ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಅನುದಾನ ನೀಡುವ ಮೂಲಕ ಸಾರಿಗೆ ಜನರ ಕೈಗೆಟುಕುವಂತೆ ಮಾಡಬೇಕು ಎಂದು ಆಗ್ರಹಿಸಿ ಬೆಂಗಳೂರು ಬಸ್ ಪ್ರಯಾಣಿಕ ವೇದಿಕೆ (ಬಿಬಿಪಿವಿ)ಯ ಸ್ವಯಂಸೇವಕರು ಪ್ರತಿಭಟನೆ ನಡೆಸಿದ್ದಾರೆ.
ಬಿಬಿಪಿವಿಯ ಸ್ವಯಂಸೇವಕರು ಶನಿವಾರ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ಈ ವೇಳೆ ಘೋಷಣಾ ಫಲಕಗಳನ್ನು ಪ್ರದರ್ಶಿಸಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ಬಗ್ಗೆ ತುರ್ತು ಆದೇಶ ನೀಡಬೇಕು ಎಂದು ಒತ್ತಾಯಿಸಿದರು.
ಸಾರಿಗೆ ಸೇವೆ ಲಾಭದ ಲೆಕ್ಕಚಾರದಲ್ಲಿ ನಡೆಯುವುದಲ್ಲ ಅದು ಸೇವೆಯನ್ನೇ ಮುಖ್ಯವಾಗಿ ಇಟ್ಟುಕೊಂಡು ನಡೆಯುವುದು ಹೀಗಾಗಿ ಸರ್ಕಾರ ಜನರಿಗೆ ಸಾರಿಗೆಯನ್ನು ಕೈಗೆಟುಕುವಂತೆ ಮಾಡಬೇಕು. ಮಹಿಳೆಯರು, ತೃತೀಯಲಿಂಗಿಗಳೂ, ಹಿರಿಯ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಮಾಡಲು ಬಿಎಂಟಿಸಿಗೆ 1,500 ಕೋಟಿ ರೂ. ಹಣವನ್ನು ಮೀಸಲಿಬೇಕೆಂದು ಆಗ್ರಹಿಸಿದರು.
ಬೆಂಗಳೂರು ದೇಶದಲ್ಲೇ ಅತಿ ಹೆಚ್ಚು ಬಸ್ ಪ್ರಯಾಣ ದರವನ್ನು ಹೊಂದಿರುವ ನಗರವಾಗಿದೆ. ಇದರಿಂದ ಸಾರ್ವಜನಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಬೆಂಗಳೂರಿನಲ್ಲಿನ ಸಾರಿಗೆ ವ್ಯವಸ್ಥೆಯು ಪ್ರಸ್ತುತ ಅನೇಕ ಅಡೆತಡೆಗಳನ್ನು ಎದುರಿಸುತ್ತಿದೆ ಮತ್ತು ಅವುಗಳಲ್ಲಿ ಒಂದು ಸಮರ್ಪಕ ಸಂಪರ್ಕ ಮತ್ತು ಸೇವೆಯ ಕೊರತೆಯಾಗಿದೆ, ಜನರು 2-3 ಕಿ.ಮೀ ನಡೆದುಕೊಂಡು ಹೋಗಬೇಕಾಗಿದ್ದು, ಬಸ್‌ಗಳಿಗಾಗಿ ಬಹಳ ಹೊತ್ತು ಕಾಯುವಂತೆ ಮಾಡಲಾಗುತ್ತಿದೆ ಎಂದು ಪ್ರತಿಭಟನಾ ನಿರತರು ಕಿಡಿಕಾರಿದರು.
ಸುಮಾರು 1.3 ಕೋಟಿ ಜನಸಂಖ್ಯೆಗೆ, ಬೆಂಗಳೂರಿನಲ್ಲಿ 15,000 ಕ್ಕೂ ಹೆಚ್ಚು ಬಸ್‌ಗಳ ಅಗತ್ಯವಿದೆ. ಆದರೆ, ಬಿಎಂಟಿಸಿಯ ಸೇವೆ ಅಸಮರ್ಪಕವಾಗಿದೆ. ಖಾಸಗಿ ವಾಹನಗಳಿಂದ ಮಾಲಿನ್ಯ, ಸಂಚಾರ ದಟ್ಟಣೆ ಸೇರಿದಂತೆ ಹಲವು ಸಮಸ್ಯೆಗಳಾಗುತ್ತಿವೆ. ಇನ್ನು ಹವಾಮಾನ ಬದಲಾವಣೆ ಮತ್ತಷ್ಟು ಸಮಸ್ಯೆಯನ್ನು ಎದುರು ಮಾಡುತ್ತಿದೆ ಎಂದು ವೇದಿಕೆಯ ಸದಸ್ಯ ವಿನಯ್ ಶ್ರೀನಿವಾಸ ಹೇಳಿದರು.
ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಬಿಎಂಟಿಸಿಗೆ ಅನುಮತಿ ನೀಡಲಾಗಿದ್ದು, ತಕ್ಷಣವೇ 3,000 ಬಸ್‌ಗಳನ್ನು ಖರೀದಿಸಲು, ಅದಕ್ಕೆ ಅಗತ್ಯ ಬಂಡವಾಳ ಮತ್ತು ಕಾರ್ಯಾಚರಣೆಯ ವೆಚ್ಚವನ್ನು ರಾಜ್ಯ ಸರ್ಕಾರದಿಂದ ಮಂಜೂರು ಮಾಡಬೇಕು, ಸಾರಿಗೆ ನಿಗಮವು ಹಣ ಗಳಿಸಿ ಸ್ವಾವಲಂಬಿಯಾಗಬೇಕೆಂದು ಒತ್ತಾಯಿಸಿದರು.
ಇನ್ನು ಸೇವಾ ಮನೋಭಾವದಿಂದ ಹುಟ್ಟಿಕೊಂಡಿರುವ ಸಂಸ್ಥೆಯ ನೌಕರರಿಗೆ ಸರಿಯಾದ ವೇತನ ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸದೃಢ ಮಾಡುವತ್ತ ಸರ್ಕಾರ ಚಿಂತನೆ ಮಾಡಬೇಕು. ಅದನ್ನು ಬಿಟ್ಟು ಬರಿ ನಷ್ಟ ನಷ್ಟ ಎಂದು ಹೇಳಿಕೊಂಡೆ ಕಾಲ ಕಳೆಯುವುದು ಮತಿಗೇಡಿತನವಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.