ಬೆಂಗಳೂರು: ಕಬ್ಬಿನ ಎಫ್ಆರ್ಪಿ ದರಕ್ಕೆ ಹೆಚ್ಚುವರಿಯಾಗಿ, ₹100 ನಿಗದಿ, ಉಪ ಉತ್ಪನ್ನಗಳ ಲಾಭದಿಂದ ಹಂಚಿಕೆ ಮಾಡಿರುವುದು ಹಾಗೂ ಎಥನಾಲ್ ಉತ್ಪಾದನೆಯ ಕಾರ್ಖಾನೆಗಳು ಹೆಚ್ಚುವರಿ ₹50 ಒಟ್ಟು ₹150 ನೀಡಲು ಆದೇಶ ಹೊರಡಿಸಿರುವುದು ಸ್ವಲ್ಪ ಮಟ್ಟಿಗೆ ಸಮಾಧಾನಕರ ತಂದಿದ್ದು ಈ ಹಿನ್ನೆಲೆಯಲ್ಲಿ ಕಳೆದ 39 ದಿನಗಳಿಂದ ಫ್ರೀಡಂ ಪಾರ್ಕ್ನಲ್ಲಿ ಕಬ್ಬುಬೆಳೆಗಾರರು ನಡೆಸುತ್ತಿದ್ದ ಆಹೋ ರಾತ್ರಿ ಧರಣಿ ಕೈಬಿಡಲಾಗಿದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಈ ಸಂಬಂಧ ಇಂದು ಧರಣಿ ಸ್ಥಳದಲ್ಲೇ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆಗಳು ಯಾವುದೇ ಮಾನದಂಡವಿಲ್ಲದೆ ಯಾರ ಅನುಮತಿ ಇಲ್ಲದೆ ಪ್ರಸಕ್ತ ಸಾಲಿನಲ್ಲಿ ಕಬ್ಬು ಕಟಾವು ಸಾಗಾಣಿಕೆ ವೆಚ್ಚವನ್ನು ₹250- ₹300 ಏರಿಕೆ ಮಾಡಿರುವ ಹಣದಲ್ಲಿ ಕಾರ್ಖಾನೆಗಳಿಂದ ₹150 ಕಡಿಮೆ ಮಾಡುವ ಆದೇಶವಾದರೆ ರೈತರ ಕಬ್ಬು ಉತ್ಪಾದನಾ ವೆಚ್ಚಕ್ಕೆ ತಕ್ಕ ಬೆಲೆ ಸಿಗುತ್ತದೆ.
ಈ ಸಂಬಂಧ ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಹುಬ್ಬಳ್ಳಿಯಿಂದ ದೂರವಾಣಿ ಮೂಲಕ ನಮ್ಮ ಜತೆ ಮಾತನಾಡಿ ಚಳವಳಿ ಕೈ ಬಿಡುವಂತೆ ಮನವಿ ಮಾಡಿದರು. ಸರ್ಕಾರದ ಆದೇಶ ಪ್ರತಿಯನ್ನು ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜನರಲ್ ಮ್ಯಾನೇಜರ್ ಬಸವರಾಜ್ ಸೋಮಣ್ಣನವರ್ ಚಳವಳಿ ಸ್ಥಳಕ್ಕೆ ಆಗಮಿಸಿ ಆದೇಶ ಪ್ರತಿ ನೀಡಿದರು.
ಇದೇ ವೇಳೆ ಸಕ್ಕರೆ ಅಭಿವೃದ್ಧಿ ಆಯುಕ್ತರು ಸಹ ಫೋನ್ ಮೂಲಕ ಧರಣಿ ಕೈ ಬಿಡಬೇಕು ಎಂದು ಮನವಿ ಮಾಡಿದರು. ಸರ್ಕಾರದ ಮನವಿಗೆ ಒಪ್ಪಿದ ಚಳವಳಿ ನಿರತರು, ಬಾಕಿ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರದ ನಿರ್ಧಾರವನ್ನು ಒಂದು ತಿಂಗಳು ಕಾದು ನೋಡುತ್ತೇವೆ ಎಂದು ತೀರ್ಮಾನಿಸಿ ಧರಣಿ ಕೈಬಿಟ್ಟಿದ್ದೇವೆ ಎಂದರು.
ರಾಜ್ಯದ ಕಬ್ಬು ಬೆಳೆಗಾರ ರೈತರ ಸತತ ಹೋರಾಟಕೆ ಮಣಿದು ಸರ್ಕಾರ ತಲೆಬಾಗಿದೆ. ಈ ಹೋರಾಟದಿಂದ ರಾಜ್ಯದ ಕಬ್ಬು ಬೆಳೆಗಾರರಿಗೆ ₹905 ಕೋಟಿ ಹಣ ಹೆಚ್ಚುವರಿ ಸಿಕ್ಕಂತಾಗಿದೆ. ಇದು ರೈತ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಹೀಗಾಗಿ ಈಗ ಹೂರಾಟ ಕೈ ಬಿಟ್ಟಿದ್ದೇವೆ ಎಂದರು.
ನಾಲ್ಕು ದಶಕಗಳ ಹೋರಾಟದಿಂದ ಫಲ: ನೆನಗೂದಿಗೆ ಬಿದ್ದಿದ್ದ ಹುಬ್ಬಳ್ಳಿ ಧಾರವಾಡ ಬೆಳಗಾವಿ ಬಾಗಲಕೋಟೆ ಗದಗ ಜಿಲ್ಲೆಗಳ 3.90 ಟಿಎಂಸಿ ಕುಡಿಯುವ ನೀರಿನ ಕಳಸಾ- ಬಂಡೂರಿ ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ₹1300 ಕೋಟಿಗಳಿಗೆ ಡಿಪಿಆರ್ ಅನುಮೋದನೆ ಮಾಡಿ ಆದೇಶ ಹೊರಡಿಸಿರುವುದು ಸ್ವಾಗತಾರ್ಹ ಕ್ರಮ. ಇದು ಚುನಾವಣೆ ಆಕರ್ಷಣೆಯ ಯೋಜನೆಯಾಗ ಬಾರದು. ಕಾಲಮಿತಿಯೊಳಗೆ ಕಾಮಗಾರಿ ಆರಂಭವಾಗಿ ಅನುಷ್ಠಾನಗೊಳ್ಳಬೇಕು. ಇಡಿ ರಾಜ್ಯವೇ ಹೋರಾಟದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಇದು ರಾಜ್ಯದ ಜನತೆಗೆ ಸಂತೋಷದ ಸಂಗತಿಯಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸುರೇಶ್ ಮ ಪಾಟೀಲ್, ಅತ್ತಹಳ್ಳಿ ದೇವರಾಜ್, ಕುಮಾರ್ ಬುಬಾಟಿ, ಬರಡನಪುರ ನಾಗರಾಜ್, ಶಂಕರ್ ಕಾಜಗಾರ್, ಕಾಟೂರ್ ಮಹದೇವಸ್ವಾಮಿ, ಹನುಮಯ್ಯ ಮುಂತಾದವರು ಇದ್ದರು.