ದಾವಣಗೆರೆ: ಬರಗಾಲದ ಕಷ್ಟ ಅರಿಯದ. ಬರ ಪರಿಹಾರ ನೀಡದ. ರಾಜಕೀಯ ಪಕ್ಷದ ಅಭ್ಯರ್ಥಿಗಳಿಗೆ ಹಳ್ಳಿಗಳ ಪ್ರವೇಶ ನಿರ್ಬಂಧಿಸುವ ಮೂಲಕ ಎಚ್ಚರಿಕೆಯ ಸಂದೇಶ ನೀಡಿ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ರೈತರತ್ನ ಕುರುಬೂರು ಶಾಂತಕುಮಾರ್ ಕರೆ ನೀಡಿದ್ದಾರೆ.
ಇಂದು ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಮುಖಂಡರಿಗೆ ಅಧಿಕಾರದ ಹುಚ್ಚು ರೈತರಿಗೆ ಜೀವನದ ಸಂಕಷ್ಟ, ರೈತರ ಬದುಕು ರಕ್ಷಿಸುವವರು ಯಾರು? ಇಂದು ರಾಜಕಾರಣ ಕುಟುಂಬ ರಾಜಕೀಯವಾಗಿ ವ್ಯಾಪಕವಾಗಿ ವ್ಯಾಪಾರವಾಗಿದೆ. ಮತ ನೀಡಿದ ಪ್ರಜೆಗಳು ಸಂಕಷ್ಟ ಪಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಬರಗಾಲದಿಂದ ತತ್ತರಿಸಿರುವ ರೈತರ ಸಂಕಷ್ಟ ಆಲಿಸಲು ಯಾರು ಇಲ್ಲ. ಅಧಿಕಾರ ಹಿಡಿಯಲು ಪೈಪೋಟಿ ನಡೆಸುತ್ತಿದ್ದಾರೆ. ರಾಜಕೀಯ ಕ್ಷೇತ್ರ ವ್ಯಾಪಾರಕ್ಕಿಂತಲೂ ಹೆಚ್ಚು ಲಾಭಗಳಿಸುವ ಕ್ಷೇತ್ರವಾಗಿದೆ ಎಂದು ಕಿಡಿಕಾರಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಬರದ ಸಂಕಷ್ಟ ಕಾಲದಲ್ಲಿ ಜಗಳವಾಡುತ್ತಾ ಮನರಂಜನೆ ನೀಡುತ್ತಿದ್ದಾರೆ. ಇದರಿಂದ ರೈತರ ಹೊಟ್ಟೆ ತುಂಬುವುದಿಲ್ಲ. ಈ ನಾಟಕ ಬಿಡಿ, ಪರಿಹಾರ ನೀಡಿ. ಇಲ್ಲವೇ ಮತ ಕೇಳಲು ಬರಬೇಡಿ ಎಂದು ಮತ ಕೇಳಲು ಬರುವ ಅಭ್ಯರ್ಥಿಗಳನ್ನು ಊರಿಂದ ಹೊರಗಿಡಿ ಎಂದು ಕರೆ ನೀಡಿದರು.
ಇನ್ನು ಚುನಾವಣಾ ಆಯೋಗ ನೋಟಾ ಮತದಾನಕ್ಕೆ ಬದಲಾವಣೆ ತಂದು. ನೋಟಾ ಮತದಾನಕ್ಕೂ ಗೌರವ ತರುವಂತಹ ಮಾನದಂಡ ಜಾರಿಗೆ ತರಬೇಕು ಎಂದು ಒತ್ತಾಯಿಸಲಾಗುವುದು ಎಂದು ಹೇಳಿದರು.
ದನಕರುಗಳಿಗೆ ಮೇವು ಸಿಗದಂತಾಗಿದೆ: ರಾಜ್ಯದಲ್ಲಿ ಕುಡಿಯುವ ನೀರು, ದನಕರುಗಳಿಗೆ ಮೇವು ಸಿಗದಂತಾಗಿದೆ ಅಧಿಕಾರಿಗಳು ಚುನಾವಣೆ ಕಾರಣ ಹೇಳಿ ರೈತರನ್ನು ನಿರ್ಲಕ್ಷ್ಯ ಮಾಡಿದ್ದಾರೆ. ರಾಜಕೀಯ ಪಕ್ಷದ ಮುಖಂಡರು ಅಧಿಕಾರ ಹಿಡಿಯುವ ಹುಚ್ಚಿನಲ್ಲಿ ತೇಲಾಡುತ್ತಿದ್ದಾರೆ. ಬರಗಾಲದ ನೀರಿನ ಸಮಸ್ಯೆಯಿಂದ ರೈತರ ಬೆಳೆಗಳು ಒಣಗುತ್ತಿವೆ. ಕೊಳವೆ ಬಾವಿಗಳಲ್ಲಿ ನೀರು ಇಂಗುತ್ತಿವೆ. ಕೃಷಿ ಕ್ಷೇತ್ರ ದುರ್ಬಲವಾಗುತ್ತಿದೆ ಇದು ರಾಜಕೀಯ ಪಕ್ಷಗಳಿಗೆ ಕಾಣುತ್ತಿಲ್ಲವೇ ಎಂದು ಕಾರವಾಗಿ ಪ್ರಶ್ನಿಸಿದರು.
