ಹಾಸನ: ಹಾಸನದ ಕೊರಿಯರ್ ಕಚೇರಿಯಲ್ಲಿ ಇದೇ ಡಿ.26ರಂದು ಮಿಕ್ಸಿ ಸ್ಫೋಟಗೊಂಡ ಪ್ರಕರಣಕ್ಕೆ ತಿರುವು ಸಿಕ್ಕಿದ್ದು ಮಿಕ್ಸಿ ಬಾಂಬರ್‌ನ ಕಾರಾಳ ಮುಖವನ್ನು ಪೊಲೀಸರು ಬಯಲು ಮಾಡಿದ್ದಾರೆ.
ತನ್ನ ಮೋಸದ ಬಲೆಗೆ ಮಹಿಳೆ ಬೀಳಲಿಲ್ಲ ಎಂದು ಕುಪಿತಗೊಂಡ ಕೀರಾತಕನೊಬ್ಬ ಆಕೆಯನ್ನು ಮುಗಿಸುವ ಸಲುವಾಗಿ ಮಿಕ್ಸಿಯಲ್ಲಿ ಡಿಟೋನೇಟರ್ ಇಟ್ಟು ಬ್ಲಾಸ್ಟ್ ಮಾಡಿ ಆಕೆಯನ್ನು ಮುಗಿಸಲು ಸ್ಕೆಚ್ ಹಾಕಿದ್ದ. ಆದರೆ, ಆಕೆ ಕೊರಿಯರ್‌ನಲ್ಲಿ ಬಂದ ಪಾರ್ಸಲ್‌ಅನ್ನು ಪಡೆಯದೆ ವಾಪಸ್ ಕಳಿಸಿದ್ದರು.
ಹೌದು! ಬೆಂಗಳೂರು ಮೂಲದ ಅನೂಪ್ ಕುಮಾರ್ ಎಂಬಾತನೆ ಹಾಸನದ ಮಹಿಳೆಯೊಬ್ಬರನ್ನು ಹತ್ಯೆ ಮಾಡಲು ಸ್ಕೆಚ್‌ಹಾಕಿದ್ದ ಆರೋಪಿ. ಈತ ಮಹಿಳೆಯರನ್ನು ವಂಚಿಸುತ್ತಿದ್ದ. ಮದುವೆಯಾಗಿ ಮಕ್ಕಳಿದ್ದರೂ ಮಹಿಳೆಯರಿಗೆ ವಂಚಿಸಿ ಅವರಿಂದ ಹಣ ಪೀಕಲು ಕತರ್ನಾಕ್ ಪ್ಲಾನ್ ಮಾಡುತ್ತಿದ್ದ. ಅದಕ್ಕೆ ನಕಲಿ ವಿಡಿಯೋಗಳನ್ನು ಮಾಡುವ ಮೂಲಕ ಮುಗ್ದ ಮಹಿಳೆಯರನ್ನು ನಂಬಿಸಿ ವಂಚಿಸುತ್ತಿದ್ದ.
ಸದ್ಯ ಕಿರಾತಕನ ಮುಖವಾಡವನ್ನು ಪೊಲೀಸರು ಕಳಚಿದ್ದಾರೆ. ಈತ ಮ್ಯಾಟ್ರಿಮೊನಿಯಲ್ಲಿ ಫೇಕ್ ಅಕೌಂಟ್ ಕ್ರಿಯೆಟ್ ಮಾಡಿ ಮಹಿಳೆಯರು, ಯುವತಿಯರಿಗೆ ವಂಚಿಸುತ್ತಿದ್ದ. ತನ್ನ ಬಳಿ ಕೆಜಿಗಟ್ಟಲೆ ಬಂಗಾರ ಇದೆ, ಬಂಗಾರದ ಬಿಸ್ಕೆಟ್ ಇದೆ, ಕೋಟಿ ಕೋಟಿ ಹಣ ಇದೆ ಎಂದು ಫೇಕ್ ವಿಡಿಯೋ ಮಾಡುತ್ತಿದ್ದ. ನಕಲಿ ಬಂಗಾರದ ಜೊತೆ ವಿಡಿಯೋ ಮಾಡಿ ಮಹಿಳೆಯರನ್ನು ನಂಬಿಸಿ ವಂಚಸುತ್ತಿದ್ದ ಆರೋಪಿ.
ಈತ 20 ಲೀಟರ್ ಕುಕ್ಕರ್ ನಲ್ಲಿರೊ 40 ಕೆಜಿ ಬಂಗಾರ, 12 ಲೀಟರ್ ಕುಕ್ಕರ್ ನಲ್ಲಿರೊ 36 ಕೆಜಿ ಬಂಗಾರ ಎಂದು ಸೆಲ್ಫಿ ವಿಡಿಯೋ ಮಾಡುತ್ತಿದ್ದ. ಸೂಟ್ ಕೇಸ್ ನಲ್ಲಿ ಕೋಟಿ ಮೌಲ್ಯದ ಗೋಲ್ಡ್ ಬಿಸ್ಕೆಟ್, ಹಂಡೆಯಲ್ಲಿ ಕಂತೆ ಕಂತೆ ನೋಟು. ಇದೆಲ್ಲಾ ನನ್ನ ಚಿನ್ನ, ನನ್ನ ಬಂಗಾರಿ ವಸಂತಾಗೆ ಎಂದು ವಿಡಿಯೋ ಮಾಡಿ ಕಳಿಸಿದ್ದ.
