ಸರ್ಕಾರಗಳಿಗೆ ಸೋಲು ಗೆಲುವಿನ ಚೆಲ್ಲಾಟ-ರೈತರಿಗೆ ಪ್ರಾಣ ಸಂಕಟ: ರೈತ ಮುಖಂಡ ಅತ್ತಹಳ್ಳಿ ದೇವರಾಜ್
ರಾಜ್ಯದಲ್ಲಿ ಭೀಕರ ಬರಗಾಲ ಕಾಡುತ್ತಿದ್ದು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿ, ಬದುಕು ಚಿಂತಾಜನಕವಾಗಿದೆ
ಮೈಸೂರು: ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಿದ ಕಾರಣ ರೈತರ ಬದುಕು ಬೀದಿ ಪಾಲಾಗಿ ಜೀವನ ನಡೆಸಲು ಹರಸಾಹಸ ಪಡುತ್ತಿದ್ದರು ಸಹ ಸರ್ಕಾರಗಳು ಲೋಕಾಸಭಾ ಚುನಾವಣೆಯ ತಮ್ಮ ತಮ್ಮ ಅಭ್ಯರ್ಥಿಗಳ ಸೋಲು – ಗೆಲುವಿನ ಲೆಕ್ಕಾಚಾರದಲ್ಲಿ ಮಗ್ನರಾಗಿರುವ ಕಾರಣ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿ ನರಳುತ್ತಿದ್ದರೂ ಯಾರು ಕೇಳುವವರೇ ಇಲ್ಲದಂತಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಹೇಳಿದ್ದಾರೆ.
ಈಗಾಗಲೇ ಎಲ್ಲ ಕೆರೆ ಕಟ್ಟೆಗಳಲ್ಲಿ ಸಂಪೂರ್ಣವಾಗಿ ನೀರು ಬತ್ತಿ ಹೋಗಿದ್ದು ಹಾಲಿ ಬೆಳೆದು ನಿಂತಿರುವ ಬೆಳೆಗಳು ನೀರಿಲ್ಲದೆ ಒಣಗಿ ಹಾಳಾಗಿವೆ, ಕೃಷಿ ಪಂಪ್ ಸೆಟ್ ನಂಬಿ ಬೆಳೆ ಬೆಳೆದು ಬದುಕುತ್ತಿದ್ದ ರೈತರು ಬೋರ್ ವೆಲ್‌ಗಳಲ್ಲಿ ನೀರು ನಿಂತು ಹೋದ ಕಾರಣ ಬೆಳೆಗಳು ಒಣಗಿ ನೆಲ ಕಚ್ಚಿ ಬದುಕು ಕೂಡಾ ದುಸ್ತರ ವಾಗಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಜನ – ಜಾನುವಾರುಗಳಿಗೆ ಕುಡಿಯುವ ನೀರು, ಮೇವಿನ ಕೊರತೆ ಕಾಡುತ್ತಿದೆ. ಕೊರತೆ ನೀಗಿಸಬೇಕಾದ ಸರ್ಕಾರಗಳು ಕೈ ಚೆಲ್ಲಿ ಕುಳಿತು ಚುನಾವಣೆಯ ತಮ್ಮ ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತಲ್ಲೀನರಾಗಿದ್ದು,ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರವೇ ಬರಗಾಲ ಘೋಷಣೆ ಮಾಡಿ ರೈತರಿಗೆ ಬರ ಪರಿಹಾರವನ್ನು ಸಮರ್ಪಕವಾಗಿ ನೀಡಲು ವಿಫಲವಾಗಿದೆ. ರಾಜ್ಯ-ಕೇಂದ್ರ ಸರ್ಕಾರಗಳು ಒಬ್ಬರ ಮೇಲೊಬ್ಬರು ಕೆಸರೆರಚಾಟದಲ್ಲಿ ತೊಡಗಿದ್ದು ರೈತರು ಮೂಕ ಪ್ರೇಕ್ಷಕರಾಗಿ ಭಕ ಪಕ್ಷಿಗಳಂತೆ ಪರಿಹಾರಕ್ಕಾಗಿ ಕಾಯುತ್ತಿದ್ದರೂ ಯಾರು ರೈತರ ಕಡೆ ಗಮನ ಹರಿಸುತ್ತಿಲ್ಲ ಎಂದು ಹೇಳಿದರು.
