವು ಪ್ರಮುಖರ ಕ್ಷೇತ್ರಗಳಲ್ಲಿ ವಜಾಗೊಂಡ ಸಾರಿಗೆ ನೌಕರರು ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಇನ್ನು ಸಾರಿಗೆ ಸಚಿವರಿಗೆ ಬಿಗ್ಶಾಕ್ ನೀಡಿರುವ ಮುಷ್ಕರದ ವೇಳೆ ವಜಾಗೊಂಡಿರುವ ಬಿಎಂಟಿಸಿಯ ಚಾಲಕ ಡಿ.ರಾಮು ಅವರು, ಸಾರಿಗೆ ನೌಕರರ ಸಮಸ್ಯೆಯನ್ನು ಬಗೆಹರಿಸಲಾಗದ ಸಾರಿಗೆ ಸಚಿವರಾದ ಶ್ರೀರಾಮುಲು ಅವರ ವಿಧಾನಸಭಾ ಕ್ಷೇತ್ರವಾದ ಮೊಳಕಾಲುಮೂರು ಕ್ಷೇತ್ರದಿಂದ 2023 ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ನೌಕರರು ಪೋಸ್ಟ್ ಹಾಕಿರುವುದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಸಾರಿಗೆ ಸಚಿವರಿಗೆ ಈ ಮೂಲಕ ಬಿಕ್ ಶಾಕ್ ಕೊಟ್ಟಿರುವ ಸಾರಿಗೆ ನೌಕರರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಮಂತ್ರಿ ಆರ್.ಅಶೋಕ್, ಮಾಜಿ ಮಂತ್ರಿ ಲಕ್ಷ್ಮಣ ಸವದಿ, ನಿಕಟಪೂರ್ವ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಬಿಜೆಪಿ ನಾಯಕರು ಸ್ಪರ್ಧಿಸುವ ವಿಧಾನಸಭಾ ಕ್ಷೇತ್ರಗಳಲ್ಲಿ ಸಾರಿಗೆ ನೌಕರರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಜ್ಜಾಗುತ್ತಿದ್ದಾರಂತೆ.
ಇನ್ನು ಸಾರಿಗೆ ನೌಕರರ ಬೇಡಿಕೆ ಈಡೇರಿಸುವಲ್ಲಿ ಈಗಾಗಲೇ ಬಹುತೇಕ ವಿಫಲಗೊಂಡಿರುವ ಸರ್ಕಾರ ಇನ್ನಾದರೂ ಎಚ್ಚೆತ್ತುಒಳ್ಳೇದು ಮಾಡದ್ದರೆ ಮುಂದಿನ ದಿನಗಳಲ್ಲಿ ಹೇಳ ಹೆಸರಿಲ್ಲದಂತೆ ಹೋಗುತ್ತದೆ ಎಂದು ನೌಕರರು ಕಿಡಿಕಾರುತ್ತಿದ್ದಾರೆ.
ಇದಿಷ್ಟೇ ಅಲ್ಲದೆ ಬಿಜೆಪಿಯ ಕೆಲ ನಾಯಕರ ವಿರುದ್ಧ ಅವರ ಕ್ಷೇತ್ರದಲ್ಲಿ ಸಾರಿಗೆ ನೌಕರರು ಸ್ಪರ್ಧೆಗೆ ಇಳಿಯಲು ಸಜ್ಜಾಗುತ್ತಿದ್ದು, ಈ ಬಗ್ಗೆ ಎಲ್ಲ ವಿಪಕ್ಷಗಳ ನಾಯಕರ ಬೆಂಬಲವನ್ನು ಪಡೆಯುವ ಬಗ್ಗೆ ಕೆಲ ಸ್ವಾಮೀಜಿಗಳು, ನುರಿತ ರಾಜಕೀಯ ನಾಯಕರ ಸಲಹೆಯಂತೆ ಯೋಜನೆ ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಸಾರಿಗೆ ನೌಕರರ ಪರ ಧ್ವನಿ ಎತ್ತಿದ ಕೆಲ ಸ್ವಾಮೀಜಿಗಳು ಕೂಡ ನೌಕರರ ಸ್ಪರ್ಧೆಗೆ ಬೆಂಬಲ ಸೂಚಿಸಿದ್ದು, ನೌಕರರ ಪರ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗೆ ಯಾವುದೇ ರೀತಿಯ ಕೊರತೆ ಆಗದಂತೆ ಮಠದ ಭಕ್ತರು ಮತ್ತು ಕ್ಷೇತ್ರದ ಜನರು ಕೂಡ ಬೆಂಬಲವಾಗಿ ನಿಲ್ಲಬೇಕು ಎಂಬುದರ ಬಗ್ಗೆ ರೂಪುರೇಷೆಗಳನ್ನು ರೂಪಿಸುತ್ತಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಬಿಜೆಪಿ ಸರ್ಕಾರ ಬಂದಾಗಿನಿಂದ ಈವರೆಗೂ ನಮಗೆ ಅನುಕೂಲ ಮಾಡಿಕೊಡುವ ಬದಲಿಗೆ ಕಿರುಕುಳವನ್ನೇ ನೀಡುತ್ತಾ ಬರುತ್ತಿದ್ದು, ಇದಕ್ಕೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲೇ ಬೇಕು ಎಂದು ಶತಾಯಗತಾಯ ಬಿಜೆಪಿಯನ್ನು ಬಗ್ಗು ಬಡಿಯುವುದಕ್ಕೆ ಪ್ರಯತ್ನ ಮಾಡುತಿರುವುದಾಗಿ ಕೆಲ ನೌಕರರು ಹೇಳುತ್ತಿದ್ದಾರೆ.