ಆ ವಿಡಿಯೋವನ್ನು ಹಾಸನದ ಕುವೆಂಪು ನಗರದ ನಿವಾಸಿ ವಿಚ್ಛೇದಿತ ಮಹಿಳೆ ವಸಂತಾ ಎಂಬುವರಿಗೆ ಕಳಿಸಿ ಅವರನ್ನು ತನ್ನ ಮೋಸದ ಬಲೆಗೆ ಕೆಡವಲು ಪ್ಲಾನ್ ಮಾಡಿದ್ದ. ಫಾರ್ಮ್ ಹೌಸ್, ಕೆಜಿ ಗಟ್ಟಲೆ ಚಿನ್ನ, ಗೋಲ್ಡ್ ಬಿಸ್ಕೆಟ್ ಎಲ್ಲ ನನ್ನ ಬಳಿ ಇದೆ ಎಂದು ಹೇಳಿದ್ದ. ಅಲ್ಲದೆ ನನ್ನ ಬಳಿ ಇರೋದೆಲ್ಲಾ ನಿನಗಾಗಿ ಎಂದು ನಂಬಿಸಿ ವಿಡಿಯೋ ಮಾಡಿದ್ದ. ಈತನ ವರ್ತನೆ ನೋಡಿ ಅನುಮಾನಗೊಂಡ ಆಕೆ ಆತನಿಂದ ಅಂತರ ಕಾಯ್ದುಕೊಂಡಿದ್ದರು ಎಂದು ಹೇಳಲಾಗುತ್ತಿದೆ.
ಇನ್ನು ಇತ್ತ ನಾನು ಇಷ್ಟೆಲ್ಲ ಸರ್ಕಸ್ ಮಾಡಿದರು ಈಕೆ ನನ್ನ ಬಲೆಗೆ ಬೀಳಲಿಲ್ಲ ಎಂದು ಸಿಟ್ಟಾಗಿ ಆಕೆಯನ್ನೇ ಮುಗಿಸಲು ಸ್ಕೆಚ್ ಹಾಕಿದ್ದ. ಅದಕ್ಕಾಗಿ ಮಿಕ್ಸಿಯಲ್ಲಿ ಡಿಟೋನೇಟರ್ ಇಟ್ಟು ಕೊಲೆ ಮಾಡಲು ಯತ್ನ ಮಾಡಿದ್ದ. ಆದ್ರೆ ಇದು ಆತನದೇ ಪಾರ್ಸಲ್ ಎಂದು ತಿಳಿದ ವಸಂತಾ ಕುವೆಂಪು ನಗರ 2ನೇ ಹಂತದ ಮುಖ್ಯ ರಸ್ತೆಯಲ್ಲಿರುವ ಕೊರಿಯರ್ ಕಚೇರಿಗೆ ವಾಪಸ್ ನೀಡಿದ್ದರು. ಕಚೇರಿಯಲ್ಲಿ ಡಿಸೆಂಬರ್ 26 ರಂದು ಮಿಕ್ಸಿ ಬ್ಲಾಸ್ಟ್ ಆಗಿತ್ತು. ಹೀಗಾಗಿ ಕಾರ್ಯಾಚರಣೆಗೆ ಇಳಿದ ಪೊಲೀಸರು ಮಿಕ್ಸಿ ಬಾಂಬರ್ ಅನೂಪ್ ಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಂಚಕ ಎಲ್ಲವನ್ನು ಒಪ್ಪಿಕೊಂಡಿದ್ದಾನೆ.
ಈ ನಡುವೆ ವಸಂತಾ ಮ್ಯಾಟ್ರಿಮೊನಿಯಾದಲ್ಲಿ ಪರಿಚಯವಾಗಿದ್ದು ನನ್ನ ಮದುವೆಯಾಗುವುದಾಗಿ ನಂಬಿಸಿ ನನ್ನಿಂದ ಲಕ್ಷ ಲಕ್ಷ ಹಣ ಪಡೆದುಕೊಂಡಿದ್ದಾಳೆ. ಬಳಿಕ ಹಣವನ್ನು ವಾಪಸ್ ಕೊಡದೆ, ಮದುವೆಯನ್ನೂ ಆಗದೆ ನನ್ನನ್ನು ವಂಚಿಸುತ್ತಿದ್ದಾಳೆ ಎಂದು ಅನೂಪ್ ಕುಮಾರ್ ಆರೋಪ ಮಾಡುತ್ತಿದ್ದು ಈ ಸತ್ಯಾಸತ್ಯತೆ ಪೊಲೀಸರ ವಿಚಾರಣೆಯಿಂದ ಬಯಲಾಗಬೇಕಿದೆ.