ಕೆ.ಆರ್.ಪೇಟೆ: ತಾಲೂಕಿನ ಕಸಬಾ ಹೋಬಳಿಯ ರೈತರ ಜೀವನಾಡಿಯಾಗಿರುವ ಹೇಮಾವತಿ ಜಲಾಶಯ ಯೋಜನೆಯ ನಂ.54 ವಿತರಣಾ ನಾಲೆಯ ಲೈನಿಂಗ್ ಮತ್ತು ಆಧುನಿಕರಣ ಕಾಮಗಾರಿಯು ಆರಂಭವಾಗಿದ್ದು, ಈ ಭಾಗದ ರೈತರ ಮೊಗದಲ್ಲಿ ಸಂತೋಷ ತಂದಿದೆ.
ಈ ಹಿಂದೆ ಕ್ಷೇತ್ರದ ಶಾಸಕರಾಗಿದ್ದ ಡಾ.ನಾರಾಯಣಗೌಡ ಅವರು ಕಾವೇರಿ ನೀರಾವರಿ ನಿಗಮದಿಂದ 55 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಸಿ ಈ ಭಾಗದ ರೈತರ 40 ವರ್ಷಗಳ ಹೋರಾಟಕ್ಕೆ ಶಕ್ತಿ ತುಂಬಿ ಕಾಲುವೆಯಲ್ಲಿ ನೀರು ಸಾರಾಗವಾಗಿ ಹರಿದು ಕೊನೆಯ ಭಾಗದ ರೈತನ ಜಮೀನುಗಳಿಗೂ ನೀರು ಹರಿಯಬೇಕು ಎಂದು ಸಂಕಲ್ಪ ಮಾಡಿ ಭೂಮಿ ಪೂಜೆ ಮಾಡಿದ್ದರು.
ತಾಲೂಕಿನ ಪ್ರಥಮದರ್ಜೆ ಗುತ್ತಿಗೆದಾರ ಪಿ.ಕೆ.ಜಯಕೃಷ್ಣೆಗೌಡ ಅವರ ಮಾಲೀಕತ್ವದ ಆರ್.ಕೆ.ಬಿ ಕನ್ಸ್ಟ್ರಕ್ಷನ್ ಕಂಪನಿಯು ಗುತ್ತಿಗೆಯನ್ನು ಪಡೆದುಕೊಂಡು ಗುಣಮಟ್ಟದ ಕಾಮಗಾರಿ ನಡೆಸುವ ಮೂಲಕ ಕಾಲುವೆಯ ಎರಡೂ ಬದಿಗಳಲ್ಲಿ ರಸ್ತೆ ನಿರ್ಮಿಸಿ ಪೂರಕವಾಗಿ ಕಾಲುವೆಯ ಆಧುನಿಕರಣ ಕಾಮಗಾರಿ ಮಾಡುತ್ತಿದ್ದಾರೆ.
ಆದರೆ ಕೆಲವರು 54ನೇ ವಿತರಣಾ ನಾಲೆಯ ಅಭಿವೃದ್ಧಿಗೆ ದುರುದ್ಧೇಶದಿಂದ ವಿನಾಕಾರಣ ತೊಂದರೆ ನೀಡಿ ನಾಲಾ ಲೈನಿಂಗ್ ಕೆಲಸಕ್ಕೆ ತೊಂದರೆ ನೀಡುತ್ತಿರುವುದನ್ನು ಖಂಡಿಸಿರುವ ನಾಲೆಯ ಅಚ್ಚುಕಟ್ಟು ಭಾಗದ ತೇಗನಹಳ್ಳಿ, ಅಣ್ಣೆಚಾಕನಹಳ್ಳಿ, ಕುಂದೂರು, ಕೋಮನಹಳ್ಳಿ, ಮಾಕವಳ್ಳಿ, ಹಿರಿಕಳಲೆ, ಲಿಂಗಾಪುರ, ಪುರ, ಗಾಂಧೀನಗರ, ಕಾಡುಮೆಣಸ, ಗಂಗನಹಳ್ಳಿ, ಹೆಗ್ಗಡಹಳ್ಳಿ, ಸಾಧುಗೋನಹಳ್ಳಿ ಗ್ರಾಮಗಳ ನೂರಾರು ರೈತರು ನಾಲಾ ಆಧುನಿಕರಣ ಕಾಮಗಾರಿ ನಡೆಯುತ್ತಿರುವ ತೇಗನಹಳ್ಳಿಯ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಪ್ರತಿಭಟನೆ ನಡೆಸಿ ವಿನಾಕಾರಣ ಕಾಲುವೆಯ ಲೈನಿಂಗ್ ಕೆಲಸಕ್ಕೆ ತೊಂದರೆ ನೀಡಿ ಅಡ್ಡಿಪಡಿಸಿದರೆ ಅಚ್ಚುಕಟ್ಟು ಭಾಗದ ಗ್ರಾಮಗಳ ರೈತರು ನಕಲಿ ಹೋರಾಟಗಾರರ ವಿರುದ್ಧ ಉಗ್ರವಾಗಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆಯ ಸಂದೇಶ ನೀಡಿದರು.
