KSRTC ನಿವೃತ್ತ ನೌಕರರಿಗೆ ಸಿಹಿ ಸುದ್ದಿ- ಉಪಧನ, ಗಳಿಕೆ ರಜೆ ನಗದೀಕರಣ ಪಾವತಿಗೆ 224 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ಸಂಸ್ಥೆಗಳಿಗೆ 2020ರ ಜನವರಿ 1ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಸೇವಾ ವಿಮುಕ್ತಿ ಹೊಂದಿದ ನೌಕರರ ಉಪಧನ ಹಾಗೂ ಗಳಿಕೆ ರಜೆ ನಗದೀಕರಣದ ವ್ಯತ್ಯಾಸದ ಮೊತ್ತವನ್ನು ಪಾವತಿಸಲು 224.05 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ.
01.01.2020 ರಿಂದ 28.02.2023ರವರೆಗೆ ನಾಲ್ಕೂ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ಸೇವಾವಿಮುಕ್ತಿ ಹೊಂದಿದ ಅಧಿಕಾರಿ ಮತ್ತು ನೌಕರರಿಗೆ 01.01.2020ರ ಪರಿಷ್ಕೃತ ವೇತನ ಶ್ರೇಣಿಯನ್ವಯ ಪಾವತಿಸಬೇಕಾದ ಉಪಧನ ಹಾಗೂ ಗಳಿಕೆ ರಜೆ ನಗದೀಕರಣದ ಪಾವತಿಗಾಗಿ ಮಾತ್ರ ಇದನ್ನು ಬಳಸಿಕೊಳ್ಳತಕ್ಕದ್ದು ಹಾಗೂ ಈ ಕುರಿತು ಬಳಕೆ ಪ್ರಮಾಣ ಪತ್ರ ಮತ್ತು ಸಂಬಂಧಪಟ್ಟ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು ಎಂದು ಸಾರಿಗೆ ಇಲಾಖೆಯ ಸರ್ಕಾರ ಅಧೀನ ಕಾರ್ಯದರ್ಶಿ ಪುಷ್ಪ ತಿಳಿಸಿದ್ದಾರೆ.
ವಿಶೇಷ ಅನುದಾನದ ಅಗತ್ಯವಿದೆ ಎಂದು ಪತ್ರ ಬರೆದಿದ್ದ ಎಂಡಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರಕ್ಕೆ ಪತ್ರ ಬರೆದು ಸಂಸ್ಥೆಯ ಕಾರ್ಯಚರಣೆಯ ಸಮರ್ಪಕ ನಿರ್ವಹಣೆ ಹಾಗೂ ಶಕ್ತಿ ಯೋಜನೆಯ ಅನುಷ್ಠಾನದಿಂದಾಗಿ ಸಂಸ್ಥೆಯ ಆದಾಯ ಗಳಿಕೆಯಲ್ಲಿ ಹೆಚ್ಚಳ ಉಂಟಾಗಿದ್ದರೂ ಸಹ, ನಿಗಮದ ನಗದು ಒಳಹರಿವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
ಹೀಗಾಗಿ ನಿಗಮಗಳು ಕಳೆದ ಹಲವಾರು ವರ್ಷಗಳಿಂದ ನಷ್ಟವನ್ನು ಅನುಭವಿಸುತ್ತಿವೆ ಹಾಗೂ ನಗದು ಹರಿವಿನಲ್ಲಿ ಕೊರತೆ ಉಂಟಾಗಿದೆ. ನವೆಂಬರ್-2024ರ ಮಾಹೆಯ ಅಂತ್ಯದಲ್ಲಿದ್ದಂತೆ, ನಾಲ್ಕು ನಿಗಮಗಳಲ್ಲಿ ಒಟ್ಟು ರೂ.6330.25 ಕೋಟೆಗಳ ಹೊಣೆಗಾರಿಕೆ ಕ್ರೋಢೀಕೃತವಾಗಿದೆ ಎಂದು ತಿಳಿಸಿ ನಿಗಮವಾರು ಮಾಹಿತಿಯನ್ನು ನೀಡಿದ್ದರು.
