ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು-ನೌಕರರಿಗೆ ಸರಿ ಸಮಾನ ವೇತನ ಕೊಡಿಸುತ್ತೇವೆ ಎಂದು ಕಳೆದ 2020ರಿಂದಲೂ ಹೋರಾಟ ಮಾಡಿಕೊಂಡು ಬರುತ್ತಿರುವ ನೌಕರರ ಕೂಟದ ಕಾರ್ಯಸೂಚಿ ದಿಕ್ಕುತಪ್ಪುತ್ತಿದೆ ಎಂದು ನೌಕರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಸರ್ಕಾರ ಸಾರಿಗೆ ನೌಕರರಿಗೆ ಕೊಟ್ಟಿರುವ ಅದರಲ್ಲೂ ಕೂಟದ ಮುಖಂಡರಿಗೆ ಕೊಟ್ಟಿರುವ ಸರಿ ಸಮಾನ ವೇತನ ಭರವಸೆಯನ್ನು ಅವರದೇ ಸರ್ಕಾರವಿದ್ದರೂ ಈವರೆಗೂ ಈಡೇರಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದರೆ ಕೂಟದ ಮುಖಂಡರು ಈ ಬಗ್ಗೆ ಎಲ್ಲೋ ದಾರಿತಪ್ಪುತ್ತಿದ್ದಾರೆ ಎನಿಸುತ್ತಿದೆ.
ಹೌದು ಜಂಟಿ ಕ್ರಿಯಾ ಸಮಿತಿಯ ಮುಖಂಡರು ನಮಗೆ ಅಗ್ರಿಮೆಂಟ್ ಬೇಕು ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು ಬರುತ್ತಲೇ ಇದ್ದಾರೆ. ಆದರೆ ಕೂಟದ ಮುಖಂಡರು ಸರಿ ಸಮಾನ ವೇತನ ಕೊಡಿಸಿಯೇ ತೀರುತ್ತೇವೆ ಎಂದು ಘಂಟಾಘೋಷವಾಗಿ ಹೇಳುವಂತ ದೃಢ ನಿರ್ಧಾರ ತೆಗೆದುಕೊಳ್ಳದೆ ಮೀನಮೇಷ ಎಣಿಸುತ್ತಿದ್ದಾರೆ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಕೂಟದ ಮುಖಂಡರೂ ಕೂಡ ನೌಕರರನ್ನು ಯಾಮಾರಿಸಿಕೊಂಡು ಬರುತ್ತಿದ್ದಾರೆ. ಕಾರಣ ವೇತನ ಸಂಬಂಧ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಸರಿ ಸಮಾನ ವೇತನ ಕೊಡುವ ಬಗ್ಗೆ ಹಾಕಿಸಿರುವ ನಾವೇ ಎಂದು ಹೇಳಿಕೊಳ್ಳುವ ಇವರು ಈವರೆಗೂ ಅಂದರೆ ಸರ್ಕಾರ ಬಂದು ಒಂದೂವರೆ ವರ್ಷ ಕಳೆದಿದ್ದರೂ ಬರಿ ಮನವಿ ಪತ್ರಗಳನ್ನು ಕೊಟ್ಟುಕೊಂಡೆ ಬರುತ್ತಿರುತ್ತಿದ್ದಾರೆ ಅಷ್ಟೆ.
ಇನ್ನು ಸರಿ ಸಮಾನ ಮಾಡಿಸುತ್ತೇವೆ ಎಂದು ಮಾಧ್ಯಮಗಳಲ್ಲಿ ಹೇಳಿಕೆ ಕೊಡುವುದನ್ನು ಬಿಟ್ಟು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಬಾಲಂಗೋಚಿಗಳಿಂದ ಬೊಬ್ಬೆಹೊಡೆಸುವುದನ್ನು- ಹೊಡೆಯುವುದನ್ನು ಬಿಟ್ಟು ಇನ್ನಾದರೂ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ಸಮಸ್ತ ಸಾರಿಗೆಯ ಅಧಿಕಾರಗಳು-ನೌಕರರಿಗೆ ಸರಿಸಮಾನ ವೇತನ ಮಾಡಿಸುವತ್ತ ಕೂಟದ ಕಟ್ಟಾಳುಗಳು ಗಮನಕೊಡಬೇಕು.
ನೌಕರರಿಗೆ ಸಿಗಬೇಕಿರುವ ವೇತನ ಸೌಲಭ್ಯ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಹೆಚ್ಚಿನ ಗಮನಕೊಡಿ. ಈವರೆಗೂ ಸರಿಸಮಾನ ವೇತನ ಕೊಡಿಸುತ್ತೇವೆ ಎಂದು ಹೇಳಿಕೊಂಡು 4ವರ್ಷಕಳೆದಿದ್ದೀರಾ. ನೀವು ಇಷ್ಟುದಿನ ತೆಗೆದುಕೊಂಡರೂ ಈವರೆಗೂ ಈಡೇರಿಸಲು ದೃಢನಿರ್ಧಾರ ತೆಗೆದುಕೊಂಡಿಲ್ಲ. ಇನ್ನಾದರೂ ಕಾಳಜಿ ತೆಗೆದುಕೊಳ್ಳಿ ಎಂಬುವುದು ನಮ್ಮ ಕಳಕಳಿ.