ಹುಬ್ಬಳ್ಳಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇದಕ್ಕೂ ಮೊದಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಜನದಟ್ಟಣೆ ಹಾಗೂ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಎಲೆಕ್ಟ್ರಿಕ್ ಬಸ್ಗಳ ಓಡಾಟ ಆರಂಭವಾಗಿ ವರ್ಷವೇ ಕಳೆದಿದೆ ಈ ಸಾಲಿಗೆ ಇದೀಗ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (NWKRTC) ಸೇರಿಲಿದ್ದು, 350 ಹೊಸ ಎಲೆಕ್ಟ್ರಿಕ್ ಬಸ್ಗಳ ಖರೀದಿಗೆ ಮುಂದಾಗಿದೆ.
ಎಲ್ಲ ಅಂದುಕೊಂಡಂತೆ ನಡೆದರೆ ಮುಂದಿನ ಎರಡು ತಿಂಗಳೊಳಗೆ ಎಲೆಕ್ಟ್ರಿಕ್ ಬಸ್ಗಳು ಸಂಚಾರ ಆರಂಭಿಸಲಿವೆ. ಸಂಸ್ಥೆಯು 350 ಎಲೆಕ್ಟ್ರಿಕ್ ಬಸ್ಗಳ ಪೈಕಿ 150 ನಗರ ಸಾರಿಗೆಗೆ ಮತ್ತು 200 ಗ್ರಾಮೀಣ ಸಾರಿಗೆಗೆ ವಿದ್ಯುತ್ ಚಾಲಿತ ಬಸ್ಗಳ ಓಡಾಟಕ್ಕೆ ಚಿಂತನೆ ನಡೆಸಿದೆ.
ಈಗಾಗಲೇ ಟೆಂಡರ್ ಅವಧಿ ಮೇ 31ಕ್ಕೆ ಮುಕ್ತಾಯಗೊಂಡಿದೆ. ಅದಕ್ಕೆ ಬಹುತೇಕ ಕಂಪನಿಗಳು ಸ್ಪಂದಿಸಿವೆ. ಇನ್ನು ಕೆಲವೇ ದಿನಗಳಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಮಾತ್ರವಲ್ಲದೇ, ವಾಯುವ್ಯ ಕರ್ನಾಟಕ ಭಾಗದಲ್ಲೂ ಎಲೆಕ್ಟ್ರಿಕ್ ಬಸ್ಗಳು ಓಡಾಟ ನಡೆಸಲಿವೆ.
ಬಸ್ಗಳ ಮೈಲೇಜ್ ಆಧಾರದ ಮೇಲೆ ಟೆಂಡರ್ ಕರೆಯಲಾಗಿದೆ ಎಂದು ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಹೇಳಿದ್ದಾರೆ. ಸದ್ಯಕ್ಕೆ ಜಿಸಿಸಿ (GROSS COST CONTRACT) ಮೂಲಕ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಟೆಂಡರ್ ಪಡೆದವರು ಬಸ್ ನಿರ್ವಹಣೆ ಹಾಗೂ ಎಸಿ ಆಪರೇಟಿಂಗ್ ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸುವ ಮೂಲಕ ಬಸ್ ಕಾರ್ಯಾಚರಣೆಗೆ ಸಾರಿಗೆ ಸಂಸ್ಥೆ ಸಿದ್ಧತೆ ನಡೆಸಿದೆ.
ಗ್ಯಾರಂಟಿ ಯೋಜನೆಯ ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿರುವುದರಿಂದ ಜನರ ಓಡಾಟ ಹೆಚ್ಚಾಗಿದೆ. ಹೀಗಾಗಿ ಪ್ರಯಾಣಿಕರಿಗೆ ತಕ್ಕಂತೆ ಬಸ್ಗಳನ್ನು ಬಿಡುವುದಕ್ಕೆ ಎಲೆಕ್ಟ್ರಿಕ್ ಬಸ್ಗಳನ್ನು ಆಯ್ಕೆ ಮಾಡಿಕೊಂಡಿರುವ ನಿಗಮವು, ಈ ಬಸ್ಗಳ ಓಡಾಟದಿಂದ ಆರ್ಥಿಕ ವ್ಯವಸ್ಥೆ ಸರಿದೂಗಿಸುವುದಕ್ಕೆ ಸಂಸ್ಥೆ ಮುಂದಾಗಿದೆ.
ಒಟ್ಟಾರೆ ಎಲೆಕ್ಟ್ರಿಕ್ ಬಸ್ಗಳ ನಿರ್ವಹಣೆಯನ್ನು ಖಾಸಗಿಯವರಿಗೆ ಕೊಡುತ್ತಿರುವುದರಿಂದ ಮುಂದೊಂದು ದಿನ ರಾಜ್ಯದ ಸಾರಿಗೆ ಬಸ್ಗಳು ಖಾಸಗಿಯವರ ತೆಕ್ಕೆಯಲ್ಲೇ ನಡೆಯುತ್ತವೆ ಎಂಬುದರಲ್ಲಿ ಯಾವುದೆ ಅನುಮಾನವಿಲ್ಲ.
ಇಲ್ಲಿ 5 ವರ್ಷಕೊಮ್ಮೆಯೋ ಅಥವಾ ಕೆಲ ಸಂದರ್ಭಗಳಿಗೆ ಅನುಗುಣವಾಗಿ ಯಾವಾಗಂದರೆ ಅವಾಗ ಬದಲಾಗುವ ಸರ್ಕಾರಗಳು ಬಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಇತ್ತ ಸರ್ಕಾರಿ ಬಸ್ಗಳು ಅಲ್ಲ ಅತ್ತ ಖಾಸಗಿಗೂ ಸೇರಿಲ್ಲ ಎಂಬಂತೆ ಎಡಬಿಡಂಗಿ ಮಾಡಿಕೊಂಡೆ ಜನರನ್ನು ಸುಲಿಗೆ ಮಾಡುತ್ತಾವೋ ಏನೋ ಗೊತ್ತಿಲ್ಲ.
ಏನೆ ಆದರೂ ಇಲ್ಲಿ ಸಮಸ್ಯೆಗೆ ಸಿಲುಕುವುದು ಒಂದು ನಿಗಮದ ಚಾಲನಾ ಸಿಬ್ಬಂದಿ ಮತ್ತೊಂದು ಪ್ರಯಾಣಿಕರು. ಸರ್ಕಾರದ ಈ ಇಬ್ಬಗೆಯ ನೀತಿಯಿಂದ ಜನರ ತೆರಿಗೆ ಹಣ ಕಾಣದ ಕೈಗಳ ಪಾಲಾಗುವುದಕ್ಕೆ ಈ ಯೋಜನೆ ಹೇಳಿ ಮಾಡಿಸಿದಂತೆ ಇದೆ. ಇನ್ನು ರಾಜ್ಯವನ್ನು ಮತ್ತು ರಾಜ್ಯದ ಜನರನ್ನು ಆದೇವರೆ ಕಾಪಾಡಬೇಕು..