ರೈತರು ಎಚ್ಚೆತ್ತುಕೊಂಡು ಸ್ವಾಭಿಮಾನದಿಂದ ಹಳ್ಳಿಗಳಲ್ಲಿ ಗುಡಿ ಗೋಪುರ ಕಟ್ಟುವ ಚಿಂತನೆ ಮಾಡುವ ಬದಲು ಕೆರೆ ಕಟ್ಟೆಗಳ ಹೂಳೆತ್ತುವ ಮೂಲಕ ಪುನಶ್ಚೇತನಗೊಳಿಸುವ ಹಾಗೂ ಹೊಸದಾಗಿ ಕೆರೆಕಟ್ಟೆ ನಿರ್ಮಿಸುವ ಕೆಲಸದಲ್ಲಿ ಶ್ರದ್ದೆ ವಹಿಸಿದರೆ ಮುಂದಿನ ತಲೆಮಾರಿಗೆ ಕೊಳವೆ ಬಾವಿಗಳಲ್ಲಿ ನೀರು ಶೇಖರಣೆಯಾಗಿ ಕೃಷಿ ಕ್ಷೇತ್ರ ಸಮೃದ್ಧಿಯಾಗಲು ಸಹಕಾರಿಯಾಗುತ್ತದೆ. ಇಂದಿನ ರಾಜಕಾರಣಿಗಳಿಗೆ ಇದೆಲ್ಲ ಕಾಣುವುದಿಲ್ಲ ಅವರಿಗೆ ಬೇಕಾಗಿಯೂ ಇಲ್ಲ ಎಂದು ಹೇಳಿದರು.
ರಾಜ್ಯಾದ್ಯಂತ 78 ಸಕ್ಕರೆ ಕಾರ್ಖಾನೆಗಳು 5 ಕೋಟಿ 80 ಲಕ್ಷ ಕಬ್ಬು ನುರಿಸಿವೆ. ಸುಮಾರು 2600 ಕೋಟಿ ರೂಪಾಯಿ ಕಬ್ಬಿನ ಬಾಕಿ ಹಣವನ್ನು ರೈತರಿಗೆ ಪಾವತಿಸಿಲ್ಲ. ಕಬ್ಬು ಹಾಗೂ ಸಕ್ಕರೆ ಅಭಿವೃದ್ಧಿ ಆಯುಕ್ತರು ಈ ಕೂಡಲೇ ಕಾನೂನು ಕ್ರಮ ಕೈಗೊಂಡು ಶೇಕಡ 15 ಬಡ್ಡಿ ಸೇರಿಸಿ ಹಣ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಒಟಿಎಸ್ ಯೋಜನೆಯಡಿ 52 ಸಾವಿರ ರೈತರ ಸಾಲ ತೀರುವಳಿ: ಕಳೆದ 10 ದಿನಗಳ ಹಿಂದೆ ಬಳ್ಳಾರಿ ಗ್ರಾಮೀಣ ಬ್ಯಾಂಕಿನ ಮುಖ್ಯ ಕಚೇರಿ ಮುಂದೆ ರೈತ ಸಂಘದ ಸಂಘಟಿತ ಹೋರಾಟದ ಹಿನ್ನೆಲೆಯಲ್ಲಿ ಗ್ರಾಮೀಣ ಬ್ಯಾಂಕುಗಳಲ್ಲಿ ಸಾಲ ಪಡೆದು ಸಂಕಷ್ಟದಲ್ಲಿರುವ 52 ಸಾವಿರ ರೈತರ ಸಾಲ. ರೈತರ ಮೇಲೆ ನ್ಯಾಯಾಲಯದಲ್ಲಿ ಹೂಡಿದ ಸಾಲದ ದಾವೆಗಳನ್ನು ವಾಪಸ್ ಪಡೆದು ಒಟಿಎಸ್ ಯೋಜನೆಯಲ್ಲಿ ಸಾಲ ತೀರುವಳಿ ಮಾಡಿಕೊಳ್ಳಲು ಗ್ರಾಮೀಣ ಬ್ಯಾಂಕಿನ ಮುಖ್ಯಸ್ಥರು ಒಪ್ಪಿದ್ದಾರೆ. ಇದು ಹೋರಾಟದಿಂದ ಸಿಕ್ಕಿದ ಯಶಸ್ಸು ಇದರ ಅನುಕೂಲವನ್ನು ಸಾಲ ಮಾಡಿರುವ ರೈತರು ಪಡೆದುಕೊಳ್ಳಬಹುದು ಎಂದರು.
ರಾಜ್ಯದಲ್ಲಿ ಸುಮಾರು 10 ಲಕ್ಷ ಕೊಳವೆ ಬಾವಿಗಳಲ್ಲಿ ನೀರು ಇಂಗಿ ಹೋಗಿದೆ, ಕಬ್ಬಿನ ಬೆಳೆ. ತೆಂಗು. ಬಾಳೆ ಬೆಳೆಗಳು ಒಣಗುತ್ತಿವೆ. ಇಂಥ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು. ಅಧಿಕಾರಿಗಳು ಚುನಾವಣಾ ಗುಂಗಿನಲ್ಲಿ ತಲ್ಲೀನರಾಗಿದ್ದಾರೆ. ಇನ್ನಾದರು ಸಂಬಂಧ ಪಟ್ಟವರು ರೈತರ ಸಂಕಷ್ಟ ಅರಿತುಕೊಳ್ಳಲಿ ಸಮರೋಪಾದಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲಿ ಎಂದು ಒತ್ತಾಯಿಸಲು ರಾಜ್ಯದ ಮುಖ್ಯ ಕಾರ್ಯದರ್ಶಿಗಳನ್ನು ಏ.15 ರಂದು ಬೆಂಗಳೂರಿನಲ್ಲಿ ಭೇಟಿ ಮಾಡುತ್ತಿದ್ದೇವೆ ಎಂದರು.
ರೈತರನ್ನು ಕೊಲ್ಲುತ್ತಿದೆ : ಕೇಂದ್ರ ಸರ್ಕಾರ ದೆಹಲಿ ರೈತ ಚಳವಳಿಯ ಮೇಲೆ ಗೋಲಿಬಾರ್ ಮಾಡುತ್ತದೆ ರೈತರನ್ನು ಕೊಲ್ಲುತ್ತಿದೆ ಎಂ.ಎಸ್. ಸ್ವಾಮಿನಾಥನ್ ವರದಿ ಜಾರಿಗೆ ತರುವ ಭರವಸೆ ನೀಡಿ ಹುಸಿಗೊಳಿಸಿದೆ. ರೈತರ ಆದಾಯ ದ್ವಿಗುಣ ಮಾಡುವ ಭರವಸೆ ನೀಡಿ ಹುಸಿಗೊಳಿಸಿದೆ. ಬಂಡವಾಳ ಶಾಹಿಗಳ 14 ಲಕ್ಷ ಕೋಟಿ ರೂ.ಗಳ ಸಾಲ ಮನ್ನಾ ಮಾಡಿದೆ. ಆದರೆ, ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡದೆ ನಿರ್ಲಕ್ಷ್ಯತನ ತೋರುತ್ತಿದೆ. ಪ್ರವಾಹ ಹಾನಿ ಅತಿವೃಷ್ಟಿ ಅನಾವೃಷ್ಟಿ ಬರಗಾಲದ ನಷ್ಟ ಪರಿಹಾರದ ಬಗ್ಗೆ ಯಾವುದೇ ಬಗೆಯ ಗಂಭೀರ ಚಿಂತನೆ ನಡೆಸುತ್ತಿಲ್ಲ ಈ ರೀತಿಯಾಗಿ ಸರ್ಕಾರಗಳು ರೈತರನ್ನು ನಿರ್ಲಕ್ಷ್ಯ ಮಾಡುತ್ತಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರ್ ರವಿಕುಮಾರ್, ಅಂಜನಪ್ಪ ಪೂಜಾರ್, ಅತ್ತಹಳ್ಳಿ ದೇವರಾಜ್ ಬಸವರಾಜ್, ಅಶೋಕ್. ಮಂಜುನಾಥ್ ವಕೀಲರು, ತಿರುಮಲ್ಲೇಶ್, ಕರಬಸಪ್ಪ, ಬಸಣ್ಣ ಉಪಸ್ಥಿತರಿದ್ದರು.