ಮೈಸೂರು: ಕೋವಿಡ್-19 ಸೋಂಕು ತಡೆಗಟ್ಟಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಹಿನ್ನೆಲೆ ಮದ್ಯದಂಗಡಿಗಳನ್ನು ಮುಚ್ಚಲಾಗಿದೆ. ಆದರೆ ಈ ನಡುವೆಯೂ ಅಕ್ರಮವಾಗಿ ಮದ್ಯ ಮಾರಾಟ ನಡೆಯುವುದು ಕಂಡು ಬಂದರೆ ಸಾರ್ವಜನಿಕರು ಕೂಡಲೇ ಅಬಕಾರಿ ಇಲಾಖೆಯ ಕಂಟ್ರೋಲ್ ರೂಂ ಗೆ ತಿಳಿಸಿ ಎಂದು ಮೈಸೂರಿನ ಅಬಕಾರಿ ಇಲಾಖೆಯ ಉಪ ಆಯುಕ್ತ ಕೆ.ಎಸ್.ಮುರಳಿ ತಿಳಿಸಿದರು.
ಮಂಗಳವಾರ ಮೈಸೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿದ್ದ ಫೇಸ್‌ಬುಕ್ ಪೇಜ್ ಲೈವ್ ನಲ್ಲಿ ಮಾತನಾಡಿದ ಅವರು, ಏಪ್ರಿಲ್ 14 ರವರೆಗೆ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ನಂತರದ ದಿನಗಳಲ್ಲಿ ಸರ್ಕಾರದ ಆದೇಶದಂತೆ ಪರಿಸ್ಥಿತಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಕ್ರಮ ಮದ್ಯ ಮರಾಟದ ತಡೆಗೆ ಅಬಕಾರಿ ಇಲಾಖೆ ವತಿಯಿಂದ ೧೩ ತಂಡಗಳು ೩ ಬ್ಯಾಚ್ ಗಳಲ್ಲಿ ದಿನದ ೨೪ ಗಂಟೆಯೂ ನಿರಂತರವಾಗಿ ಕೆಲಸ ನಿರ್ವಹಿಸುತ್ತಿದೆ. ನಿರ್ಬಂಧದ ನಡುವೆಯೂ ಎಲ್ಲಿಯಾದರೂ ಬಿಳಿ ಕ್ಯಾನ್ ಗಳಲ್ಲಿ ದ್ರವ್ಯಗಳನ್ನು ಸಾಗಿಸುವುದು, ಕಳ್ಳ ಬಟ್ಟಿ ಅಥವಾ ವಿಷಪೂರಿತ ಮದ್ಯ ಮಾರಾಟ ಅಥವಾ ಸೇವನೆ ಮಾಡುವುದು ಕಂಡುಬಂದಲ್ಲಿ ಅಬಕಾರಿ ಇಲಾಖೆಯ ಕಂಟ್ರೋಲ್ ರೂಂ ಸಂಖ್ಯೆ : 0821-2541861ಕ್ಕೆ ಕರೆಮಾಡಿ ಮಾಹಿತಿ ತಿಳಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈಗಾಗಲೇ ನಮ್ಮ ಇಲಾಖೆ ವತಿಯಿಂದ 40 ಲೀಟರ್ ಸೇಂದಿಯನ್ನು ವಶ ಪಡಿಸಿಕೊಂಡಿದ್ದೇವೆ. ಕೆಲವೆಡೆ ಕಳಪೆ ಮದ್ಯ ಸೇವನೆ ಮಾಡುತ್ತಿರುವುದು ತಿಳಿದುಬಂದಿದೆ. ಇಂತಹ ವಿಷಪೂರಿತ ಮದ್ಯಗಳಿಂದ ಮದ್ಯವ್ಯಸನಿಗಳು ದೂರವಿರುವಂತೆ ಎಚ್ಚರಿಕೆ ನೀಡಿದರು.
ಈಗಾಗಲೇ ಜನರು ಮನೆಯಲ್ಲಿಯೇ ಇರಲು ಜಿಲ್ಲಾಡಳಿತ ಸಕಲ ರೀತಿಯಲ್ಲೂ ವ್ಯವಸ್ಥೆ ಮಾಡಿದೆ. ಅದರಂತೆ ಸಾರ್ವಜನಿಕರು ಮನೆಯಲ್ಲಿಯೇ ಇದ್ದು ತಮ್ಮ ಹಾಗೂ ಕುಟುಂಬದ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.