ಮೈಸೂರು: ಮುಕ್ತಕ ಎನ್ನುವುದು ಸಾಹಿತ್ಯದಲ್ಲೊಂದು ವಿಶಿಷ್ಟ ಪ್ರಾಕಾರವಾಗಿದ್ದು ಇದಕ್ಕೆ ಅದರದೇ ಆದ ಅಲಂಕಾರ, ಪ್ರಾಸ ಹಾಗೂ ಛಂದೋಬದ್ಧ ವ್ಯಾಕರಣವಿರುವುದರಿಂದ ಇಂಥ ಮುಕ್ತಕಗಳ ರಚನೆಗೆ ವಿಶೇಷ ಪರಿಣಿತಿ ಹಾಗೂ ಆಸಕ್ತಿ ಇರಬೇಕೆಂದು ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯ ಪಟ್ಟರು.
ನಗರದ ಜಗನ್ಮೋಹನ ಅರಮನೆಯ ಸಭಾಂಗಣದಲ್ಲಿ ಯುಗಾದಿ ಹಬ್ಬದಂದು ರೋಟರಿ ಕ್ಲಬ್ ಆಫ್ ಮೈಸೂರು ಸ್ಟಾರ್ಸ್ ವತಿಯಿಂದ ನಡೆದ ಯುಗಾದಿ ಸಂಭ್ರಮ ಮತ್ತು ಮುಕ್ತಕ ಕವಯತ್ರಿ ಕಮಲಾ ರಾಜೇಶ್ ಅವರ ಪಂಚ ಮುಕ್ತಕ ಕೃತಿಗಳ ಲೋಕಾರ್ಪಣೆ ಹಾಗೂ ರೋಟರಿ ಸ್ಟಾರ್ಸ್ ಆದರ್ಶ ಮಹಿಳಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಚನ ರಾಮಾಯಣ, ಸಮಸ್ಯಾ ಪೂರ್ಣ ಮುತ್ತುಗಳು, ಶ್ರೀನಿವಾಸ ಕಲ್ಯಾಣ, ಕಮಲದೊಳಗಿನ ಮುತ್ತು, ಪಂಚ ಮುಕ್ತಕ ಮಾಲೆ ಸೇರಿದಂತೆ ಐದೂ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಖ್ಯಾತ ದಾರ್ಶನಿಕ ಕವಿ ಡಿವಿಜಿ ಅವರ ಮಾದರಿಯಲ್ಲಿ ಮುಕ್ತಕ ರಚನಾ ಕೈಂಕರ್ಯದಲ್ಲಿ ತೊಡಗಿರುವ ಕಮಲಾರಾಜೇಶ್ ಅವರದು ಈ ದಿಶೆಯಲ್ಲಿ ಅದ್ಭುತ ಸಾಹಿತ್ಯ. ಹನಿಗವನ, ಮಿನಿಗವನ, ಚುಟುಕು, ರುಭಾಯಿ, ಗಝಲ್, ಹೈಕುಗಳೆಲ್ಲ ಮೇಲ್ನೋಟಕ್ಕೆ ಮುಕ್ತಕಗಳಂತೆಯೇ ಕಂಡರೂ ಸಹ ವಾಸ್ತವವಾಗಿ ಇವುಗಳಾವುವೂ ಮುಕ್ತಕಗಳೆ ನಿಸುವುದಿಲ್ಲ. ಮುಕ್ತಕಗಳ ಲಕ್ಷಣಗಳೇ ಬೇರೆ. ಇದನ್ನು ಪರಿಪೂರ್ಣವಾಗಿ ಅರಿಯಬೇಕೆಂದರೆ ಡಿವಿಜಿ, ಕುಮಾರನಿಜಗುಣ ಅವರಂತಹವರನ್ನು ಅಧ್ಯಯನ ಮಾಡಬೇಕು ಎಂದರು.
ಮುಕ್ತಕ ಸಾಹಿತ್ಯ ಕೃಷಿಯೆಂಬುದು ಒಂದು ವಿಶಿಷ್ಟ ಕಲೆ. ಇದನ್ನು ಸಿದ್ದಿಸಿಕೊಂಡಿರುವವರು ಬಹಳ ವಿರಳ. ಇಂತಹ ವಿರಳರಲ್ಲೊಬ್ಬರು ಮುಕ್ತಕಗಳನ್ನೇ ಧಾರಣೆ ಮಾಡಿಕೊಂಡು ಮುಕ್ತಕಧಾರಿಣಿ ಎನಿಸಿ ಕೊಂಡಿರುವ ಕಮಲಾ ರಾಜೇಶ್. ಅವರ ಮುಕ್ತಕ ಪ್ರೇಮಕ್ಕೆ, ಮುಕ್ತಕ ಪ್ರೀತಿಗೆ ಇಂದು ಬಿಡುಗಡೆಗೊಂಡಿರುವ ಬಹು ಮೌಲಿಕವಾದ ಅವರ ಛಂದೋಬದ್ಧವಾದ ಮುಕ್ತಕ ಸಾಹಿತ್ಯ ಕೃತಿಗಳೇ ಸಾಕ್ಷಿ ನುಡಿ ಯಬಲ್ಲವು. ಇವರ ಒಂದೊಂದು ಮುಕ್ತಕಗಳೂ ಜನೋಪಯೋಗಿ ಸಾಹಿತ್ಯವಾಗಿದ್ದು ಸಮಾಜಾಭಿವೃದ್ಧಿಗೂ ಪೂರಕವಾಗಿವೆ ಎಂದು ಹೇಳಿದರು.
