ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ಹಲವು ತಿಂಗಳುಗಳಿಂದ ಕಾಯುತ್ತಿದ್ದ ಅಂತರ ನಿಗಮ ವರ್ಗಾವಣೆಯ ಪಟ್ಟಿಯನ್ನು ನಿಗಮ ಬಿಡುಗಡೆ ಮಾಡುವ ಮೂಲಕ ವರ್ಗಾವಣೆಗೊಂಡಿದ್ದ ನೌಕರರಿಗೆ ಸಿಹಿ ಸುದ್ದಿ ನೀಡಿದ್ದಾರೆ ಸಾರಿಗೆ ಸಚಿವ ಬಿ.ಶ್ರೀರಾಮುಲು.
ವರ್ಗಾವಣೆಗೆ ಅರ್ಜಿ ಸಲ್ಲಿಸಿ ಕಾಯುತ್ತಿದ್ದ 1013 ನೌಕರರಿಗೆ ಅಂತರ ನಿಗಮ ವರ್ಗಾವಣೆ ಪಟ್ಟಿ ಬಿಡುಗಡೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಇಂದು ಸಾಂಕೇತಿಕವಾಗಿ ಮೂವರು ಸಿಬ್ಬಂದಿಗಳಿಗೆ ವರ್ಗಾವಣಾ ಪತ್ರ ನೀಡುವ ಮೂಲಕ ಸಚಿವರು ಹಸಿರು ನಿಶಾನೆ ತೋರಿಸಿದ್ದಾರೆ.
ಈ ವೇಳೆ ಮಾತನಾಡಿದ ಸಚಿವರು, ನಮ್ಮ ಸಂಸ್ಥೆ ನೌಕರರು ಹಲವಾರು ತಿಂಗಳುಗಳಿಂದ ಅಂತರ ನಿಗಮ ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದರು. ಆದರೆ ಅವರನ್ನು ಕೆಲ ಕಾರಣಗಳಿಂದ ಬಿಡುಗಡೆಗೊಳಿಸಲು ಸಾಧ್ಯವಾಗಿರಲಿಲ್ಲ. ಈಗ ಆ ಎಲ್ಲ ಸಮಸ್ಯೆಗಳನ್ನು ನಿವಾಸಿಕೊಂಡು ಅವರ ವರ್ಗಾವಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಆಂತರಿಕ ನಿಯತ ಕಾಲಿಕೆ ಸಾರಿಗೆ ಸಂಪದ ಬಿಡುಗಡೆ: ಇನ್ನು ನಿಗಮದ ಕಾರ್ಯಚಟುವಟಿಕೆಗಳು, ಜಾರಿಗೊಳಿಸಲಾದ ಕಾರ್ಮಿಕ ಕಲ್ಯಾಣ ಯೋಜನೆಗಳು, ವಿನೂತನ ಕಾರ್ಯಕ್ರಮ, ನೂತನ ಅವಿಷ್ಕಾರ ವಿಷಯಗಳನ್ನು ಒಳಗೊಂಡ ಆಂತರಿಕ ನಿಯತಕಾಲಿಕ “ಸಾರಿಗೆ ಸಂಪದ” ವನ್ನು ಬಿಡುಗಡೆ ಮಾಡಲಾಗಿದ್ದು ಈ ನಿಯತಕಾಲಿಕವನ್ನು ನಿಗಮದ ಸಮಸ್ತ ಸಿಬ್ಬಂದಿಗಳಿಗೂ ಮಾಹಿತಿಗಾಗಿ ವಿತರಿಸಲಾಗುತ್ತದೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು.
ಈ ವೇಳೆ ಸಂಸ್ಥೆಯ ಅಧ್ಯಕ್ಷ ಚಂದ್ರಪ್ಪ, ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್, ನಿರ್ದೇಶಕರಾದ (ಪರಿಸರ ಮತ್ತು ಜಾಗೃತಾ) ಡಾ.ನವೀನ್ ಭಟ್ ಇನ್ನಿತರ ಅಧಿಕಾರಿಗಳು ನೌಕರರು ಇದ್ದರು.