Friday, November 1, 2024
CrimeNEWSನಮ್ಮರಾಜ್ಯರಾಜಕೀಯ

ಹತ್ಯೆಯಾದ ಹರ್ಷನ ಕುಟುಂಬಕ್ಕೆ ಸಿಎಂ ನಿಧಿ ಕೊಡಲು ಬರೊಲ್ಲ: ಸಿಎಂ ವಿವೇಚನೆ ದುರುಪಯೋಗ ಮಾಡಿಕೊಂಡಿದ್ದ ಮಾಜಿ ಸಿಎಂ ಬೊಮ್ಮಾಯಿ – ದಾಖಲೆ ಸಹಿತ ಬಹಿರಂಗ ಮಾಡಿದ ‘ದಿ ಫೈಲ್‌’

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ದುಷ್ಕರ್ಮಿಗಳ ಮಾರಕ ದಾಳಿಗೆ ಸಿಲುಕಿ ಹತ್ಯೆಯಾದ ಬಜರಂಗ ದಳದ ಶಿವಮೊಗ್ಗದ ಕಾರ್ಯಕರ್ತ ಹರ್ಷ ಎಂಬಾತನಿಗೆ ಮುಖ್ಯಮಂತ್ರಿಗಳ ವಿವೇಚನೆಗೆ ಒಳಪಟ್ಟ ಪರಿಹಾರ ನಿಧಿಯಿಂದ 25 ಲಕ್ಷ ರೂ. ಭರಿಸಲು ಅನುಮೋದಿಸಿದ್ದ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ವಿವೇಚನೆಯನ್ನು ದುರುಪಯೋಗಪಡಿಸಿಕೊಂಡಿದ್ದರು ಎಂಬುದು ಇದೀಗ ದಾಖಲೆ ಸಹಿತ ಬಹಿರಂಗವಾಗಿದೆ ಎಂದು ‘ದಿ ಫೈಲ್‌’ ಸಮಗ್ರ ವರದಿ ಮಾಡಿದೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಅಲ್ಲದೇ ಈ ಸಂಬಂಧ ತೆರೆದಿದ್ದ ಕಡತವನ್ನು ಒಂದು ವರ್ಷದ ಬಳಿಕ ಮುಖ್ಯಮಂತ್ರಿಗಳ ಸಚಿವಾಲಯವು ಒದಗಿಸಿದೆ. ಮುಖ್ಯಮಂತ್ರಿ ಅವರ ಪರಿಹಾರ ನಿಧಿಯಿಂದ 25 ಲಕ್ಷ ರೂ. ಭರಿಸಿರುವ ಸಂಬಂಧ ಸಮಗ್ರ ಕಡತ ಪಡೆಯಲು ‘ದಿ ಫೈಲ್‌’ 2022ರ ಮಾರ್ಚ್‌ 7ರಂದು ಆರ್‌ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿತ್ತು. ಒಂದು ತಿಂಗಳ ಅವಧಿಯೊಳಗೆ ಮಾಹಿತಿ ಒದಗಿಸಬೇಕಿದ್ದ ಮುಖ್ಯಮಂತ್ರಿಗಳ ಸಚಿವಾಲಯವು ಒಂದು ವರ್ಷದವರೆಗೂ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ.

ಆದರೆ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಮೂರ್ನಾಲ್ಕು ದಿನಗಳಲ್ಲೇ ಅಂದರೆ 2023ರ ಮೇ 20ರಂದು ಕಡತವನ್ನು (ಕಡತ ಸಂಖ್ಯೆ; ಸಿಎಂ/43/ಸಿಎಎಂಆರ್‌ಎಫ್‌/ಜಿಇಎನ್‌/2022) ಒದಗಿಸಿದೆ ವಿವರಿಸಿದೆ.

ಸಿಎಂ ವಿವೇಚನೆ ದುರುಪಯೋಗ: ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಾರ್ಪೋರೇಟ್‌ ಕಂಪನಿಗಳು, ಸಾರ್ವಜನಿಕ ಸ್ವಾಮ್ಯದ ಕಂಪನಿಗಳು, ಉದ್ಯಮಿಗಳು, ತೆರಿಗೆದಾರರು ಸೇರಿದಂತೆ ಇನ್ನಿತರೆ ವಲಯದ ಸಾಮಾನ್ಯರೂ ಸಹ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡುತ್ತಾರೆ. ಈ ನಿಧಿಯಲ್ಲಿರುವ ದೇಣಿಗೆ ಹಣವನ್ನು ಅನಾರೋಗ್ಯ ಪೀಡಿತರಾದ ಬಿಪಿಎಲ್‌ ಪಡಿತರದಾರರಿಗೆ, ಅಶಕ್ತರಿಗೆ, ನಿರ್ಗತಿಕರ ಚಿಕಿತ್ಸೆಗಾಗಿ ಬಳಸಲಾಗುತ್ತಿದೆ. ಈ ನಿಧಿಯು ಮುಖ್ಯಮಂತ್ರಿಗಳ ವಿವೇಚನೆಗೆ ಒಳಪಟ್ಟ ನಿಧಿಯಾಗಿದೆ.

