ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ನಿಗಮದ (BMTC) ಬಸ್‌ನ ಇಂಜಿನ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲೇ ಇಡೀ ಬಸ್ ಸುಟ್ಟು ಕರಕಲಾದ ಘಟನೆ ಇಂದು ಬೆಳಗ್ಗೆ ಎಂಜಿ ರಸ್ತೆಯಲ್ಲಿ ನಡೆದಿದೆ.
ರೋಸ್ ಗಾರ್ಡನ್‌ನಿಂದ ಶಿವಾಜಿನಗರದ ಕಡೆಗೆ ಬರುತ್ತಿದ್ದ ವೇಳೆ ರಾಜಧಾನಿಯ ಜನ ನಿಬಿಡ ಹಾಗೂ ವಾಹನ ನಿಬಿಡ ಸ್ಥಳವಾದ MG Road ಮಧ್ಯದಲ್ಲೇ ಬಿಎಂಟಿಸಿ ಬಸ್ ಬೆಂಕಿಯ ಕೆನ್ನಾಲಗೆಗೆ ಸುಟ್ಟು ಭಸ್ಮವಾಗಿದೆ. ಇತ್ತ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಎಚ್ಚೆತ್ತುಕೊಂಡ ಬಸ್ ಚಾಲಕ ಮತ್ತು ನಿರ್ವಾಹಕರು ಪ್ರಯಾಣಿಕರನ್ನು ವೇಗವಾಗಿ ಕೆಳಗೆ ಇಳಿಸಿದ್ದರಿಂದ ಭಾರಿ ಪ್ರಮಾಣದ ಪ್ರಾಣ ಹಾನಿ ತಪ್ಪಿದೆ.
ಬಸ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಸುಮಾರು 30 ಮಂದಿ ಪ್ರಯಾಣಿಕರಿದ್ದರು. ಚಾಲಕರ ಸಮಯ ಪ್ರಜ್ಞೆಯಿಂದ ಆಗುತ್ತಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ.
ಬಸ್‌ನಲ್ಲಿ ಬೆಂಕಿಕಾಣಿಸಿಕೊಂಡ ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರಿಂದ ಕೂಡಲೇ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರೆ ಆದರೆ ಬಹುತೇಕ ಬಸ್ ಅಷ್ಟರಲ್ಲೇ ಭಸ್ಮವಾಗಿದೆ.
ಇತ್ತ ಈ ಘಟನೆಯಿಂದಾಗಿ, ಸದಾ ದಟ್ಟ ವಾಹನನಿಬಿಡ ಸ್ಥಳವಾದ ಎಂಜಿ ರಸ್ತೆಯ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಯಿತು. ಅಲ್ಲದೆ ನಡು ರಸ್ತೆಯಲ್ಲೇ ಹೊತ್ತಿ ಉರಿದ ಬಿಎಂಟಿಸಿ ಬಸ್‌ನಿಂದ ಮೇಲೆದ್ದ ಭಾರಿ ಪ್ರಮಾಣದ ಹೊಗೆ ಪಕ್ಕದಲ್ಲಿದ್ದ ಮೆಟ್ರೋ ನಿಲ್ದಾಣವನ್ನು ಸಹ ಆವರಿಸಿತು. ಈ ವೇಳೆ ಮೆಟ್ರೋ ನಿಲ್ದಾಣದಲ್ಲಿದ್ದ ಸಾರ್ವಜನಿಕರು ಕ್ಷಣಕಾಲ ಗಾಬರಿಗೊಂಡು ಆತಂಕಕ್ಕೆ ಒಳಗಾದರು.
ಅಧಿಕಾರಿಗಳ ಕೆಟ್ಟ ನಡೆಯಿಂದ ಇಂಥ ಘಟನೆ: ಇತ್ತೀಚೆಗೆ ಬಿಎಂಟಿಸಿಯಲ್ಲಿ ಸವೆದುಹೋದ ಬಿಡಿ ಭಾಗಗಳನ್ನು ಅಳವಡಿಸದೆ ಇರುವುದರ ಪರಿಣಾಮ ಇಂಥ ಅನಾಹುತಗಳು ಸಂಭವಿಸುತ್ತಿವೆ. ಪ್ರತಿಯೊಂದಕ್ಕೂ ಚಾಲಕರನ್ನೇ ಹೊಣೆ ಮಾಡುತ್ತಿರುವುದರಿಂದ ಚಾಲಕರು ಕೂಡ ಬಸ್‌ನಲ್ಲಿ ಕಂಡು ಬರುವ ದೋಷದ ಬಗ್ಗೆ ಯಾವುದೆ ಮಾಹಿತಿ ನೀಡದೆ ತಮ್ಮ ಕರ್ತವ್ಯ ಮುಗಿದ ಕೂಡಲೇ ಬಸ್‌ಗಳನ್ನು ಘಟಕಕ್ಕೆ ತಂದು ಬಿಟ್ಟು ಹೋಗುತ್ತಿದ್ದಾರೆ.
ಮೊನ್ನೆಯಷ್ಟೆ ಒಬ್ಬ ಚಾಲಕರು ಬಸ್‌ನಲ್ಲಿ ದೋಷವಿದೆ ಎಂದು ಲಾಗ್ ಶಿಟ್‌ನಲ್ಲಿ ನಮೂದಿಸಿ ಗಮನಕ್ಕೆ ತಂದಿದ್ದರಿಂದ ಆ ಚಾಲಕರ ವಿರುದ್ಧವೇ ಕ್ರಮ ಕೈಗೊಂಡು ಅಮಾನತು ಮಾಡಲಾಗಿದೆ. ಇದರಿಂದ ಭಯಗೊಂಡಿರುವ ಸಂಸ್ಥೆಯ ಇತರ ಚಾಲಕರು ನಾವೇಕೆ ಬಸ್‌ನಲ್ಲಿ ಇರುವ ಸಮಸ್ಯೆ ಹೇಳಿ ಅಮಾನತಾಗಬೇಕು ಎಂದು ಏನನ್ನು ಹೇಳದ ಪರಿಸ್ಥಿಗೆ ಬಂದಿದ್ದಾರೆ.
ಇಂಥ ಘಟನೆಗಳು ನಡೆಯಲು ಘಟಕ ಮಟ್ಟದ ಮತ್ತು ವಿಭಾಗೀಯ ಮಟ್ಟದ ಅಧಿಕಾರಿಗಳೇ ಕಾರಣರು ಎಂದು ಯಾವುದೇ ಸಂಶಯವಿಲ್ಲದೆ ಹೇಳಬಹುದು ಎಂದು ಚಾಲಕರು ನೋವಿನಲ್ಲೇ ಹೇಳುತ್ತಿದ್ದಾರೆ. ಇನ್ನಾದರು ಬಸ್‌ನಲ್ಲಿ ಕಂಡು ಬರುವ ಸಮಸ್ಯೆಯನ್ನು ಲಾಗ್‌ಶಿಟ್‌ನಲ್ಲಿ ನಮೂದಿಸುವ ಚಾಲಕರ ವಿರುದ್ಧ ಈ ರೀತಿಯ ಕ್ರಮ ತೆಗೆದುಕೊಳ್ಳುವುದನ್ನು ಬಿಟ್ಟರೆ ಬಹುತೇಕ ಎಲ್ಲ ಸರಿಯೋಗಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಅನುಕೂಲವಾಗುತ್ತದೆ.