ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು-ನೌಕರರು ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹೆಣಗಾಡುತ್ತಿರುವ ಈ ಹೊತ್ತಲ್ಲಿ ನೌಕರರ ಕೂಟದ ಕೆಲ ಮುಖಂಡರೆನಿಸಿಕೊಂಡವರು ನೌಕರರಿಗೆ ಯಾವುದೇ ಪ್ರಯೋಜನವಿಲ್ಲದ ಕೆಲಸದಲ್ಲಿ ತೊಡಗಿರುವುದು ನೋವಿನ ಸಂಗತಿ.
ನೌಕರರು ದಿನಬೆಳಗಾದರೆ ಬರುತ್ತಿರುವ ವೇತನ ಈ ಬೆಲೆ ಏರಿಕೆ ನಡುವೆ ಯಾವುದಕ್ಕೂ ಸಾಲುತ್ತಿಲ್ಲ ಎಂಬ ಯೋಚನೆಯಲ್ಲಿ ಕಾಲ ಆರಂಭಿಸುತ್ತಿದ್ದರೆ ಇತ್ತ ನೌಕರರ ಕೂಟದ ಕೆಲ ಮುಖಂಡರು ನೌಕರರಿಗೆ ಯಾವುದೇ ಪ್ರಯೋಜನವಿಲ್ಲದ ಆಟೋಟ, ಬೇಡದ ವಿಚಾರಗಳನ್ನು ತೆಗೆದುಕೊಂಡು ನೌಕರರಿಗೆ ಸಿಗಬೇಕಾದ ನ್ಯಾಯ ಕೊಡಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎನಿಸುತ್ತಿದೆ.
ನೋಡಿ ಸರಿ ಸಮಾನ ವೇತನ ಕೊಡಿಸುತ್ತೇವೆ ಎಂದು ಕಳೆದ 2020ರಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, 2020ರಲ್ಲಿ ಇದ್ದ ಬಿಜೆಪಿ ಸರ್ಕಾರ 2023ರ ಮಾರ್ಚ್‌ನಲ್ಲಿ ಮುಂದೆ ಚುನಾವಣೆ ಇದೆ ಎಂಬ ದೃಷ್ಟಿಯಿಂದ ಶೇ.15ರಷ್ಟು ವೇತನ ಹೆಚ್ಚಳ ಮಾಡಿತು. ಆಗಲೂ ಈ ನೌಕರರ ಕೂಟದ ಹೋರಾಟ ವಿಫಲವಾಯಿತು.
ಆ ಬಳಿಕ ಅಂದರೆ ಕರ್ನಾಟಕ ವಿಧಾನಸಭೆಯ ಎಲ್ಲ 224 ಸ್ಥಾನಗಳಿಗೂ 10 ಮೇ 2023ರಂದು ವಿಧಾನಸಭೆ ಚುನಾವಣೆ ನಡೆದು ಮೇ 13ರಂದು ಫಲಿತಾಂಶ ಬಂದ ಬಳಿಕ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ.
ಇನ್ನು ಇದೇ ಚುನಾವಣೆ ವೇಳೆ ಕಾಂಗ್ರೆಸ್ ಸರ್ಕಾರ ಸಾರಿಗೆ ನೌಕರರಿಗೆ ಕೊಟ್ಟಿರುವ ಅದರಲ್ಲೂ ಕೂಟದ ಮುಖಂಡರಿಗೆ ಕೊಟ್ಟಿರುವ ಸರಿ ಸಮಾನ ವೇತನ ಭರವಸೆಯನ್ನು ಅವರದೇ ಸರ್ಕಾರವಿದ್ದರೂ ಈವರೆಗೂ ಅಂದರೆ ಒಂದೂವರೆ ವರ್ಷ ಕಳೆದಿದ್ದರೂ ಈಡೇರಿಸಿಕೊಳ್ಳಲು ಸಾಧ್ಯವಾಗಿಲ್ಲ ಈ ಕೂಟದ ಮುಖಂಡರಿಗೆ ಎಂದರೆ ಏನರ್ಥ?
ಅಂದರೆ, ಕೂಟದ ಮುಖಂಡರೆನಿಸಿಕೊಂಡವರಿಗೆ ಸರ್ಕಾರದ ಜತೆ ಮಾತನಾಡುವುದಕ್ಕೆ ಧೈರ್ಯವಿಲ್ಲ ಎಂದರ್ಥವೆ ಅಥವಾ ಇದು ಕೋತಿ ಮೂತಿಗೆ ಮೊಸರು ಸವರುವ ಕೆಲಸ ಮಾಡುತ್ತಿದ್ದಾರೆ ಎಂದು ಅರ್ಥವೆ? ಗೊತ್ತಾಗುತ್ತಿಲ್ಲ. ಹೌದು ಜಂಟಿ ಕ್ರಿಯಾ ಸಮಿತಿಯ ಮುಖಂಡರು ನಮಗೆ ಅಗ್ರಿಮೆಂಟ್ ಬೇಕು ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು ಬರುತ್ತಲೇ ಇದ್ದಾರೆ.
ಇನ್ನು 2020ರ ಜನವರಿ ಒಂದರಿಂದ ಆಗಬೇಕಿದ್ದ ವೇತನ ಪರಿಷ್ಕರಣೆಯನ್ನು ಅಂದಿನ ಸರ್ಕಾರ ಏಕಪಕ್ಷೀಯವಾಗಿ ಅಗ್ರಿಮೆಂಟ್ ಮೂಲಕವೇ ಶೇ.15ರಷ್ಟು ಹೆಚ್ಚು ಮಾಡಿ ತನ್ನ ಆದೇಶವನ್ನು ಹೊರಡಿಸಿತ್ತು. ಆಗ ಕೋರ್ಟ್ ಮೆಟ್ಟಿಲೇರುವ ಕೆಲ ಹೈಡ್ರಾಮಗಳು ನಡೆದು ಬಳಿಕ ಅದು ಸಾಧ್ಯವಾಗಲಿಲ್ಲ ಎಂದು ಇದೇ ಕೂಟದ ಮುಖಂಡರು ಕೈ ಚೆಲ್ಲಿದರು. ಹೋಗಲಿ ಆ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ವೇತನ ಹಿಂಬಾಕಿಯನ್ನಾದರೂ ಕೊಡಿಸುವ ನಿಟ್ಟಿನಲ್ಲಿ ಒಂದು ದೃಢ ನಿರ್ಧಾರವನ್ನಾದರೂ ತೆಗೆದುಕೊಂಡರ ಅದೂ ಇಲ್ಲ.
ಈ ಬಗ್ಗೆ ಕೂಟದವರಿರಬಹುದು ಅಥವಾ ನಾವೇ ಮಾಡಿಸಿದ್ದೇವೆ ಎಂದು ಹೇಳಿಕೊಳ್ಳುವ ಜಂಟಿಯವರಿರಬಹುದು 38 ತಿಂಗಳ ಹಿಂಬಾಕಿ ಕೊಡಿಸುವುದಕ್ಕೆ ಬರಿ ಮನವಿ ಪತ್ರಗಳಿಗಷ್ಟೇ ಸೀಮಿತವಾಗಿದ್ದು, ಈವರೆಗೂ ದೃಢ ನಿರ್ಧಾರ ತೆಗೆದುಕೊಂಡಿಲ್ಲ. ಕಾರಣ ಕೇಳಿದರೆ ಇವರ ಮೇಲೆ ಅವರು ಅವರ ಮೇಲೆ ಇವರು ಸಾಮಾಜಿಕ ಜಾಲತಾಣದಲ್ಲಿ ಆರೋಪ ಪ್ರತ್ಯಾರೋಪ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ.
ಇವರ ನಡೆಯಿಂದ ಅಧಿಕಾರಿಗಳು- ನೌಕರರು ಕಳೆದ 5ವರ್ಷಗಳಿಂದಲೂ ಅನುಭವಿಸುತ್ತಿರುವ ಆರ್ಥಿಕ ಸಮಸ್ಯೆ ಹೇಳತೀರತಾಗಿದೆ. ಈ ಕೂಟ ಮತ್ತು ಜಂಟಿ ಮುಖಂಡರಿಗೆ ಇದು ಕಾಣಿಸುತ್ತಿಲ್ಲವೇ? ಹೋಗಲಿ ನಾವು ಸರಿ ಸಮಾನ ವೇತನ ಮಾಡಿಸುತ್ತೇವೆ ಎಂದು ಹೇಳುತ್ತಿರುವ ಕೂಟದ ಕಟ್ಟಾಳುಗಳು 2024ರ ಜನವರಿ ಒಂದು ಮುಗಿದು 11 ತಿಂಗಳು ಕಳೆಯುತ್ತಿದ್ದರೂ ಏಕೆ ಈವರೆಗೂ ಒಂದು ದೃಢ ನಿರ್ಧಾರ ತೆಗೆದುಕೊಂಡಿಲ್ಲ?
ಇದೆಲ್ಲವನ್ನು ಗಮನಿಸಿದರೆ ಈ ಕೂಟದ ಮುಖಂಡರೂ ಕೂಡ ನೌಕರರನ್ನು ಯಾಮಾರಿಸಿಕೊಂಡು ಬರುತ್ತಿದ್ದಾರೆ ಎನಿಸುತ್ತಿದೆ. ಕಾರಣ ವೇತನ ಸಂಬಂಧ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಸರಿ ಸಮಾನ ವೇತನ ಕೊಡುವ ಬಗ್ಗೆ ಹಾಕಿಸಿರುವ ನಾವೇ ಎಂದು ಹೇಳಿಕೊಳ್ಳುವ ಇವರು ಈವರೆಗೂ ಅಂದರೆ ಸರ್ಕಾರ ರಚನೆಯಾಗಿ ಒಂದೂವರೆ ವರ್ಷ ಕಳೆದಿದ್ದರೂ ಏಕೆ ಜಾರಿ ಮಾಡಿಸಿಲ್ಲ?
