ಯಾದಗಿರಿ: ಎದುರಿಗೆ ಬರುತ್ತಿದ್ದ ವಾಹನಕ್ಕೆ ಡಿಕ್ಕಿಹೊಡೆಯುವುದನ್ನು ತಪ್ಪಿಸಲು ಹೋದ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದು, 7 ಮಂದಿಗೆ ತೀವ್ರ ಗಾಯವಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿರುವ ಘಟನೆ ಶಹಾಪುರ ತಾಲೂಕಿನ ಹತ್ತಿಗುಡೂರು ಬಳಿ ನಡೆದಿದೆ.
ಭಾನುವಾರ ರಾತ್ರಿ 11.40ರಲ್ಲಿ ಅಪಘಾತಕ್ಕೀಡಾಗಿದ್ದು, ಮೃತರ ಮಾಹಿತಿ ತಿಳಿದು ಬಂದಿಲ್ಲ. ಕಲಬುರಗಿಯಿಂದ ಬೆಂಗಳೂರು ಕಡೆ ತೆರಳುತ್ತಿದ್ದ ಬಸ್ನಲ್ಲಿ 37 ಜನ ಪ್ರಯಾಣಿಸುತ್ತಿದ್ದರು. ಹತ್ತಿಗುಡೂರು ಬಳಿಯ ಹಳ್ಳದ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಲ್ಟಿಯಾಗಿದೆ. ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ.
ಬಾಗಲಕೋಟೆ ಮೂಲದ ಬಸ್ ಚಾಲಕನಿಗೆ ಯಾದಗಿರಿ, ಕಲಬುರಗಿ, ಶಹಾಪುರ ರಸ್ತೆ ಮಾರ್ಗದ ಪರಿಚಯವಿಲ್ಲದ ಕಾರಣ ರಸ್ತೆಯ ಹಿಡಿತದ ಬಗ್ಗೆ ಅರಿವಿಲ್ಲದೆ ಬಸ್ ಓಡಿಸಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಘಟನೆ ಸಂಬಂಧ ಶಹಾಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.
ಬಿಳಿಗಿರಿರಂಗನಬೆಟ್ಟದ ರಸ್ತೆಯಲ್ಲಿ ಅಪಘಾತ: ಪೂಜೆ ಮುಗಿಸಿ ಹಿಂತಿರುಗುವಾಗ ಖಾಸಗಿ ಬಸ್ ಪಲ್ಟಿಯಾಗಿರುವ ಘಟನೆ ಪ್ರಸಿದ್ಧ ಯಾತ್ರಾ ಸ್ಥಳವಾದ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ರಸ್ತೆಯಲ್ಲಿ ಶನಿವಾರ ನಡೆದಿದೆ.
ಶನಿವಾರವಾಗಿದ್ದರಿಂದ ಖಾಸಗಿ ಬಸ್ ಮಾಡಿಕೊಂಡು ಮೈಸೂರು ಜಿಲ್ಲೆಯ ನಂಜನಗೂಡು ಮೂಲದ ಕುಟುಂಬವೊಂದು ಬಿಳಿಗಿರಿರಂಗನಬೆಟ್ಟಕ್ಕೆ ಬಂದಿತ್ತು. ಪೂಜೆ ಮುಗಿಸಿಕೊಂಡು ಹಿಂತಿರುಗುವಾಗ ಗವಿಬೋರೆ ಹತ್ತಿರ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಬಿದ್ದಿದೆ.
ಘಟನೆಯಲ್ಲಿ 16ಕ್ಕೂ ಅಧಿಕ ಮಂದಿಗೆ ಗಾಯಗಳಾಗಿದ್ದು ಎಲ್ಲರನ್ನೂ ಯಳಂದೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಸ್ ಪಲ್ಟಿಯಾಗುತ್ತಿದ್ದಂತೆ ಖಾಸಗಿ ಬಸ್ ಚಾಲಕ ಪರಾರಿಯಾಗಿದ್ದಾನೆ. ಯಳಂದೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಹಳ್ಳಕ್ಕೆ ಇಳಿದ ಕಾರು: ಮತ್ತೊಂದೆಡೆ ನಿಯಂತ್ರಣ ತಪ್ಪಿದ ಕಾರೊಂದು ಹಳ್ಳಕ್ಕೆ ಇಳಿದ ಘಟನೆ ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿ ಗೇಟ್ನಲ್ಲಿ ನಡೆದಿದ್ದು, ದಂಪತಿ ಸೇರಿ ಇಬ್ಬರು ಮಕ್ಕಳಿಗೆ ಗಂಭೀರ ಗಾಯಗಳಾಗಿದೆ.
ಬೆಂಗಳೂರು ಮೂಲದ ಪೀಯುಶ್ ಸಿಂಘಲ್, ಪತ್ನಿ ರಾಧಿಕಾ ಹಾಗೂ ಮಕ್ಕಳಾದ ಅದಿಲ್ ಮತ್ತು ಮಾನ್ಯ ಎಂಬವರಿಗೆ ಗಾಯಗಳಾಗಿದೆ. ಊಟಿ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸ್ ಆಗುವ ವೇಳೆ ರಸ್ತೆ ಬದಿಯ 10 ಅಡಿ ಆಳದ ಹಳ್ಳಕ್ಕೆ ಇಳಿದಿ ಪರಿಣಾಮ ನಾಲ್ವರಿಗೂ ಗಂಭೀರ ಪೆಟ್ಟುಗಳಾಗಿದೆ.
ಅಪಘಾತ ಮಾಹಿತಿ ತಿಳಿಯುತ್ತಿದ್ದಂತೆ ಹೈವೆ ಗಸ್ತು ಸಿಬ್ಬಂದಿ ನಾಗೇಂದ್ರ ಹಾಗೂ ಖಾಸಗಿ ಆಂಬುಲೆನ್ಸ್ ಚಾಲಕ ರಾಜೀವ್ ಕೂಡಲೇ ಸ್ಥಳಕ್ಕೆ ಆಗಮಿಸಿ ಪ್ರಥಮ ಚಿಕಿತ್ಸೆ ಕೊಟ್ಟು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನೆ ಮಾಡಿದ್ದಾರೆ. ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.