ಕುಂತಲ್ಲಿ, ನಿಂತಲ್ಲಿ, ನಡೆದಲ್ಲಿ, ನುಡಿದಲ್ಲಿ ಎಲ್ಲೆಲ್ಲೂ, ಯಾವಾಗಲೂ ಮುಕ್ತಕ ಸಾಹಿತ್ಯವನ್ನೇ ಧ್ಯಾನಿಸುವ ಕಮಲಾ ರಾಜೇಶ್ ಅವರು ಇದುವರೆಗೆ ಮುಕ್ತಕವನ್ನು ತಪಸ್ಸನ್ನಾಗಿ ಮಾಡಿಕೊಂಡು ಸಾವಿರಾರು ಮುಕ್ತಕಗಳನ್ನು ರಚಿಸಿದ್ದಾರಲ್ಲದೆ,ಈ ನಿಟ್ಟಿನಲ್ಲಿ ಅನೇಕ ಬೃಹತ್ ಕೃತಿಗಳನ್ನು ನಾಡಿಗೆ ನೀಡಿದ್ದಾರೆ. ಅಷ್ಟೇ ಅಲ್ಲ ಇತರರು ಮುಕ್ತಕಗಳನ್ನು ಬರೆಯುವಂತೆ ಪ್ರೇರೇಪಿಸಿ ಅವರುಗಳು ಬರೆದ ಮುಕ್ತಕ ಗಳನ್ನು ಇವರು ಸ್ವತಃ ತಾವೇ ಪ್ರಕಟಿಸಿ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿ ಮುಕ್ತಕ ಕವಿಗಳಿಗೆ ಉತ್ತೇಜನ ನೀಡುತ್ತಾ ಬಂದಿದ್ದಾರೆ. ಮುಕ್ತಕ ಸಾಹಿತ್ಯದ ಅಭಿವೃದ್ಧಿಗಾಗಿ ಸಂಘಟನಾತ್ಮಕವಾಗಿಯೂ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕ ಮಹಿಳೆಯರಾದ ಡಾ.ರತ್ನ ಹಾಲಪ್ಪ ಗೌಡ, ರೋಹಿಣಿ ಶೇಖರ್, ರೇಖಾ ಮನಸ್ವಿನಿ, ಎಲ್ .ಪಿ. ರೇವತಿ, ತೇಜಸ್ವಿನಿ ಕೇಸರಿ,ಸುಷ್ಮಾ ಎಸ್. ಆರಾಧ್ಯ, ಡಾ.ಆರ್. ಸಿ. ಮೈತ್ರಿ, ಮಂಜುಳಾ ಅರಸ್, ಶಶಿಕಲಾ ಸುರೇಂದ್ರ ಹಾಗೂ ಪ್ರತಿಭಾವಂತ ವಿದ್ಯಾರ್ಥಿನಿ ಕು.ಪ್ರಮೀಳಾ ಅವರುಗಳಿಗೆ “ರೋಟರಿ ಸ್ಟಾರ್ಸ್ ಆದರ್ಶ ಮಹಿಳಾ ಪ್ರಶಸ್ತಿ” ನೀಡಿ ಗೌರವಿಸಲಾಯಿತು.
ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದ ತುಮಕೂರಿನ ಕವಯತ್ರಿ ಕಮಲಾ ರಾಜೇಶ್, ಯುಗಾದಿ ಹಬ್ಬದ ಸಂಭ್ರಮದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ನಡೆಯುತ್ತಿರುವ ಇದೊಂದು ಸಾರ್ಥಕವಾದ ಕಾರ್ಯಕ್ರಮ. ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಒಟ್ಟಾರೆ ಯುಗಾದಿಯ ಸಂಭ್ರಮವನ್ನು ಈ ಮೂಲಕ ಆಚರಿಸುತ್ತಿರುವ ರೋಟರಿ ಕ್ಲಬ್ ಆಫ್ ಮೈಸೂರು ಸ್ಟಾರ್ಸ್ ನ ಕಾರ್ಯ ಶ್ಲಾಘನೀಯವಾದುದೆಂದು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಕುರಿತು ರೋಟರಿ ಕ್ಲಬ್ ನ ಸಹಾಯಕ ರಾಜ್ಯಪಾಲ ರೊ.ವಾಸುದೇವ್, ಮೈಸೂರು ಸ್ಟಾರ್ಸ್ ನ ಜಿಎಸ್ಆರ್ ರೊ.ಡಾ.ಬಿ.ಚಂದ್ರ ಮಾತನಾಡಿದರು. ರೋಟರಿ ಕ್ಲಬ್ ಆಫ್ ಮೈಸೂರ್ ಸ್ಟಾರ್ ಅಧ್ಯಕ್ಷ ಸಂತೋಷ್ ಎಸ್. ಗೌಡ ಅಧ್ಯಕ್ಷತೆ ವಹಿಸಿದ್ದರು.ಝೆಡ್.ಎಲ್. ರೊ.ನಾರಾಯಣ ಲಾಲ್, ಪತ್ರಕರ್ತ ಗ್ರಹೇಶ್ವರ ಗಾರುಡಿಗೇಂದ್ರ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಿಕೆಯ ಕಾರ್ಯಕ್ರಮದ ನಂತರ ಯುಗಾದಿ ಹಬ್ಬದ ಸಂಭ್ರಮವಾಗಿ ರಸಮಂಜರಿ ಕಾರ್ಯಕ್ರಮ ನಡೆಯಿತು.