ಕೋಮನಹಳ್ಳಿ ಗ್ರಾಮದ ಪ್ರಗತಿಪರ ರೈತರಾದ ಮಂಜು ಮಾತನಾಡಿ ವಿತರಣಾ ನಾಲೆಯ ಅಭಿವೃದ್ಧಿಯಿಂದಾಗಿ ನೀರು ಹರಿಯದ ನಾಲೆಗಳಲ್ಲಿ ನೀರು ಹರಿಯಲಿದ್ದು ರೈತರು ನೆಮ್ಮದಿಯಿಂದ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗಲಿದೆ. ಪ್ರಸ್ತುತ ಶೇ. 40ರಷ್ಟು ಕಾಮಗಾರಿ ಮಾತ್ರ ಮುಗಿದಿದ್ದು ಇನ್ನೂ ಶೇ.60 ರಷ್ಟು ಕಾಮಗಾರಿಯನ್ನು ಮಾಡಬೇಕಿದೆ.
ಕಾಮಗಾರಿಯ ಗುಣಮಟ್ಟದ ಬಗ್ಗೆ ಈ ಭಾಗದ ರೈತರಾದ ನಾವು ಹಾಗೂ ನೀರಾವರಿ ಇಲಾಖೆಯ ಎಂಜಿನಿಯರುಗಳು ಕಾಳಜಿಯಿಂದ ಎಚ್ಚರ ವಹಿಸುತ್ತೇವೆ. 40 ವರ್ಷಗಳ ನಂತರ ನಡೆಯುತ್ತಿರುವ ನಾಲಾ ಆಧುನಿಕರಣ ಕೆಲಸಕ್ಕೆ ಯಾರೂ ತೊಂದರೆ ನೀಡಬಾರದು, ಪ್ರತಿಭಟನೆ, ಹೋರಾಟ ರೈತರಾದ ನಮ್ಮ ಆಜನ್ಮ ಸಿದ್ಧ ಹಕ್ಕಾಗಿದೆ. ವಿನಾಕಾರಣ ತೊಂದರೆ ನೀಡಿದರೆ ರೈತರು ಸಹಿಸಲ್ಲ ಎಂದು ಮಂಜು ಎಚ್ಚರಿಕೆ ನೀಡಿದರು.
ಕಾಮಗಾರಿ ಗುಣಮಟ್ಟ ಕಾಪಾಡಿ ಇಂಜಿನಿಯರ್ ಆನಂದ್: ಹೇಮಾವತಿ ಜಲಾಶಯ ಯೋಜನೆ ಕೆ.ಆರ್.ಪೇಟೆ ವ್ಯಾಪ್ತಿಯ ನಂ.54 ವಿತರಣಾ ನಾಲೆಯ ಲೈನಿಂಗ್ ಕಾಮಗಾರಿಯು ಭರದಿಂದ ನಡೆದಿದ್ದು ಸದ್ಯ ಕಾಲುವೆಯಲ್ಲಿ ನೀರು ಹರಿಸುತ್ತಿರುವುದರಿಂದಾಗಿ ಕಾಮಗಾರಿಯ ಕೆಲಸ ನಿಂತಿದೆ. ಮಳೆಯಿಂದ ಹಾನಿಯಾಗಿರುವ ಕಾಲುವೆಯ ಭಾಗದ ಕೆಲಸವನ್ನು ಮತ್ತೆ ಹೊಸದಾಗಿ ಮಾಡಿ, ಕಾಮಗಾರಿಯಲ್ಲಿ ಗುಣಮಟ್ಟ ಕಾದುಕೊಳ್ಳುವಂತೆ ಇಂಜಿನಿಯರ್ ಆನಂದ್ ಸೂಚನೆ ನೀಡಿದರು.
ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