ಧಾರವಾಡ: ಕೋವಿಡ್ 19 ಪರಿಹಾರ ನಿಧಿಗೆ ದೇಣಿಗೆ ಅರ್ಪಿಸಲು ಬಯಸುವ ಸಾರ್ವಜನಿಕರು ಖುದ್ದಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡದೇ, ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಆನ್ ಲೈನ್ ಮೂಲಕವೇ ಉದಾರ ನೆರವು ನೀಡಬಹುದು. ಇದಕ್ಕಾಗಿ ಮನೆಗಳಿಂದ ಹೊರಬರುವುದು ಬೇಡ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಮನವಿ ಮಾಡಿದ್ದಾರೆ.
ಕೊರೊನಾ ಸೋಂಕಿನಿಂದ ಬಳಲುತ್ತಿರುವ ಸಾರ್ವಜನಿಕರಿಗೆ ವೈದ್ಯೋಪಚಾರವನ್ನು ಸರ್ಕಾರದಿಂದ ಮಾಡಲಾಗುತ್ತಿದೆ. ರೋಗವನ್ನು ಪತ್ತೆ ಹಚ್ಚಲು ಹುಬ್ಬಳ್ಳಿಯ ಕಿಮ್ಸ್ ನಲ್ಲಿಯೂ ಪ್ರಯೋಗಾಲಯ ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಸೋಂಕು ಹರಡದಂತೆ ಸಾರ್ವಜನಿಕರು ಸರ್ಕಾರದೊಂದಿಗೆ ಕೈಜೋಡಿಸಬೇಕು. ಮತ್ತು ಸರ್ಕಾರ ನೀಡುವ ಪ್ರತಿಯೊಂದು ಸೂಚನೆಗಳನ್ನು ಪಾಲಿಸಬೇಕು ಎಂದರು.
ಕೋವಿಡ್ – 19 ಕೊರೊನಾ ಸೋಂಕು ರೋಗವನ್ನು ತಡೆಗಟ್ಟಲು ಕರ್ನಾಟಕ ಸರ್ಕಾರವು ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ. ಈ ಕಾರ್ಯಕ್ಕೆ ದೇಣಿಗೆ ಸಲ್ಲಿಸಲು ಬಯಸುವವರು ಸಾಧ್ಯವಾದಷ್ಟು ಚೆಕ್ ಅಥವಾ ಡಿಡಿ ರೂಪದಲ್ಲಿ ನೀಡದೇ, ಮುಖ್ಯಮಂತ್ರಿಯವರ ಪರಿಹಾರ ನಿಧಿ ಕೋವಿಡ್ -19 ಎಸ್.ಬಿ.ಐ. (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ವಿಧಾನ ಸೌಧ ಶಾಖೆಯ ಖಾತೆ ಸಂಖ್ಯೆ 39234923151, ಐ.ಎಫ್.ಸಿ. ಕೋಡ್ SBIN0040277ಮತ್ತು MIRCಸಂಖ್ಯೆ 560002419 ಸಂಖ್ಯೆಗೆ ಆನ್ ಲೈನ್ ನಲ್ಲಿ ಇ-ಪೇಮೆಂಟ್ ಮೂಲಕ ಸಂದಾಯ ಮಾಡಿ, ಅದರ ಪ್ರತಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯ [email protected] ಇಮೇಲ್ ವಿಳಾಸಕ್ಕೆ, ಮಾಹಿತಿ ಮತ್ತು ಪಾಸ್ ಪೋರ್ಟ್ ಭಾವಚಿತ್ರ ಕಳಿಸಿದರೆ ಅವುಗಳನ್ನು ಮಾಧ್ಯಮಗಳಲ್ಲಿ ಪ್ರಕಟಣೆಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಈ ಕಾರ್ಯಕ್ಕಾಗಿ ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ವೈಯಕ್ತಿಕವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಬರುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ, ಆರೋಗ್ಯ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಕೋರಿದ್ದಾರೆ.