ಮಂಡ್ಯ: ಕಬ್ಬು ದರ ನಿಗದಿ ವಿಷಯದಲ್ಲಿ ರೈತರಿಗೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕೃತಿಗೆ ಮಂಡ್ಯ ರೈತರು ಬುಧವಾರ ಅರ್ಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಧರಣಿ ನಿರತ ರೈತರನ್ನು ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯ ರೈತರು ಕಳೆದ 52 ದಿನಗಳಿಂದ ಟನ್ ಕಬ್ಬಿಗೆ ₹4500 ದರ ನಿಗದಿ, ಹಾಲಿನ ದರ ಹೆಚ್ಚಳ ಹಾಗೂ ಎಲ್ಲ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ ಎಂದು ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಜಿಲ್ಲೆಯ ರೈತರು, ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧ ಕಿಡಿಕಾರಿದರು.
ಅಲ್ಲದೆ ಧರಣಿ ನಿರತ ಸ್ಥಳದಲ್ಲಿ ಮೊದಲು ರಕ್ತದಾನ ಶಿಬಿರ ಆಯೋಜನೆ ಮಾಡುವ ಮೂಲಕ ಪ್ರತಿಭಟನಾ ನಿರತ ರೈತರು ರಕ್ತದಾನವನ್ನು ಮಾಡಿದರು. ಆ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರತಿಕೃತಿಗೆ ತಮ್ಮ ರಕ್ತ ಅರ್ಪಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದರು. ಈ ವೇಳೆ 60ಕ್ಕೂ ಹೆಚ್ಚು ರೈತರನ್ನು ಪೊಲೀಸರು ಬಂಧಿಸಿದರು.
ಇಡೀ ರಾಜ್ಯದಲ್ಲಿ ಹಲವೆಡೆ ಕಬ್ಬು ಬೆಳೆಗಾರರು ದರ ಹೆಚ್ಚಳಕ್ಕಾಗಿ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಅದೇ ರೀತಿ ಮಂಡ್ಯದಲ್ಲಿಯೂ ಕಳೆದ 52 ದಿನಗಳಿಂದ ಕಬ್ಬು ಬೆಳೆಗೆ ವೈಜ್ಞಾನಿಕ ದರನಿಗದಿ ಸೇರಿದಂತೆ ನಾವು ಹಲವಾರು ಜ್ವಲಂತ ಸಮಸ್ಯೆಗಳನ್ನು ಇಟ್ಟುಕೊಂಡು ಧರಣಿ ಮಾಡುತ್ತಿದ್ದೇವೆ. ಆದರೂ ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ಮಾಡುತ್ತಿಲ್ಲ.
ಆದರೆ ಸಿಹಿ ಸುದ್ದಿ ಕೊಡುತ್ತೇವೆ ಎಂದು ಸುಳ್ಳು ಭರವಸೆ ನೀಡುತ್ತಲೇ ರೈತರನ್ನು ನಂಬಿಸಿ, ವಂಚಿಸಿ ರಕ್ತ ಹೀರುತ್ತಿದ್ದಾರೆ. ಹಾಗಾಗಿ ಪರೋಕ್ಷವಾಗಿ ರಕ್ತ ಕುಡಿಯುತ್ತಿರುವವರಿಗೆ ನೇರವಾಗಿ ನಮ್ಮ ರಕ್ತವನ್ನೇ ಕೊಡುತ್ತೇವೆ, ಕುಡಿಯಿರಿ ಎಂದು ರಕ್ತದಿಂದಲೇ ಅಭಿಷೇಕ ಮಾಡಿದ್ದೇವೆ ಎಂದು ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಧುಚಂದನ್ ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ ರೈತರ ಧರಣಿ ಸ್ಥಳಕ್ಕೆ ಬಂದು ಕಬ್ಬು ಬೆಳೆಗಾರರಿಗೆ ಸಿಹಿಸುದ್ದಿ ನೀಡುತ್ತೇನೆ ಎಂದು ಮಾತುಕೊಟ್ಟು ಟನ್ ಕಬ್ಬಿಗೆ ₹50 ಹೆಚ್ಚಳ ಮಾಡಿದ್ದಾರೆ. ಅಂದರೆ, ಕೆಜಿಗೆ ₹5 ಪೈಸೆ ಹೆಚ್ಚಳ ಮಾಡಿದ್ದು ಭಿಕ್ಷೆ ಹಾಕಿದ್ದಾರೆ. ನಾವು ನಮ್ಮ ಶ್ರಮದ ಫಲವನ್ನು ಕೇಳುತ್ತಿದ್ದೇವೆ. ಸರ್ಕಾರದ ಈ ನಿರ್ಲಕ್ಷ್ಯ ಧೋರಣೆಯಿಂದ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ನಮ್ಮ ಬೇಡಿಕೆಯಂತೆ ರೈತರ ಸಮಸ್ಯೆಗಳನ್ನು ಇತ್ಯರ್ಥಪಡಿಸದಿದ್ದಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸರ್ಕಾರದ ಆದೇಶದಲ್ಲೇನಿದೆ?: ಕೇಂದ್ರ ಸರ್ಕಾರ ನಿಗದಿಪಡಿಸಿರುವ ನ್ಯಾಯಯುತ ಮತ್ತು ಲಾಭದಾಯಕ ಬೆಲೆಗಿಂತ (ಎಫ್ಆರ್ಪಿ) ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ ₹50 ದರವನ್ನು ಹೆಚ್ಚುವರಿಯಾಗಿ ಪಾವತಿಸುವಂತೆ ರಾಜ್ಯ ಸರ್ಕಾರ ಡಿ.7ರಂದು ಆದೇಶ ಹೊರಡಿಸಿತ್ತು. ಕಬ್ಬಿನ ಉಪ ಉತ್ಪನ್ನವಾದ ಎಥೆನಾಲ್ಗೆ ಸಂಬಂಧಿಸಿದಂತೆ ಪ್ರತಿ ಮೆಟ್ರಿಕ್ ಟನ್ಗೆ ₹50 ಹೆಚ್ಚುವರಿಯಾಗಿ ಪಾವತಿಸುವ ಕುರಿತು 2022-23ನೇ ಸಾಲಿಗೆ ಅನ್ವಯಿಸುವಂತೆ ಈ ಆದೇಶ ಹೊರಬಂದಿದೆ. ಆದರೆ ಸರ್ಕಾರದ ಈ ಆದೇಶವನ್ನು ಕಬ್ಬು ಬೆಳೆಗಾರರು ತಿರಸ್ಕರಿಸಿದ್ದಾರೆ.
ಮಂಡ್ಯದಲ್ಲಿ ನಿರಂತರವಾಗಿ ಕಬ್ಬು, ಹಾಲಿನ ಬೆಲೆ ಮತ್ತಿತರ ಸಮಸ್ಯೆಗಳ ಹೋರಾಟ ಮಾಡುತ್ತಿದ್ದ ರೈತರ ಸಮಸ್ಯೆ ಬಗೆಹರಿಸಲು ವಿಫಲವಾದ ರಾಜ್ಯ ಸರ್ಕಾರ ಪೊಲೀಸ್ ದಬ್ಬಾಳಿಕೆಯ ಮೂಲಕ ರೈತ ಚಳವಳಿಯನ್ನು ಹತ್ತಿಕ್ಕಲು ಯತ್ನಿಸುವುದು ಖಂಡನಿಯ, ಚಳವಳಿ ನಡೆಸುತ್ತಿದ್ದ ವೇದಿಕೆಯನ್ನು ಕಿತ್ತು ಎಸೆದು ರೈತರ ಬಂಧಿಸುವುದು ಸರ್ಕಾರದ ಹೇಡಿತನದ ವರ್ತನೆ, ಇಂಥ ಬೆದರಿಕೆಗೆ ರೈತರು ಬಗ್ಗುವುದಿಲ್ಲ ಎಂಬುದನ್ನು ಸರ್ಕಾರ ಅರಿಯಲಿ.
l ಕುರುಬೂರು ಶಾಂತಕುಮಾರ್ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