ಬೆಳಗಾವಿ: ಸತ್ಯಾಗ್ರಹ ಸ್ಥಳಕ್ಕೆ NWKRTC ಎಂಡಿ ಭೇಟಿ – ನೌಕರರ ಅಹವಾಲು ಆಲಿಸಿ ಮನವಿ ಸ್ವೀಕಾರ
ಬೆಳಗಾವಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ಬೇಡಿಕೆ ಈಡೇರಿಕೆಗಾಗಿ ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆ ಹಮ್ಮಿಕೊಂಮಡಿರುವ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಭರತ್ ಎಸ್. ಭೇಟಿನೀಡಿ ಸತ್ಯಾಗ್ರಹ ನಿರತ ನೌಕರರ ಅಹವಾಲು ಆಲಿಸಿದರು.
ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಬಂದು ನೌಕರರ ಮನವಿಯನ್ನು ಸ್ವೀಕರಿಸಿದರು. ಪ್ರಮುಖ ಬೇಡಿಕೆಗಳ ಅಹವಾಲುಗಳನ್ನು ಸರ್ಕಾರಕ್ಕೆ ತಲುಪಿಸುವುದಾಗಿ ತಿಳಿಸಿದರು. ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ನಿವೃತ್ತರಾದ ಹಿರಿಯ ನೌಕರರು ಮಾತನಾಡಿ, ಈ ಅನಿರ್ದಿಷ್ಟ ಅವಧಿ ಉಪವಾಸ ಸತ್ಯಾಗ್ರಹವು ನಮ್ಮ ಬೇಡಿಕೆ ಈಡೇರುವವರೆಗೂ ಮುಂದುವರಿಯುವುದು ಎಂದು ತಿಳಿಸಿದರು.
ನೌಕರರು ಕಳೆದ ಸುಮಾರು ಮೂರು ವರ್ಷಗಳಿಂದಲೂ ಅಲ್ಲದೆ ಮುಷ್ಕರದ ಬಳಿಕ ಮುಖ್ಯಮಂತ್ರಿಗಳು, ಸಚಿವ ವಿಪಕ್ಷ ನಾಯಕರು, ಶಾಸಕರು ಇತ್ಯಾದಿಯಾಗಿ ಪ್ರತಿಯೊಬ್ಬ ಜನ ಪ್ರತಿನಿಧಿಗಳಿಗೂ ಮನವಿ ಸಲ್ಲಿಸಿ ತಮ್ಮ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದ್ದಾರೆ. ಆದರೆ ಜಡ್ಡುಗಟ್ಟಿರುವ ರಾಜಕಾರಣಿಗಳು ಮತ್ತು ಆಡಳಿತ ಪಕ್ಷದ ನಾಯಕರು ಈವರೆಗೂ ನೌಕರರ ಮನವಿಯನ್ನು ಸೂಕ್ಷ್ಮವಾಗಿ ಪರಿಗಣಿಸಿ ಅವರ ಬೇಡಿಕೆ ಈಡೇರಿಸುವುದಕ್ಕೆ ಮುಂದಾಗಿಲ್ಲ.
ಹೀಗಾಗಿ ವಿಧಿ ಇಲ್ಲದೆ ಮತ್ತೆ ಸಾರಿಗೆ ನೌಕರರು ಸಮಾನ ಮನಸ್ಕರ ವೇದಿಕೆ ಅಡಿಯಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ಆದರೆ, ಈ ವೇಳೆ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ತಮ್ಮ ಕರ್ತವ್ಯವನ್ನು ಮಾಡಿಕೊಂಡು ಅವರ ಕುಟುಂಬದ ಸದಸ್ಯರನ್ನು ಸತ್ಯಾಗ್ರಹಕ್ಕೆ ಕಳುಹಿಸಿ ಸೇವಾ ನಿರತರಾಗಿದ್ದಾರೆ.
ಆದರೂ, ಸರ್ಕಾರ ಇನ್ನೂ ಇವರ ಸಮಸ್ಯೆ ಮತ್ತು ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಇದು ಹೀಗೆಯೇ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಯಾವ ರೀತಿ ಹೋರಾಟ ರೂಪಿಸಬೇಕು ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳೋಣ ಎಂದು ವೇದಿಕೆಯ ಪದಾಧಿಕಾರಿಗಳು ನೌಕರರಿಗೆ ವಿವರಿಸಿದ್ದಾರೆ.
ಈ ವೇಳೆ ನೌಕರರು ಕೂಡ ಈ ಅಧಿವೇಶನ ನಡೆಯುವವರೆಗೂ ಕಾದು ನೋಡಿ ಅಲ್ಲಿಯವರೆಗೂ ತಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇನ್ನೊದೆಡೆ ಸತಾಯಗತಾಯ ನಾವು ನಮ್ಮ ಬೇಡಿಕೆ ಈಡೇರುವವರೆಗೂ ಸತ್ಯಾಗ್ರಹವನ್ನು ಮುಂದುವರಿಸಿಕೊಂಡೇ ಹೋಗೋಣ ಎಂಬ ನಿರ್ಧಾರಕ್ಕೆ ಮಾನಸಿಕವಾಗಿ ಸಿದ್ಧರಾಗಿದ್ದು, ಸದ್ಯ ಈಗ ರಸ್ತೆಗೆ ಬಸ್ ಇಳಿಸುತ್ತಿದ್ದಾರೆ. ಸರ್ಕಾರ ಇದೇ ಮೊಂಡುತನ ಮುಂದುವರಿಸಿದರೆ 2021ರ ಏಪ್ರಿಲ್ ನಲ್ಲಿ ನಡೆದ ಮುಷ್ಕರವನ್ನು ಮತ್ತೆ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಸರ್ಕಾರಕ್ಕೆ ರವಾನಿಸಲು ಕಾದು ನೋಡುತ್ತಿದ್ದಾರೆ.