ಈ ನಡುವೆ ಚುನಾವಣೆಗೆ ಇನ್ನು ಕೆಲವು ತಿಂಗಳುಗಳು ಬಾಕಿ ಇದ್ದು ಚುನಾವಣೆ ಷೋಷಣೆ ಆಗುವವರೆಗೂ ಕಾದು ನೋಡಿ ಎಂದು ಕೆಲ ಹಿರಿಯ ಅಧಿಕಾರಿಗಳು ಮತ್ತು ನುರಿತ ವಕೀಲರು ಸಲಹೆ ನೀಡುತ್ತಿದ್ದಾರೆ. ಆದರೆ ಅವರು ಕೂಡ ನೀವು ನಡೆಸುತ್ತಿರುವ ಸಿದ್ಧತೆಯನ್ನು ಅರ್ಧಕ್ಕೆ ನಿಲ್ಲಿಸದೆ ಮುಂದುವರಿಯಿರಿ. ಒಂದು ವೇಳೆ ಸರ್ಕಾರ ಒಳ್ಳೇದು ಮಾಡಿದರೆ ನೀವು ಚುನಾವಣೆಯನ್ನು ಬಿಟ್ಟು ಕರ್ತವ್ಯಕ್ಕೆ ಹಾಜರಾಗಿ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ.
ಈ ನಡುವೆ ಸರ್ಕಾರ ಇದೇ ಡಿಸೆಂಬರ್ ಕೊನೆಯಲ್ಲಿ ಅಥವಾ ಜನವರಿ ಮೊದಲೆರಡು ವಾರದೊಳಗೆ ನೌಕರರಿಗೆ ಸಿಹಿ ಸುದ್ದಿ ನೀಡಿದರೆ ಅವರ ಪಾಡಿಗೆ ಅವರು ಸೇವೆಯಲ್ಲಿ ಮುಂದುವರಿಯಲಿದ್ದಾರೆ ಇಲ್ಲದಿದ್ದರೆ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಸರ್ಕಾರಕ್ಕೆ ಸೆಡ್ಡುಹೊಡೆಯುವುದು ಖಚಿತ ಎಂದು ಹೇಳುತ್ತಿದ್ದಾರೆ.
ಈಗಾಗಲೇ ಸರ್ಕಾರ ಮತ್ತು ಸಾರಿಗೆ ಸಚಿವರ ವಿರುದ್ಧ ಕಿಡಿಕಾರುತ್ತಿರುವ ಸಾರಿಗೆ ನೌಕರರು ಹಾಗೂ ಅವರ ಕುಟುಂಬಸ್ಥರು ಸಮಸ್ತ ನಾಡಿನ ಜನರ ಆಶೀರ್ವಾದದಿಂದ ನಾವು ಸ್ಪರ್ಧಿಸುವ ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸವನ್ನು ಹೊಂದಿದ್ದಾರೆ. ಹೀಗಾಗಿ ಅಧಿಕೃತವಾಗಿ ಸಾರಿಗೆ ಸಚಿವರ ವಿರುದ್ಧ ವಜಾಗೊಂಡ ನೌಕರರನ್ನು ಕಣಕ್ಕಿಳಿಸುವ ಬಗ್ಗೆ ಘೋಷಣೆ ಕೂಡ ಮಾಡಿದ್ದಾರೆ ನೌಕರರು.