ಇಂತಹ ನಿಧಿಯಲ್ಲಿರುವ ಒಟ್ಟು ದೇಣಿಗೆ ಹಣವನ್ನು ಕೊಲೆ ಮತ್ತು ಕ್ರಿಮಿನಲ್‌ ಪ್ರಕರಣಗಳಲ್ಲಿ ಆರೋಪಿತರು ಮೃತರಾದ ಸಂದರ್ಭದಲ್ಲಿ ಅವರ ಅವಲಂಬಿತ ಕುಟುಂಬಗಳಿಗೆ ಪರಿಹಾರ ಒದಗಿಸಲು ಅವಕಾಶವಿಲ್ಲ. ಆದರೂ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಹರ್ಷ ಎಂಬಾತನಿಗೆ 25 ಲಕ್ಷ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದಲೇ ಭರಿಸಲು ಅನುಮೋದನೆ ನೀಡಿರುವುದು ತಮ್ಮ ವಿವೇಚನೆಯನ್ನೇ ದುರುಪಯೋಗಪಡಿಸಿಕೊಂಡಂತಾಗಿದೆ.

ಶಿವಮೊಗ್ಗದ ಸೀಗೆಹಟ್ಟಿ ನಿವಾಸಿ ಮತ್ತು ಬಜರಂಗದಳ ಕಾರ್ಯಕರ್ತ ಹರ್ಷ ಎಂಬಾತ 2022ರ ಫೆ.20ರಂದು ದುಷ್ಕರ್ಮಿಗಳ ಮಾರಕ ದಾಳಿಯಿಂದ ಹತ್ಯೆಗೀಡಾಗಿದ್ದ. ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಅಂದಿನ ಸಚಿವ ಕೆ.ಎಸ್. ಈಶ್ವರಪ್ಪ ಸೇರಿ ಹಲವರು ಭೇಟಿಯಾಗಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು 25 ಲಕ್ಷ ರೂ.ಗಳ ಪರಿಹಾರವನ್ನು ಸರ್ಕಾರದಿಂದಲೇ ನೀಡಲಾಗುವುದು ಎಂದು ಭರವಸೆ ನೀಡಿದ್ದರು.

ಅಧಿಕಾರಿಗಳ ಅಭಿಪ್ರಾಯ ಬದಿಗೊತ್ತಿದ್ದ ಬಸವರಾಜ ಬೊಮ್ಮಾಯಿ: ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದಲೇ 25 ಲಕ್ಷ ರೂ. ಭರಿಸಬೇಕು ಎಂದು ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಮಂಡನೆಯಾಗಿದ್ದ ಕಡತಕ್ಕೆ ಮುಖ್ಯಮಂತ್ರಿ ಅವರ ಅನುಮೋದನೆ ಪಡೆಯಲು ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್‌ ಅವರು ಮೌಖಿಕವಾಗಿ ತಿಳಿಸಿದ್ದರು ಎಂಬುದು ಆರ್‌ಟಿಐ ದಾಖಲೆಯಿಂದ ಗೊತ್ತಾಗಿದೆ.

ಇದಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆಯ ಅಧಿಕಾರಿಗಳು ‘ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಕೋಮು ಗಲಭೆ, ಕಗ್ಗೊಲೆ ಮುಂತಾದ ಪ್ರಕರಣಗಳಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬದವರಿಗೆ ಇಲ್ಲಿಯವರೆಗೂ ಪರಿಹಾರ ಒದಗಿಸಿರುವುದಿಲ್ಲ. ಇಂತಹ ಪ್ರಕರಣಗಳಿಗೆ ಪರಿಹಾರ ಒದಗಿಸಿದಲ್ಲಿ ಆರ್‌ಟಿಐ ಅಡಿ ಅಥವಾ ನ್ಯಾಯಾಲಯದಲ್ಲಿ ಪ್ರಶ್ನೆಗಳು ಉದ್ಭವವಾಗುವ ಸಾಧ್ಯತೆಗಳು ಇರುತ್ತವೆ,’ ಎಂದು ಮುಖ್ಯಮಂತ್ರಿ ಅವರನ್ನು ಎಚ್ಚರಿಸಿದ್ದರು.

ಅಷ್ಟೇ ಅಲ್ಲದೇ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಅವರ ನಿರ್ದೇಶನದಂತೆ ಕಡತ ಮಂಡಿಸಿದ್ದ ಪರಿಹಾರ ನಿಧಿ ಶಾಖೆಯ ಅಧಿಕಾರಿಗಳು ‘ಸಿಎಂಆರ್‌ಎಫ್‌ ಅಡಿಯಲ್ಲಿ ಇಂತಹ ಪ್ರಕರಣಗಳಲ್ಲಿ ಪರಿಹಾರವನ್ನು ಈ ಹಿಂದೆ ನೀಡಿರುವುದಿಲ್ಲ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿ ಕೊಲೆ ಮತ್ತು ಕ್ರಿಮಿನಲ್‌ ಪ್ರಕರಣಗಳಾಗಿದ್ದು ಮೃತರಾದ ಅವಲಂಬಿತ ಕುಟುಂಬಗಳಿಗೆ ಪರಿಹಾರ ನೀಡಲು ಅವಕಾಶವಿರುವುದಿಲ್ಲ,’ ಎಂದು ಟಿಪ್ಪಣಿಯಲ್ಲಿ ತಮ್ಮ ಅಭಿಪ್ರಾಯವನ್ನು ದಾಖಲಿಸಿರುವುದು ಕಡತದೊಳಗಿರುವ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ಪರಿಹಾರ ನಿಧಿಯ ಶಾಖೆಯ ಅಧಿಕಾರಿಗಳು ನೀಡಿದ್ದ ಅಭಿಪ್ರಾಯವನ್ನು ಬದಿಗೊತ್ತಿ ಬಜರಂಗ ದಳ ಕಾರ್ಯಕರ್ತ ಹರ್ಷ ಎಂಬಾತನಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದಲೇ 25 ಲಕ್ಷ ರೂ. ನೀಡಲು ಬಸವರಾಜ ಬೊಮ್ಮಾಯಿ ಅವರು ಅನುಮೋದಿಸಿದ್ದರು. ಅಲ್ಲದೇ ಈ ನಿಧಿಯು ಮುಖ್ಯಮಂತ್ರಿಗಳ ವಿವೇಚನೆಗೆ ಒಳಪಟ್ಟ ನಿಧಿಯಾಗಿದ್ದು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದೂ ಅಧಿಕಾರಿಗಳು ಟಿಪ್ಪಣಿಯಲ್ಲಿ ದಾಖಲಿಸಿರುವುದು ಗೊತ್ತಾಗಿದೆ ಎಂದು ದಿ ಫೈಲ್‌ ಬಹಿರಂಗಪಡಿಸಿದೆ.

ಮೊದಲು ಕೋವಿಡ್‌ ಹಣ ಬಳಕೆ: ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 25 ಲಕ್ಷ ರೂ. ಹರ್ಷ ಕುಟುಂಬ ಸದಸ್ಯರಿಗೆ ಮಂಜೂರಾಗಿತ್ತಾದರೂ ಈ ಹಣವು ಜಿಲ್ಲಾಧಿಕಾರಿಗಳ ಮುಖ್ಯಮಂತ್ರಿ ಪರಿಹಾರ ನಿಧಿ ಬ್ಯಾಂಕ್‌ ಖಾತೆಗೆ ಜಮಾ ಆಗಿರಲಿಲ್ಲ ಎಂಬ ಸಂಗತಿ ತಿಳಿದು ಬಂದಿದೆ. ಈ ಸಂಬಂಧ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಖಚಿತಪಡಿಸಿರುವ ಬಗ್ಗೆ ತಿಳಿಸಿದ್ದು, ಅಲ್ಲದೆ ಈ ಸಂಬಂಧ ಶಿವಮೊಗ್ಗ ಜಿಲ್ಲಾಧಿಕಾರಿಗಳು 2022ರ ಮಾರ್ಚ್‌ 10ರಂದು ಅಧಿಕೃತ ಜ್ಞಾಪನ ಪತ್ರ ಹೊರಡಿಸಿದ್ದರು ಎಂದು ಗೊತ್ತಾಗಿದೆ.

ಹರ್ಷನ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆ (ಸಂಖ್ಯೆ; 38587794605)ಯಿಂದ 25 ಲಕ್ಷ ರೂ. ಪರಿಹಾರ ವಿತರಿಸಿ ಸ್ವೀಕೃತಿ ಪಡೆದು ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆಗೆ ಒಗಿಸಬೇಕು ಎಂದು ಮುಖ್ಯಮಂತ್ರಿಯ ಜಂಟಿ ಕಾರ್ಯದರ್ಶಿ ಅವರು ಸೂಚಿಸಿದ್ದರು. ಆದರೆ ಈ ಪರಿಹಾರದ ಮೊತ್ತವು ಶಿವಮೊಗ್ಗ ಜಿಲ್ಲಾಧಿಕಾರಿಗಳ ಮುಖ್ಯಮಂತ್ರಿಗಳ ಪರಿಹಾರ ನಿಧಿ ಬ್ಯಾಂಕ್‌ ಖಾತೆಗೆ ಜಮಾ ಆಗಿರಲಿಲ್ಲ ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

‘ಮೃತರ ಕುಟುಂಬಕ್ಕೆ ತುರ್ತಾಗಿ ಪರಿಹಾರ ಹಣ ವಿತರಣೆ ಮಾಡಬೇಕಾಗಿರುವುದರಿಂದ ಕೋವಿಡ್‌ 19 ರಡಿ ತಹಸೀಲ್ದಾರ್‌ ಶಿವಮೊಗ್ಗ ಇವರಲ್ಲಿ ಲಭ್ಯವಿರುವ ಅನುದಾನದಲ್ಲಿ ಮೃತ ಹರ್ಷ ಕುಟುಂಬ ವಾರಸುದಾರರಿಗೆ 25 ಲಕ್ಷ ರೂ. ಪರಿಹಾರ ವಿತರಿಸಬೇಕು. ಈ ಪರಿಹಾರ ಮೊತ್ತವು ಜಿಲ್ಲಾಧಿಕಾರಿಗಳ ಮುಖ್ಯಮಂತ್ರಿಗಳ ಪರಿಹಾರ ನಿಧಿ ಬ್ಯಾಂಕ್‌ ಖಾತೆಗೆ ಜಮಾ ಆದ ಕೂಡಲೇ ಈ ಮೊತ್ತವನ್ನು ಮರು ಹಂಚಿಕೆ ಮಾಡಬೇಕು,’ ಎಂದು ನಿರ್ದೇಶನ ನೀಡಲಾಗಿತ್ತು ಎಂದು ಸಮಗ್ರವಾದ ವರದಿ ಮಾಡುವ ಮೂಲಕ ಅಂದಿನ ಸಿಎಂ ನಡೆಯ ಬಗ್ಗೆ ವಿವರಿಸಿದೆ.

ಇನ್ನು ಈ ಪ್ರಕ್ರಿಯೆ ಆದ ನಂತರ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ 25 ಲಕ್ಷ ರೂ. ಅನುದಾನವು ಜಿಲ್ಲಾಧಿಕಾರಿಗಳ ಉಳಿತಾಯ ಖಾತೆಗೆ ಜಮಾ ಆಗಿದ್ದರಿಂದ 25 ಲಕ್ಷ ರೂ. ಗಳನ್ನು ಶಿವಮೊಗ್ಗ ತಹಸೀಲ್ದಾರ್‌ ಅವರಿಗೆ ಬಿಡುಗಡೆ ಮಾಡಲು ಅನುಮೋದಿಸಲಾಗಿತ್ತು ಎಂಬುದು ತಿಳಿದು ಬಂದಿರುವುದಾಗಿ ದಿ ಫೈಲ್‌ ತನ್ನ ವರದಿಯಲ್ಲಿ ತಿಳಿಸಿದೆ.

Leave a Reply

error: Content is protected !!
LATEST
KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಈಗಲೇ ಅರ್ಜಿ ಹಾಕಿ ಬಿಬಿಎಂಪಿ: ಅನಧಿಕೃತ ಹೆಚ್ಚುವರಿ ಮಹಡಿಗಳು, ಪಾದಚಾರಿ ಮಾರ್ಗ ಒತ್ತುವರಿ ತೆರವು KSRTC ಸಮಸ್ತ 4ನಿಗಮಗಳ ಅಧಿಕಾರಿಗಳು ನೌಕರರು ಒಗ್ಗಟ್ಟಾಗಿ: ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವತ್ತ ಚಿಂತಿಸಿದರೆ ಅಸಾ...