ಬೆಂಗಳೂರು: ಕೊರೊನಾ ವೈರಸ್ ಪ್ರಪಂಚಾದ್ಯಂತ ಭಯವನ್ನು ಸೃಷ್ಟಿಸಿದೆ. ಜತೆಗೆ ಕೆಲವರಿಗೆ ಖುಷಿಯನ್ನೂ ಹುಟ್ಟಿಸಿದೆ. ಅಂದರೆ ಕೊರೊನಾ ವೈರಸ್ ಜೈಲು ಹಕ್ಕಿಗಳನ್ನು ಕಾಡಬಹುದು ಎಂಬ ಹಿನ್ನೆಲೆಯಲ್ಲಿ ವಿಚಾರಣಾಧೀನ ಕೈದಿಗಳನ್ನು ಜಾಮೀನಿ ಮೇಲೆ ತಾತ್ಕಾಲಿಕವಾಗಿ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜೈಲುಗಳಲ್ಲಿ ಬಂಧಿಯಾಗಿರುವ ವಿಚಾರಣಾಧೀನ ಕೈಗಳಿಗೆ ತಾತ್ಕಾಲಿಕವಾಗಿ ಬಿಡುಗಡೆ ಭಾಗ್ಯ ಸಿಕ್ಕಿದೆ.
ಅಂದರೆ, ಕಾರಾಗೃಹದಲ್ಲಿ ಇಕ್ಕಟ್ಟಿನ ಪರಿಸ್ಥಿತಿ ಇದ್ದು, ಸೋಂಕು ಹರಡುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಸುಪ್ರೀಂಕೋರ್ಟ್ ಆದೇಶದಂತೆ ಎಲ್ಲ ಜೈಲುಗಳಲ್ಲೂ 7 ವರ್ಷಕ್ಕಿಂತ ಕಡಿಮೆ ಶಿಕ್ಷೆಗೆ ಗುರಿಯಾಗಬಹುದಾದ ಪ್ರಕರಣದ ಆರೋಪ ಇರುವ ಕೈದಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುತ್ತಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ 100 ಕೈದಿಗಳು, ಹುಬ್ಬಳ್ಳಿ ಕೇಂದ್ರ ಕಾರಾಗೃಹದಲ್ಲಿದ್ದ 11, ಚಾಮರಾಜನಗರದ 18 ಮತ್ತು ಹಾವೇರಿಯಲ್ಲಿ 21 ಮಂದಿಯನ್ನು ಬಿಡುಗಡೆ ಮಾಡಲಾಗಿದೆ.
ಕಳವು ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಜೈಲು ಸೇರಿದ್ದ 120 ಅಪರಾಧಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಲಾಗಿತ್ತು. ಅವರಲ್ಲಿ 100 ಮಂದಿ ಜೈಲು ಹಕ್ಕಿಗಳನ್ನು 60 ದಿನದ ವರೆಗೆ ಜಾಮೀನಿನ ಮೇಲೆ ಆರುಮಂದಿ ಇದ್ದ ನ್ಯಾಯಾಧೀಶರ ತಂಡ ಬಿಡುಗಡೆ ಮಾಡಿದೆ.
ಬಿಡುಗಡೆಗೊಂಡ 100 ಮಂದಿಯೂ 60ದಿನದ ನಂತರ ಮತ್ತೆ ಜೈಲು ಸೇರಬೇಕಿದೆ. ಜತೆಗೆ ಅವರು ಹೊರಗಡೆ ಎಲ್ಲಿಯೂ ಓಡಾಡಂತೆ ಎಚ್ಚರಿಕೆಯನ್ನು ನೀಡಲಾಗಿದೆ.
ಇನ್ನು ಹುಬ್ಬಳ್ಳಿಯ ಜೈಲಿನಲ್ಲಿ ಏಳು ವರ್ಷ ಹಾಗೂ ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆಗೆ ಒಳಗಾದ ಅಪರಾಧ ಪ್ರಕರಣ ಹೊಂದಿದ್ದ 11 ಜನ ಕೈದಿಗಳನ್ನು ನಿನ್ನೆ ಬಿಡುಗಡೆ ಮಾಡಲಾಗಿದೆ. ಕೊರೊನೊ ಸೋಂಕು ವ್ಯಾಪಕವಾಗಿ ಹರಡುವ ಆತಂಕವಿರುವ ಕಾರಣ ಕಾರಾಗೃಹದಲ್ಲಿರುವ ಕೈದಿಗಳ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ಏಳು ವರ್ಷಗಳಿಗಿಂತ ಕಡಿಮೆ ಶಿಕ್ಷೆ ಎದುರಿಸುತ್ತಿರುವ ಕೈದಿಗಳ ಪಟ್ಟಿ ಸಿದ್ಧಪಡಿಸುವಂತೆ ಎಲ್ಲ ಜೈಲುಗಳ ಮುಖ್ಯಸ್ಥರಿಗೆ ಮೇಲಧಿಕಾರಿಗಳು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಇಲ್ಲಿನ ಉಪ ಕಾರಾಗೃಹದ ಅಧೀಕ್ಷಕ ಅಶೋಕ ಭಜಂತ್ರಿ ಅವರು 34 ಜನ ಕೈದಿಗಳ ಪಟ್ಟಿ ಕಳುಹಿಸಿದ್ದರು. ಇದರಲ್ಲಿ 11 ಕೈದಿಗಳ ಬಿಡುಗಡೆಗೆ ಮೇಲಧಿಕಾರಿಗಳು ಸಮ್ಮತಿ ಸೂಚಿಸಿದ್ದಾರೆ.
ಚಾಮರಾಜ ನಗರ ಕಾರಾಗೃಹದಲ್ಲೂ 7 ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆಗೆ ಗುರಿಯಾಗುವಂಥ 18 ಕೈದಿಗಳಿದ್ದರು. ಹೀಗಾಗಿ ಅವರೆಲ್ಲರನ್ನೂ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಯಾಲಯದ ನ್ಯಾಯಾಧೀಶರಾದ ಡಿ. ವಿನಯ್ ಅವರ ಆದೇಶದಂತೆ ಕಾರಾಗೃಹ ಅಧಿಕಾರಿ ವಿಜಯ್ ಬುಧವಾರ ಬಿಡುಗಡೆ ಮಾಡಿದ್ದಾರೆ. ಅದರಂತೆ ಹಾವೇರಿಯಲ್ಲೂ 21 ವಿಚಾರಣಾಧೀನ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ.