ಬೆಂಗಳೂರು: ಕರ್ನಾಟಕ ಕಿಸಾನ್ ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಆರ್.ನಟರಾಜ್‌ರವರು ಶುಕ್ರವಾರ ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಮುಖ್ಯ ಕಚೇರಿಯಲ್ಲಿ ಸಿ.ಆರ್.ನಟರಾಜ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಮೋಹನ್ ದಾಸರಿ, “ಕಾನೂನು ಪದವೀಧರರಾಗಿರುವ ಸಿ.ಆರ್.ನಟರಾಜ್ ಅವರು ರೈತರಿಗಾಗಿ ದನಿ ಎತ್ತಿದ ಹುಟ್ಟು ಹೋರಾಟಗಾರರು ಎಂದು ತಿಳಿಸಿದರು.
ಅನೇಕ ಕನ್ನಡಪರ ಸಂಘಟನೆಯ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಕನ್ನಡಪರ ಕಾಳಜಿ ತೋರಿದ್ದಾರೆ. ದಲಿತಪರ ಸಂಘಟನೆಗಳ ಹೋರಾಟಗಳಲ್ಲಿ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಇಂತಹ ಸುಶಿಕ್ಷಿತ ಹಾಗೂ ಅನುಭವಿ ನಾಯಕರ ಸೇರ್ಪಡೆಯಿಂದಾಗಿ ಆಮ್ ಆದ್ಮಿ ಪಾರ್ಟಿಯ ಬಲ ಹೆಚ್ಚಾಗಿದೆ ಎಂದು ಹೇಳಿದರು.
ಸಿ.ಆರ್.ನಟರಾಜ್ ಮಾತನಾಡಿ, ಆಮ್ ಆದ್ಮಿ ಪಾರ್ಟಿ ಕುಟುಂಬದ ಹೊಸ ಸದಸ್ಯನಾಗುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಆಮ್ ಆದ್ಮಿ ಪಾರ್ಟಿಯು ದೇಶದ ಕಾನೂನನ್ನು ಗೌರವಿಸುವ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ನಂಬಿಕೆ ಹೊಂದಿರುವ ಪಕ್ಷವಾಗಿದೆ. ಜಾತಿಧರ್ಮಗಳ ಭೇದವಿಲ್ಲದೇ ಎಲ್ಲ ವರ್ಗಗಳ ಹಾಗೂ ವಿವಿಧ ಸ್ತರಗಳ ಜನರನ್ನು ಪಕ್ಷ ಒಳಗೊಂಡಿದೆ ಎಂದರು.
ಇನ್ನು ಜನರು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಂಬ ಸಾಂಪ್ರದಾಯಿಕ ಹಾಗೂ ನಿಷ್ಕ್ರಿಯ ಪಕ್ಷಗಳನ್ನು ತಿರಸ್ಕರಿಸಬೇಕು. ಕಾಲಕ್ಕೆ ತಕ್ಕಂತೆ ಆಡಳಿತ ನೀಡುತ್ತಿರುವ ಹಾಗೂ ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರುವ ಆಮ್ ಆದ್ಮಿ ಪಾರ್ಟಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಬೇಕು. ದೆಹಲಿ, ಪಂಜಾಬ್ ಮಾದರಿಯ ಕ್ರಾಂತಿಕಾರಿ ಸುಧಾರಣೆಗಳನ್ನು ಕರ್ನಾಟಕದಲ್ಲೂ ಕಾಣುವಂತಾಗಬೇಕು ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿಯ ಮಹದೇವಪುರ ವಿಧಾನಸಭಾ ಕ್ಷೇತ್ರದ ಮುಖಂಡರಾದ ಅಶೋಕ್ ಮೃತ್ಯುಂಜಯ, ಮುನೇಂದ್ರ ಮತ್ತಿತರರು ಭಾಗವಹಿಸಿದ್ದರು.