ಬೆಂಗಳೂರು: ಕೊರೊನಾ ವೈರಸ್ ಸಮಸ್ಯೆಯಿಂದ ಉಂಟಾಗಿರುವ ಆರ್ಥಿಕ ನಷ್ಟವನ್ನು ಸರಿದೂಗಿಸಿಕೊಳ್ಳಲು ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳ ವೇತನದಲ್ಲಿ ಯಾವುದೇ ಕಡಿತಗೊಳಿಸದಿರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಹಲವು ರಾಜ್ಯಗಳ ಸರ್ಕಾರಗಳು ಈಗಾಗಲೇ ತಮ್ಮ ನೌಕರರು ಹಾಗೂ ಅಧಿಕಾರಿಗಳ ಸಂಬಳ ಕಟ್ ಮಾಡಿ ಆದೇಶ ಹೊರಡಿಸಿವೆ. ಆದರೂ ರಾಜ್ಯ ಸರ್ಕಾರ ಅಂತಹ ಚಿಂತನೆ ಮಾಡಿಲ್ಲ ಎಂದು ಹೇಳಲಾಗಿದೆ.
ಲಾಕ್ಡೌನ್ ವಿಸ್ತರಣೆ ಆಗದೇ ನಿಗದಿತ ದಿನದಂದೇ ಕೊನೆಗೊಂಡರೇ ಏನೂ ತೊಂದರೆ ಇಲ್ಲ. ವಿಸ್ತರಣೆ ಆದಲ್ಲಿ ಸಂಬಳ ಕಡಿತದ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ ಎಂಬ ಆಲೋಚನಯಲ್ಲೂ ಮುಳುಗಿದೆ ಎನ್ನಲಾಗಿದೆ. ಆದರೆ, ಮುಂದಿನ ಪರಿಸ್ಥಿತಿಯನ್ನು ಅರಿತು ಎಚ್ಚರಿಕೆ ಹೆಜ್ಜೆ ಹಾಕಲು ತೀರ್ಮಾನಿಸಿದೆ.
ಏನೆ ಆದರೂ ಸದ್ಯದ ಈ ಮಟ್ಟಿಗಂತು ನೌಕರರ ಜೇಬಿಗೆ ಕತ್ತರಿ ಹಾಕುವಂತಹ ಯಾವುದೇ ಪ್ರಸ್ತಾಪ ಇಲ್ಲ ಎಂದು ಹಣಕಾಸು ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ ಎಂದು ಹೇಳಲಾಗಿದೆ.
ಈಗಾಗಲೇ ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಾಸ್ಥಾನಗಳಲ್ಲಿ ಕೊರೋನಾ ತಂದಿರುವ ಆರ್ಥಿಕ ಸಂಕಷ್ಟದಿಂದ ಪಾರಾಗಲು ತಮ್ಮ ನೌಕರರು ಮತ್ತು ಅಧಿಕಾರಿಗಳ ಜೇಬಿಗೆ ಭಾರಿ ಕೈಯನ್ನೇ ಹಾಕಿವೆ. ಮುಖ್ಯಮಂತ್ರಿಯಾದಿಯಾಗಿ ಎಲ್ಲ ಜನ ಪ್ರತಿನಿಧಿಗಳು ಆಡಳಿತ ಸೇವೆಯ ವಿವಿಧ ಇಲಾಖೆಯ ಅಧಿಕಾರಿಗಳು, ಎ,ಬಿ,ಸಿ ದರ್ಜೆ ನೌಕರರ ವೇತನವನ್ನು ಕಡಿತಗೊಳಿಸಿ ಆದೇಶ ಜಾರಿ ಮಾಡಲಾಗಿದೆ. ಆದರೆ ಕರ್ನಾಟಕದಲ್ಲಿ ಅಂಥ ಯಾವುದೇ ಸ್ಥಿತಿ ಬಂದಿಲ್ಲ ಎಂದು ಹೇಳಲಾಗುತ್ತಿದೆ.