ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಭಾರಿ ಮತಗಳ ಅಂತರದಿಂದ ವಿಜಯಮಾಲೆ ಧರಿಸಿರುವ ಹಿನ್ನೆಲೆ ಹಾಗೂ ಕಾಂಗ್ರೆಸ್ ಸೋತಿರುವುದರಿಂದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ ಎಂಬ ಪ್ರಶ್ನೆ ಹರಿದಾಡುತ್ತಿದೆ.
ಹೌದು! ಈ ಕುರಿತು ಮಂಡ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾದ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ತಮ್ಮ ರಾಜೀನಾಮೆ ಕುರಿತು ಚಲುವರಾಯಸ್ವಾಮಿ ಪ್ರಸ್ತಾಪಿಸಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಸ್ಟಾರ್ ಚಂದ್ರು ಸೋತರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗುತ್ತೆ.
ಅಷ್ಟೇ ಅಲ್ಲ ಚುನಾವಣೆ ಸೋತರೇ ನನಗೆ ಕೆಲಸ ಮಾಡುವುದಕ್ಕೆ ಮನಸ್ಸು ಬರಲ್ಲ. ಟೇಬಲ್ ಕುಟ್ಟಲು ಆಗಲ್ಲ, ಸಂಪುಟದಲ್ಲಿ ತಲೆ ಎತ್ತಿ ಮಾತಾಡಲು ಆಗಲ್ಲ. ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಶಾಸಕನಾಗಿ ಕೆಲಸ ಮಾಡಬೇಕು. ಈ ಚುಣಾವಣೆಯಲ್ಲಿ ಸೋತರೆ ಅಳಲ್ಲ, ಯಾರ ಕೈಗೂ ಸಿಗುವುದಿಲ್ಲ.
ಇನ್ನು ಎರಡು ತಿಂಗಳು ಎಲ್ಲಾದರೂ ಹೊರಗಡೆ ಪ್ರವಾಸಕ್ಕೆ ಹೋಗುತ್ತೇನೆ. ಮೊಬೈಲ್ನ ಹಳೇ ಸಿಮ್ ಕಿತ್ತೆಸೆದು ಹೊಸ ಸಿಮ್ ಹಾಕಿಕೊಳ್ತೇನೆ. ರಾಜಕೀಯ ನಿವೃತ್ತಿ ಘೋಷಣೆ ಮಾಡಿ, ನೆಮ್ಮದಿಯಾಗಿ ಇರ್ತೀನಿ ಎಂದು ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಚಲುವರಾಯಸ್ವಾಮಿ ಭಾಷಣ ಮಾಡಿದ್ದರು.
ಸದ್ಯ ಈಗ ಮಂಡ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಗೆಲುವು ಸಾಧಿಸಿದ್ದು ಜೆಡಿಎಸ್ ಕಾರ್ಯಕರ್ತರು ಸಚಿವ ಚಲುವರಾಯಸ್ವಾಮಿ ಅವರ ಭಾಷಣದ ವಿಡಿಯೋ ವೈರಲ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಚಲುವರಾಯಸ್ವಾಮಿ ರಾಜೀನಾಮೆ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ.
ಈ ಬಗ್ಗೆ ಮಾತನಾಡಿದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ನಿರೀಕ್ಷೆ ಹುಸಿಯಾಗಿದೆ. ಎಚ್ಡಿಕೆ ಮೇಲೆ ಬಹಳ ನಿರೀಕ್ಷೆ ಇಟ್ಟು ಮತ ಹಾಕಿರಬಹುದು. ಜನರು ನಮ್ಮಲ್ಲಿ ಏನು ತಪ್ಪು ಕಂಡು ಹಿಡಿದಿದ್ದಾರೋ ಗೊತ್ತಿಲ್ಲ. ಮಂಡ್ಯದಲ್ಲಿ ಒನ್ ಸೈಡ್ ಚುನಾವಣೆ ಆಗಿದೆ ಎಂದು ಹೇಳಿದ್ದಾರೆ.
ಇನ್ನು ವಿಧಾನಸಭೆ ಚುನಾವಣೆ ಬಳಿಕ ಜಾರಿಗೊಂಡಿರುವ ಗ್ಯಾರಂಟಿ ಯೋಜನೆಗಳು ಮುಂದುರಿಯಲಿವೆ ಎಂದ ಅವರು, ಸಚಿವ ಸ್ಥಾನಕ್ಕೆ ರಾಜೀನಾಮೆ ತೆಗೆದುಕೊಳ್ಳುವುದು ಪಕ್ಷಕ್ಕೆ ಬಿಟ್ಟಿದ್ದು. ನಮ್ಮ ಪಕ್ಷ ರಾಜೀನಾಮೆ ಕೇಳಿದ್ರೆ ಕೊಡ್ತೀನಿ. ಖಂಡಿತಾ ಮಂಡ್ಯ ಕ್ಷೇತ್ರದ ಸೋಲಿನಿಂದ ನನಗೆ ಮುಜುಗರ ಆಗಿದೆ. ನಾನು ಸದಾ ಇಲ್ಲೇ ಇರುತ್ತಿದ್ದೆ, ಹೀಗಿರುವಾಗ ಮುಜುಗರ ಆಗುತ್ತದೆ. ಜೆಡಿಎಸ್ ಕಾರ್ಯಕರ್ತರು ನನ್ನ ಹೇಳಿಕೆ ವೈರಲ್ ಮಾಡುತ್ತಿದ್ದಾರೆ. ಜೆಡಿಎಸ್ ಕಾರ್ಯಕರ್ತರಿಗೆ ಒಳ್ಳೆಯದಾಗಲಿ ಎಂದಿದ್ದಾರೆ.