ತಿ.ನರಸೀಪುರ: ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಆರೋಗ್ಯ ಇಲಾಖೆ ಮತ್ತು ಬೀಡನಹಳ್ಳಿ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಬೀಡನಹಳ್ಳಿ ಗ್ರಾಮದ ಎಲ್ಲಾ ರಸ್ತೆ ಮತ್ತು ಚರಂಡಿಗಳಿಗೆ ಶುಕ್ರವಾರ ಸೋಂಕು ನಿವಾರಕ ರಾಸಾಯನಿಕ ಸಿಂಪಡಣೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಪಿಡಿಒ ಲಿಂಗರಾಜು, ಕೋವಿಡ್-19 ನಿಯಂತ್ರಣದಲ್ಲಿ ಸಾರ್ವಜನಿಕರ ಜವಾಬ್ದಾರಿ ಮಹತ್ವದ್ದಾಗಿದೆ. ವಿನಾ ಕಾರಣ ಮನೆಯಿಂದ ಹೊರಗೆ ಸುತ್ತಾಡಬೇಡಿ. ತಮ್ಮ ತಮ್ಮ ಮನೆಯಲ್ಲಿ ಉಳಿದುಕೊಳ್ಳುವುದೇ ಸುರಕ್ಷಿತವಾದ ಮಾರ್ಗ. ಹೀಗಾಗಿ ಎಲ್ಲಾ ಜನರು ಆರೋಗ್ಯವನ್ನು ಕಾಪಾಡುವ ಜತೆಗೆ ನಿಮ್ಮ ಸುತ್ತಮುತ್ತಲಿನ ನಿವಾಸಿಗಳ ಅರೋಗ್ಯದ ಬಗ್ಗೆಯೂ ಗಮನಹರಿಸುವುದು ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.
ಅರ್ಧ ಗಂಟೆಗೊಮ್ಮೆ ಕೈ ಗಳನ್ನು ಸಾಬೂನಿನಿಂದ ತೊಳೆದುಕೊಳ್ಳಿ, ಸುಮ್ಮ ಸುಮ್ಮನೆ ಯಾವುದೇ ವಸ್ತುಗಳನ್ನು ಮುಟ್ಟಬಾರದು. ರಸ್ತೆಯಲ್ಲಿ ಉಗುಳಬಾರದು. ಬಿಸಿಯಾದ ನೀರು ಆಹಾರ ಸೇವಿಸಿ, ಕೆಮ್ಮುವಾಗ ಸೀನುವಾಗ ಕರವಸ್ತ್ರ ಬಳಕೆ ಮಾಡಿ, ಅಗತ್ಯ ಸಾಮಗ್ರಿಗಳನ್ನು ಕೊಳ್ಳುವಾಗ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ. ಜ್ವರ ಕೆಮ್ಮು ನೆಗಡಿ ಲಕ್ಷಣಗಳು ಕಾಣಿಸಿಕೊಂಡರೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ, ಜ್ವರ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯರ ಸಲಹೆ ಮೇರೆಗೆ ಔಷಧ ಪಡೆದುಕೊಳ್ಳಬೇಕು. ಆದರೆ ಸ್ವಯಂ ಚಿಕಿತ್ಸೆ ಅಪಾಯಕಾರಿ ಎಂದು ಹೇಳಿದರು.
ಈಗಾಗಲೇ ಎಲ್ಲಾ ಚರಂಡಿಗಳಿಗೂ ಬ್ಲೀಚಿಂಗ್ ಪಂಡರ್ ಸಿಂಪಡಿಸಿದ್ದು, ಚರಂಡಿಗಳ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದರು.