ಬೆಂಗಳೂರು: ಕಳೆದ 2021ರ ಏಪ್ರಿಲ್ 7 ರಿಂದ 21ರವರೆಗೆ ವೇತನ ಸೇರಿದಂತೆ ಇತರ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ಕೈಗೊಂಡ ಮುಷ್ಕರದ ವೇಳೆ ಸೇವೆಯಿಂದ ವಜಾಗೊಂಡಿರುವ ಎಲ್ಲ ನೌಕರರನ್ನು ಯಾವುದೇ ಷರತ್ತು ಇಲ್ಲದೇ ಒಂದು ವಾರದೊಳಗೆ ಮರು ನೇಮಕ ಮಾಡಿಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ಶಾಂತಿನಗರದಲ್ಲಿರುವ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ನೌಕರರ ಮರು ನೇಮಕ ಸಂಬಂಧ ಶನಿವಾರ ಮಧ್ಯಾಹ್ನ ಶ್ರೀರಾಮುಲು ಅವರ ನೇತೃತ್ವದಲ್ಲಿ ನಡೆದ ಎಲ್ಲ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಈ ವಿಷಯವನ್ನು ಸಚಿವರು ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ನೌಕರರ ಪರ ಸಂಘಟನೆಗಳ ಪದಾಧಿಕಾರಿಗಳು ಇದಕ್ಕೂ ಮುನ್ನ ತಮ್ಮ ಬೇಡಿಕೆಗಳನ್ನು ಇಟ್ಟರು. ಈ ವೇಳೆ ಸಚಿವರು ನಿಮ್ಮ ಒತ್ತಾಯದ ಮೇರೆಗೆ ವಜಾಗೊಳಿಸಿರುವ ಎಲ್ಲ ನೌಕರರನ್ನು ಯಾವುದೇ ಷರತ್ತು ಇಲ್ಲದೆ ಮರು ನೇಮಕ ಮಾಡಿಕೊಳ್ಳುತ್ತೇವೆ ಹಾಗೂ ಈ ಹಿಂದೆ ಷರತ್ತಿಗೆ ಒಳಪಟ್ಟು ನೇಮಕಗೊಂಡಿರುವವರಿಗೂ ಇದು ಅನ್ವಯವಾಗಲಿದೆ ಎಂದು ತಿಳಿಸಿದರು.
ಈಗಾಗಲೇ ಕೋರ್ಟ್‌ನಲ್ಲಿ ಪ್ರಕರಣಗಳಿದ್ದು ಬಹುತೇಕ ಎಲ್ಲ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಬೇಕು. ಜತೆಗೆ ಸೇವಾ ನಿರಂತರತೆ (Service Continuity) ಕೊಡಬೇಕು ಎಂಬ ಬೇಡಿಕೆ ಇಟ್ಟರು. ಇದಿಷ್ಟೇ ಅಲ್ಲದೆ ಯಾವುದೇ ಷರತ್ತುಗಳನ್ನು ವಿಧಿಸದೆ ಎಲ್ಲ ವಜಾಗೊಂಡ ನೌಕರರನ್ನು ಮರು ನೇಮಕ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಅವರ ಮನವಿಗೆ ಸ್ಪಂದಿಸಿದ ಸಚಿವರು ಮುಂದಿನ ಬಾರಿ ನಾವು ಅಧಿಕಾರದಲ್ಲಿ ಇರುತ್ತೇವೋ ಇಲ್ಲವೋ ಆದರೆ ನೌಕರರಿಗೆ ಒಂದು ಒಳ್ಳೆಯದನ್ನು ಮಾಡಬೇಕು. ಹೀಗಾಗಿ ನಾನು ಅಧಿಕಾರಿಗಳ ಜತೆ ಹಲವಾರು ಬಾರಿ ಸಭೆ ನಡೆಸಿದ್ದು ನಿಮ್ಮ ಈ ಎಲ್ಲ ಮನವಿಗಳನ್ನು ಪರಿಶೀಲಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ತಿಳಿಸಿದರು.
ಈ ಮೂಲಕ ನೌಕರರಿಗೆ ಸಿಹಿ ಸುದ್ದಿ ನೀಡಿರುವ ಸಚಿವರು ಇನ್ನು ಒಂದು ವಾರದೊಳಗೆ ಬಿಎಂಟಿಸಿಯಲ್ಲಿ ವಜಾಗೊಂಡಿರುವ ಎಲ್ಲ ನೌಕರರನ್ನು ಮರು ನೇಮಕ ಮಾಡಿಕೊಳ್ಳಲಾಗುವುದು. ಇದಿಷ್ಟೇ ಅಲ್ಲದೆ ಇನ್ನು ಉಳಿದಿರುವ ಮೂರು ನಿಗಮಗಳಲ್ಲೂ ವಜಾಗೊಂಡಿರುವ 110-120 ನೌಕರರನ್ನು ಕೂಡ ತೆಗೆದುಕೊಳ್ಳಲಾಗುವುದು ಎಂದು ಸಭೆಯಲ್ಲಿ ಭರವಸೆ ನೀಡಿದರು.
ಅದಕ್ಕೆ ನೌಕರರ ಪರ ಎಲ್ಲ ಸಂಘಟನೆಗಳ ಮುಖಂಡರು ಒಪ್ಪಿಗೆ ಸೂಚಿಸಿದರು. ಹೀಗಾಗಿ ಒಂದು ವಾರದೊಳಗೆ ಮುಷ್ಕರದ ವೇಳೆ ವಜಾಗೊಂಡಿರುವ ಎಲ್ಲ ನೌಕರರು ಕರ್ತವ್ಯಕ್ಕೆ ಮರಳುವುದು ಬಹುತೇಕ ಖಚಿತವಾಗಿದೆ.