ಹನೂರು: ಕೊತ್ತಂಬರಿ ಸೊಪ್ಪು ಬೆಳೆಯ ಜತೆಗೆ ಒಂದು ಗಾಂಜಾ ಗಿಡವನ್ನು ಬೆಳೆದಿದ್ದ ರೈತನೊಬ್ಬನನ್ನು ಅಬಕಾರಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಹನುಮೇಗೌಡ (40) ಬಂಧಿತ ಆರೋಪಿ ರೈತ. ಈತ ಕೊತ್ತಂಬರಿ ಸೊಪ್ಪು ಬೆಳೆಯ ಜತೆಗೆ ಒಂದು ಗಾಂಜಾ ಗಿಡವನ್ನು ಬೆಳೆದಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸ್ ಇನ್ಸಪೇಕ್ಟರ್ ಸುನೀಲ್ ನೇತೃತ್ವದ 5 ಸಿಬ್ಬಂದಿಯೊಳಗೊಂಡ ತಂಡ ಚಿಕ್ಕಮಾಲಾಪುರ ಗ್ರಾಮದ ಸರೋಜಮ್ಮ ಕೋಂ ಲೇಟ್ ಬಸವಣ್ಣ ಎಂಬುವವರಿಗೆ ಸೇರಿದ ಜಮೀನಿಗೆ ಭೇಟಿ ನೀಡಿದ ವೇಳೆ ಒಂದು ಗಿಡ ಗಾಂಜಾ ಬೆಳೆದಿರುವುದು ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ರೈತ ಹನುಮೇಗೌಡನನ್ನು ಬಂಧಿಸಿದ ತಂಡ ಜಮೀನಿನಲ್ಲಿ 1.3 ಮೀಟರ್ ( 4.3 ಅಡಿ ) ಎತ್ತರದ ಒಂದು ಗಾಂಜಾ ಗಿಡ ( 348 ಗ್ರಾಂ ) ವನ್ನು ವಶಕ್ಕೆ ಪಡೆದಿದ್ದಾರೆ.
ಸದ್ಯ ಆರೋಪಿ ಹನುಮೇಗೌಡನನ್ನು ಬಂಧಿಸಿ ಎನ್‌ಡಿಪಿಎಸ್ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಚರಣೆಯಲ್ಲಿ ಅಬಕಾರಿ ಉಪ ನಿರೀಕ್ಷಕರಾದ ಸಿದ್ದಯ್ಯ, ಅಬಕಾರಿ ಪೇದೆಗಳಾದ ಸಿದ್ದರಾಜು ಬಿ., ರಮೇಶ ಎಂ. ಹಾಗೂ ಪ್ರದೀಪ್‌ಕುಮಾರ್ ಕೆ. ಭಾಗವಹಿಸಿದ್ದರು.