ಬ್ಯಾಂಕ್‌ಗಳಲ್ಲಿ ರೈತರು ಕೃಷಿ ಚಟುವಟಿಕೆಗೆ ಸಾಲ ಮಾಡಿದ್ದು ಭೀಕರ ಬರಗಾಲದ ಪರಿಣಾಮ ಸಾಲ ಕಟ್ಟಲು ಸಾಧ್ಯವಾಗದೆ ಜೀವನ ನಡೆಸುವುದೆ ಕಷ್ಟವಾಗಿರುವ ಈ ಸಂದರ್ಭದಲ್ಲಿ ಬ್ಯಾಂಕ್‌ಗಳು ರೈತರಿಗೆ ಸಿಬಿಲ್ ಸ್ಕೋರ್ ನೆಪಹೇಳಿ ನೋಟಿಸ್ ಜಾರಿಮಾಡಿ ಕೋರ್ಟ್ ಗಳಲ್ಲಿ ದಾವೆ ಹೂಡಿ ರೈತರ ಮಾನ ಹರಾಜು ಹಾಕುತ್ತಿವೆ. ಇದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಕೃಷಿ ಪಂಪ್‌ಸೆಟ್ ರೈತರಿಗೆ ಹಗಲು ವೇಳೆ ಬೆಳಗ್ಗೆ 6 ರಿಂದ ಸಂಜೆ 6 ರ ತನಕ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ರಾಜ್ಯ ಸರ್ಕಾರ ಭಿಕ್ಷೆ ರೂಪದ ಪರಿಹಾರ ಒಬ್ಬರಿಗೆ ಕೊಟ್ಟು, ಒಬ್ಬರಿಗೆ ಬಿಟ್ಟು ಎಲ್ಲ ರೈತರ ರಕ್ಷಣೆ ಮಾಡಿರುವ ರೀತಿ ವಾರಂಟಿಯೇ ಇಲ್ಲದ
ಗ್ಯಾರಂಟಿಗಳ ಘೋಷಣೆ ಮಾಡಿದ್ದು, ಇದರ ಜತೆಗೆ ರೈತರು ದೇಶಕ್ಕಾಗಿ ಅನ್ನ ಬೆಳೆಯಲು ಮಾಡಿರುವ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಎಕರೆಗೆ ಕನಿಷ್ಠ 25000 ರೂ. ಕೊಡಬೇಕು. ರೈತನನ್ನು ದೇಶದ ಬೆನ್ನೆಲುಬು ಅನ್ನದಾತ ಎಂದು ಹೊಗಳಿ ಪ್ರಶಂಸೆ ಮಾಡಿದರೆ ಸಾಲದು ಆತ್ಮಹತ್ಯೆ ಮಾಡಿ ಕೊಳ್ಳುತ್ತಿರುವ ರೈತರ ರಕ್ಷಣೆ ಮಾಡಬೇಕು ಎಂದು ಹೇಳಿದರು.
ಕಬ್ಬು ಬೆಳೆಗಾರ ರೈತರಿಗೆ ಹೆಚ್ಚುವರಿಯಾಗಿ ಕಳೆದ ವರ್ಷ ಸರ್ಕಾರ ಒಂದು ಟನ್ ಕಬ್ಬಿಗೆ ರೂ -150 ರೂ. ಘೋಷಣೆ ಮಾಡಿ ಇದುವರೆಗೂ ಕೊಟ್ಟಿಲ್ಲ ಈ ಭೀಕರ ಬರಗಾಲದಲ್ಲಿ ಕೊಡಿಸಿದರೆ ರೈತರಿಗೆ ತುಂಬಾ ನೆರವಾಗುತ್ತದೆ. ಈ ಬಾರಿ ಸರ್ಕಾರಗಳು ಲೋಕಾಸಭಾ ಚುನಾವಣೆಯಲ್ಲಿ ಗ್ಯಾರಂಟಿಗಳನ್ನು ತಂದು ರೈತರನ್ನು ದಿಕ್ಕು ತಪ್ಪಿಸುತ್ತಿವೆ ಎಂದರು.
ಇನ್ನು ರೈತರ ಬಗ್ಗೆ ಯಾವುದೇ ಎಳ್ಳಷ್ಟೂ ಕಾಳಜಿಯಿಲ್ಲ, ಎಲ್ಲಕಿಂತ ಮುಖ್ಯವಾಗಿ ರೈತರ ರಕ್ಷಣೆ ಮಾಡಲು ಯಾವುದಾದರೂ ಒಂದು ಉತ್ತಮ ಯೋಜನೆ ಜಾರಿಗೆ ತರಬೇಕು, ಇಲ್ಲದಿದ್ದರೆ ನಮ್ಮ ದೇಶವು ಕೂಡ ಅನ್ನಕ್ಕಾಗಿ ಕೈಚಾಚಬೇಕಾಗುತ್ತದೆ ಎಂದು ಅತ್ತಹಳ್ಳಿ ದೇವರಾಜ್ ಎಚ್ಚರಿಸಿ ತುರ್ತಾಗಿ ರೈತರ ರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು.