ಚಾಮರಾಜನಗರ: ನಗರದಲ್ಲಿ ನಡೆಸಲಾದ ಗೋ ಬ್ಯಾಕ್ ಸೋಮಣ್ಣ ಅಭಿಯಾನದ ಹಿಂದೆ ರಾಜಕೀಯ ಪಿತೂರಿ ಇದೆ. ನನ್ನನ್ನು ಸುಳ್ಳುಗಾರ ಎಂದು ಕರೆಯುವುದು ಎಷ್ಟು ಸರಿ ಎಂದು ವಸತಿ ಸಚಿವ ವಿ.ಸೋಮಣ್ಣ ಭಾವುಕರಾಗಿ ಪ್ರಶ್ನಿಸಿದ್ದಾರೆ.
ಮುರಿದ ರಥ ಹಾಗೂ ದೇವಸ್ಥಾನ ಜೀರ್ಣೋದ್ಧಾರ ಮಾಡಿಕೊಡುವುದಾಗಿ ಭರವಸೆ ನೀಡಿದ್ದ ಸೋಮಣ್ಣ ಕೊಟ್ಟ ಮಾತಿಗೆ ತಪ್ಪಿದ್ದಾರೆಂದು ಗೋಬ್ಯಾಕ್ ಸೋಮಣ್ಣ ಅಭಿಯಾನ ಆರಂಭಿಸಿದ್ದ ಚಾಮರಾಜನಗರ ತಾಲೂಕಿನ ಚನ್ನಪ್ಪನಪುರ ಅಮಚವಾಡಿ ಮತ್ತಿತರ ಗ್ರಾಮಸ್ಥರೊಂದಿಗೆ ಸೋಮಣ್ಣ ಸಭೆ ನಡೆಸಿದರು.
ಈ ವೇಳೆ ಗೋ ಬ್ಯಾಕ್ ಅಭಿಯಾನವನ್ನು ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರೇ ನಡೆದರು. ಇದರಿಂದ ಅಸಮಾಧಾನಗೊಂಡು, ಬೆಂಗಳೂರಿನಿಂದ ಫ್ಲೆಕ್ಸ್ ಬೋರ್ಡ್ ತಂದು ಹಾಕಿ ನನ್ನನ್ನು ತೇಜೋವಧೆ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು, ಇದರ ಹಿಂದೆ ರಾಜಕೀಯ ಪಿತೂರಿ ಇರುವ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿ ನಾನೇನು ತಪ್ಪು ಮಾಡಿದ್ದೇನೆ ಎಂದು ಕೇಳಿದರು.
ಅಲ್ಲದೆ ನನ್ನನ್ನು ಖಳನಾಯಕನನ್ನಾಗಿ ಮಾಡಿದ್ದೀರಿ. ಯಾರೋ ಸೃಷ್ಟಿ ಮಾಡಿ ಕಳಿಸುತ್ತಾರೆ. ಯಾರದ್ದೋ ಮಾತು ಕೇಳಿ ಕೆಟ್ಟದಾಗಿ ನಡೆದುಕೊಂಡರೆ ಹೇಗೆ? ಇನ್ನೊಬ್ಬರ ಮುಲಾಜಿಗೋಸ್ಕರ, ಇನ್ನೊಬ್ಬರನ್ನು ತೃಪ್ತಿಪಡಿಸಲು ನನ್ನನ್ನು ಕೆಟ್ಟದಾಗಿ ಬಿಂಬಿಸಿ ಹರಾಜು ಹಾಕಿದ್ದೀರಿ ಎಂದು ತೀವ್ರ ಅಸಮಾಧಾನ ಹೊರಹಾಕಿದರು.
ದೇವರ ಹತ್ರ ಪಾಲಿಟಿಕ್ಸ್, ಚಿಲ್ಲರೆ ಕೆಲಸ ಮಾಡಬಾರದು, ಕಳೆದು ಹೋಗ್ತೀರಿ ಎಂದಂತಹ ಅವರು ತಮ್ಮ ರಾಜಕೀಯ ವಿರೋಧಿಗಳಿಗೆ ಎಚ್ಚರಿಕೆ ನೀಡಿದರು. ದೇವಸ್ಥಾನ ಸ್ವಚ್ಛವಾಗಿ ಇಟ್ಟುಕೊಳ್ಳಿ ಎನ್ನುವುದೇ ತಪ್ಪಾ? ತಪ್ಪಾಗಿದ್ದರೆ ಕ್ಷಮಿಸಿ. ಇನ್ನು ರಥ ನಿರ್ಮಾಣ ಹಾಗೂ ದೇವಸ್ಥಾನ ಅಭಿವೃದ್ಧಿಗೆ ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು.