ಕಲಬುರಗಿ: ಯಾದಗಿರಿ ಜಿಲ್ಲೆಯ ಯರಗೋಳದೊಡ್ಡ ಕೆರೆ, ದುಪ್ಪಳ್ಳಿ ಕೆರೆಗಳಲ್ಲಿ ಮೀನು ಸಾಕಾಣಿಕೆ ಮಾಡುವ ಸಂಬಂಧ ಎರಡು ಸಂಘಗಳ ನಡುವೆ ಉಂಟಾಗಿರುವ ಶೀತಲ ಸಮರ ಮತ್ತು ಅಧಿಕಾರಿಗಳ ನಡೆಯನ್ನು ಪ್ರಶ್ನಿಸಿ ಒಂದು ಸಂಘಟನೆಯ ಪದಾಧಿಕಾರಿಗಳು ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಸಂಚಾರಿ ನ್ಯಾಯ ಪೀಠದ ಮೆಟ್ಟಿಲೇರಿದ್ದಾರೆ.
ಗಂಗಾಮಾತೆ ಮೀನುಗಾರರ ಸಹಕಾರ ಸಂಘದ ಮುಖ್ಯ ಪ್ರವರ್ತಕ ಸಹೇಬ್ ಗೌಡ ಸೇರಿ 28 ಜನರು ಕಲಬುರಗಿ ಹೈಕೋರ್ಟ್ ಸಂಚಾರಿ ನ್ಯಾಯ ಪೀಠದ ಮೆಟ್ಟಿಲೇರಿದ್ದು, ಇವರ ಪರ ಸುಪ್ರೀಂ ಕೋರ್ಟ್ ಹಾಗೂ ಹೈ ಕೋರ್ಟ್ ವಕೀಲರಾದ ಎಚ್.ಬಿ.ಶಿವರಾಜು ವಕಾಲತ್ತು ವಹಿಸಿದ್ದಾರೆ.
ಸದ್ಯ ಕಲಬುರಗಿ ಹೈಕೋರ್ಟ್ ಸಂಚಾರಿ ನ್ಯಾಯ ಪೀಠದ ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರ ಏಕಸದಸ್ಯ ಪೀಠ ಇಂದು (ಜ.12) ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಗೊಂಡ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಕೀಲ ಶಿವರಾಜು ಅವರು ವಾದ ಮಂಡಿಸಿದರು.
ವಾದವನ್ನು ಆಲಿಸಿದ ಬಳಿಕ ಸಂಚಾರಿ ನ್ಯಾಯ ಪೀಠವು, ಪ್ರಮುಖವಾಗಿ ಗಂಗಾಪರಮೇಶ್ವರಿ ಮೀನುಗಾರರ ಸಹಕಾರ ಸಂಘದ ಪದಾಧಿಕಾರಿಗಳು ಮತ್ತು ಮೀನುಗಾರಿಕಾ ಇಲಾಖೆ ನಿರ್ದೇಶಕರು, ಉಪ ನಿರ್ದೇಶಕರು, ಜಂಟಿ ನಿರ್ದೇಶಕರು ಮತ್ತು ಯಾದಗಿರಿ ಜಿಲ್ಲಾ ಪಂಚಾಯಿತಿಯ ಮೀನುಗಾರಿಕೆ ವಿಭಾಗದ ಅಧಿಕಾರಿಗಳು ಸೇರಿ ಒಟ್ಟು 8 ಅಧಿಕಾರಿಗಳಿಗೆ ನೋಟಿಸ್ ಜಾರಿಮಾಡಿ ವಿಚಾರಣೆಯನ್ನು ಮುಂದೂಡಿದೆ.
ಏನಿದು ಪ್ರಕರಣ: ಯಾದಗಿರಿ ಜಿಲ್ಲೆಯಲ್ಲಿರುವ ಯರಗೋಳದೊಡ್ಡ ಕೆರೆ, ದುಪ್ಪಳ್ಳಿ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡುವ ಸಂಬಂಧ ಗಂಗಾಮಾತೆ ಮೀನುಗಾರರ ಸಹಕಾರ ಸಂಘ ಮತ್ತು ಗಂಗಾಪರಮೇಶ್ವರಿ ಮೀನುಗಾರರ ಸಹಕಾರ ಸಂಘದ ನಡುವೆ ಪೈಪೂಟಿ ಉಂಟಾಗಿದೆ.
ಈ ನಡುವೆ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಸದ್ಯ ಗಂಗಾಪರಮೇಶ್ವರಿ ಮೀನುಗಾರರ ಸಹಕಾರ ಸಂಘಕ್ಕೆ ಯರಗೋಳದೊಡ್ಡ ಕೆರೆ, ದುಪ್ಪಳ್ಳಿ ಕೆರೆಗಳನ್ನು ಮೀನು ಸಾಕಾಣಿಕೆ ಮಾಡಲು ಗುತ್ತಿಗೆ ನೀಡಿದ್ದಾರೆ. ಆದರೆ ಇದು ಕಾನೂನು ಬಾಹಿರವಾಗಿದ್ದು, ಈ ಕೆರೆಗಳನ್ನು ನಮಗೆ ಗುತ್ತಿಗೆಗೆ ನೀಡಬೇಕು ಎಂದು ಗಂಗಾಮಾತೆ ಮೀನುಗಾರರ ಸಹಕಾರ ಸಂಘದ ಪದಾಧಿಕಾರಿಗಳು ಕೇಳುತ್ತಿದ್ದಾರೆ.
ಇನ್ನು ಈ ಎರಡು ಸಂಘಗಳು ಒಂದೆ ಎಂಬುದಾಗಿ ತಿಳಿದು ಅಧಿಕಾರಿಗಳು ಗಂಗಾಪರಮೇಶ್ವರಿ ಮೀನುಗಾರರ ಸಹಕಾರ ಸಂಘಕ್ಕೆ ಕೆರೆಗಳನ್ನು ಗುತ್ತಿಗೆಗೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಇವೆರಡು ಒಂದೇ ಅಲ್ಲ ಹಾಗಾಗಿ ಇದನ್ನು ಬದಲಾಯಿಸಿ ನಮಗೆ ನೀಡಬೇಕು ಎಂದು ಗಂಗಾಮಾತೆ ಮೀನುಗಾರರ ಸಹಕಾರ ಸಂಘದ ಪದಾಧಿಕಾರಿಗಳು ಅಧಿಕಾರಿಗಳನ್ನು ಕೇಳಿದ್ದಾರೆ.
ಆದರೆ ಅಧಿಕಾರಿಗಳು ಇದಕ್ಕೆ ಒಪ್ಪದ ಕಾರಣ ಗಂಗಾಮಾತೆ ಮೀನುಗಾರರ ಸಹಕಾರ ಸಂಘದ ಮುಖ್ಯ ಪ್ರವರ್ತಕ ಸಹೇಬ್ ಗೌಡ ಸೇರಿ 28 ಜನರು ಕಲಬುರಗಿ ಹೈಕೋರ್ಟ್ ಸಂಚಾರಿ ನ್ಯಾಯ ಪೀಠದ ಮೆಟ್ಟಿಲೇರಿದ್ದಾರೆ. ಇನ್ನು ಈ ಸಂಬಂಧ ಇಂದು ವಿಚಾರಣೆ ನಡೆಸಿದ ಕಲಬುರಗಿ ಹೈಕೋರ್ಟ್ ಸಂಚಾರಿ ನ್ಯಾಯ ಪೀಠ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಗಂಗಾಪರಮೇಶ್ವರಿ ಮೀನುಗಾರರ ಸಹಕಾರ ಸಂಘಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.