ಬಳ್ಳಾರಿ: ನಮ್ಮ ಸರ್ಕಾರ ಈಗಾಗಲೇ ಸಾಕಷ್ಟು ಪೂರ್ವಭಾವಿ ಕ್ರಮಗಳನ್ನು ಕೈಗೊಂಡಿದ್ದರೂ ಸಹ ಬಳ್ಳಾರಿ ಜಿಲ್ಲೆಯ 3 ವ್ಯಕ್ತಿಗಳಲ್ಲಿ ಕರೋನಾ ಸೋಂಕು ದೃಢಪಟ್ಟಿ ರುವುದರಿಂದ ನಿನ್ನೆಯಿಂದ ಬಳ್ಳಾರಿ ಜಿಲ್ಲೆಯಾದ್ಯಂತ ಅದರಲ್ಲೂ ಮುಖ್ಯವಾಗಿ ಹೊಸಪೇಟೆ ಸುತ್ತಮುತ್ತ ದಿಗ್ಬಂಧನವನ್ನು ( ಕರ್ಫ್ಯೂ) ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಇದರಿಂದ ತಾತ್ಕಾಲಿಕವಾಗಿ ಕೆಲವು ಅಡಚಣೆಗಳಾದರೂ ನಾಡಿನ ಸಮಸ್ತ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಈ ಬಗ್ಗೆ ಸೂಕ್ತ ಸಹಕಾರ ನೀಡಬೇಕೆಂದು ನಾನು ಸಾರ್ವಜನಿಕರಲ್ಲಿ ಮತ್ತೊಮ್ಮೆ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಮಾಧ್ಯಮಕ್ಕೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಸೋಂಕಿನ ಪ್ರಕರಣ ಕಂಡುಬಂದ ಹಿನ್ನೆಲೆಯಲ್ಲಿ ಈಗಾಗಲೇ ನಾನು ಬಳ್ಳಾರಿ ಜಿಲ್ಲಾಡಳಿತ, ಪೊಲೀಸ್ ಮತ್ತು ಆರೋಗ್ಯ ಇಲಾಖೆಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು ಅಗತ್ಯ ಎಲ್ಲಾ ನೆರವು ಮತ್ತು ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ನಾನು ಖುದ್ದಾಗಿ ಬಳ್ಳಾರಿ ಜಿಲ್ಲೆಗೆ ಬಂದು ಸಂಬಂಧಪಟ್ಟ ಎಲ್ಲ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದೇನೆ. ಕರೋನಾ ಸೋಂಕಿತರಿಗೆ ಪ್ರತ್ಯೇಕ ವಾರ್ಡುಗಳನ್ನು ತೆರೆಯುವುದರೊಂದಿಗೆ ಶಂಕಿತ ವ್ಯಕ್ತಿಗಳಿಗೆ ಪ್ರತ್ಯೇಕವಾಸದ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಆದರೆ ಇವೆಲ್ಲವುಗಳಿಗಿಂತ ಹೆಚ್ಚಾಗಿ ಸಾರ್ವಜನಿಕರು ವಹಿಸುವ ಮುನ್ನೆಚ್ಚರಿಕೆ, ಕರ್ಫ್ಯೂ ಪಾಲನೆ, ಮಾಸ್ಕ್ ಬಳಕೆ, ಸ್ವಚ್ಛತೆ ಕಾಪಾಡುವುದು, ವ್ಯಕ್ತಿಗಳಿಂದ ವ್ಯಕ್ತಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ವಾಹನ ಮತ್ತು ಸ್ವಯಂ ಸಂಚಾರಗಳಿಗೆ ಕಡಿವಾಣ ಸೇರಿ ಮುಂತಾದ ಸ್ವಯಂ ನಿಯಂತ್ರಣ ಅನುಸರಿಸುವುದೇ ಸಮರ್ಪಕ ಮಾರ್ಗ. ಈ ನಿಟ್ಟಿನಲ್ಲಿ ನಾವೆಲ್ಲರೂ ಹೆಚ್ಚು ಜಾಗೃತರಾಗಿ ಮುಂಜಾಗ್ರತೆವಹಿಸಿ ಈ ಪಿಡುಗಿನ ಸವಾಲನ್ನು ಸಮರ್ಥವಾಗಿ ಎದುರಿಸೋಣ ಎಂದಿದ್ದಾರೆ.