ಅಂದರೆ ಕೂಟದ ಈ ಮುಖಂಡರು ಸಾರಿಗೆ ನೌಕರರ ಪತ್ತಿನ ಸಹಕಾರ ಸಂಘದಲ್ಲಿ ಗೆಲ್ಲುವುದಕ್ಕೆ ಈ ರೀತಿ ನಾಟಕವಾಡುತ್ತಿದ್ದಾರಾ? ಜತೆಗೆ ಆ ನಾಟಕದಿಂದಲೇ ನೌಕರರನ್ನು ಈವರೆಗೂ ಯಾಮಾರಿಸಿಕೊಂಡು ಬಂದು ಸಹಕಾರ ಸಂಘಗಳಲ್ಲಿ ಅಧಿಕಾರ ಹಿಡಿದಿದ್ದಾರಾ ಎಂಬ ಅನುಮಾನ ಮೂಡುವಂತಿದೆ. ಇದಕ್ಕೆ ಕೂಟದ ಮುಖಂಡರೆ ಉತ್ತರ ಕೊಡಬೇಕು.
ಇನ್ನು ಸರಿ ಸಮಾನ ಮಾಡಿಸುತ್ತೇವೆ ಎಂದು ಮಾಧ್ಯಮಗಳಲ್ಲಿ ಹೇಳಿಕೆ ಕೊಡುವುದನ್ನು ಬಿಟ್ಟು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಬಾಲಂಗೋಚಿಗಳಿಂದ ಬೊಬ್ಬೆಹೊಡೆಸುವುದನ್ನು- ಹೊಡೆಯುವುದನ್ನು ಬಿಟ್ಟು ಇನ್ನಾದರೂ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ಸಮಸ್ತ ಸಾರಿಗೆಯ ಅಧಿಕಾರಗಳು-ನೌಕರರಿಗೆ ಸರಿಸಮಾನ ವೇತನ ಮಾಡಿಸುವತ್ತ ಕೂಟದ ಕಟ್ಟಾಳುಗಳು ಗಮನಕೊಡಬೇಕು. ಇಲ್ಲ ನಿಮ್ಮದು ಡ್ರಾಮಾ ಎಂದು ಗೊತ್ತಾದರೆ ನಿಮ್ಮನ್ನು ಈವರೆಗೂ ಇಷ್ಟೊಂದು ಎತ್ತರಕ್ಕೆ ಬೆಳೆಸಿರುವ ನೌಕರರೆ ನಿಮಗೆ ಬುದ್ಧಿಕಲಿಸುತ್ತಾರೆ.
ಹೀಗಾಗಿ ನೌಕರರ ಯಾಮಾರಿಸಿಕೊಂಡು ಬಂದಿರುವುದು ಸಾಕು. ಅದನ್ನು ಬಿಟ್ಟು ನೌಕರರಿಗೆ ಸಿಗಬೇಕಿರುವ ವೇತನ ಸೌಲಭ್ಯ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಹೆಚ್ಚಿನ ಗಮನಕೊಡಿ. ಈವರೆಗೂ ಸರಿಸಮಾನ ವೇತನ ಕೊಡಿಸುತ್ತೇವೆ ಎಂದು ಹೇಳಿಕೊಂಡು 4ವರ್ಷಕಳೆದಿದ್ದೀರಾ. ನೀವು ಇಷ್ಟುದಿನ ತೆಗೆದುಕೊಂಡರೂ ಈವರೆಗೂ ಈಡೇರಿಸಲು ದೃಢನಿರ್ಧಾರ ತೆಗೆದುಕೊಂಡಿಲ್ಲ ಎಂದರೆ ನಿಮ್ಮ ಯೋಗ್ಯತೆಗೆ ಏನು ಎಂಬುವುದು ನೌಕರರಿಗೆ ಅರ್ಥವಾಗುವ ಕಾಲ ಸನ್ನಿತವಾಗುತ್ತಿದೆ ಎಂದೇ ಅರ್ಥ.
ಇದನ್ನು ಅರ್ಥಮಾಡಿಕೊಂಡು ನೌಕರರಿಗೆ ಸಿಗಬೇಕಿರುವುದನ್ನು ಶೀಘ್ರದಲ್ಲೇ ಕೊಡಿಸಿ ಇಲ್ಲ ಜಂಟಿಯವರು ಹೇಳುತ್ತಿರುವುದನ್ನು ಮತ್ತೊಮ್ಮೆ ಮಾಡಿ ತೋರಿಸಿದರೆ ನಿಮ್ಮದು ಬರಿಡ್ರಾಮಾ ಎಂಬುವುದು ನೌಕರರಿಗೆ ಅರ್ಥವಾಗಿ ಆ ನೌಕರರೇ ನಿಮ್ಮನ್ನು ಬೆತ್ತಲಾಸುತ್ತಾರೆ ಎಚ್ಚರ.