ಅಲ್ಲದೆ ಈ ಹಿಂಬಾಕಿ ಹೊಣೆಗಾರಿಕೆ ಕ್ರೋಢೀಕೃತವಾಗಲು ಇಂಧನ ವೆಚ್ಚ ಹಾಗೂ ಕಾಲಿಕವಾಗಿ ಹೆಚ್ಚಳವಾಗುತ್ತಿರುವ ತುಟ್ಟಿ ಭತ್ಯೆ ಹೆಚ್ಚಳದಿಂದಾಗಿ ಕಾರ್ಯಾಚರಣೆ ವೆಚ್ಚದಲ್ಲಿ ಏರಿಕೆ ಉಂಟಾಗಿದ್ದು ಇದಕ್ಕೆ ಅನುಗುಣವಾಗಿ ಪ್ರಯಾಣಿಕರ ದರದಲ್ಲಿ 2020 ರಿಂದ (ಬೆಂ.ಮ.ಸಾ.ಸಂಸ್ಥೆಯಲ್ಲಿ 2015 ರಿಂದ) ಹಾಗೂ ವಿದ್ಯಾರ್ಥಿ ರಿಯಾಯಿತಿ ಪಾಸ್ಗಳ ದರದಲ್ಲಿ 2012 ಪರಿಷ್ಕರಣೆಯಾಗದೇ ಇರುವುದು, ದರ ಪರಿಷ್ಕರಣೆ ಹಿಂದೆ ಪ್ರತಿದಿನದ ಸರಾಸರಿ ಇಂಧನ ವೆಚ್ಚ ರೂ.9.16ಕೋಟಿಗಳಿದ್ದು, ಪ್ರಸ್ತುತ ಪ್ರತಿದಿನದ ಸರಾಸರಿ ಇಂಧನ ವೆಚ್ಚ ರೂ.13.21 ಕೋಟೆಗಳಾಗಿದ್ದು, ಪ್ರತಿದಿನದ ಇಂಧನ ವೆಚ್ಚದಲ್ಲಿ ರೂ.4.05 ಕೋಟಿಗಳ ಹೆಚ್ಚಳವಾಗಿದೆ.
ಮುಂದುವರೆದು, ಪಸ್ತುತ ನಿಗಮಗಳ ಕಾರ್ಯಾಚರಣೆಗೆ ಅತ್ಯಗತ್ಯವಾದ ಸಿಬ್ಬಂದಿಗಳ ನಿವ್ವಳ ವೇತನ, ಇಂಧನ ವೆಚ್ಚ, ಶಾಸನ ಬದ್ಧ ಪಾವತಿಗಳಾದ ಜಿ.ಎಸ್.ಟಿ, ಪಿಂಚಣಿ, ಸಾಲ ಮರುಪಾವತಿ ಹಾಗೂ ಇತರೆ ಅತ್ಯಗತ್ಯ ವೆಚ್ಚಗಳನ್ನು ಮಾತ್ರ ಪಾವತಿ ಮಾಡಲಾಗುತ್ತಿದ್ದು ಭವಿಷ್ಯ ನಿಧಿ ವಂತಿಕೆ, ನಿವೃತ್ತ ನೌಕರರ ಉಪಧನ ಹಾಗೂ ಇತರೆ ಬಾಬು ಮೊತ್ತವನ್ನು ನಗದು ಕೊರತೆಯಿಂದಾಗಿ ಪಾವತಿ ಮಾಡಲು ಉಳಿಸಿಕೊಳ್ಳಲಾಗುತ್ತಿದೆ.
09-10-2024ರಂದು ಜರುಗಿದ ಸಾರಿಗೆ ನೌಕರರ ಕಾರ್ಮಿಕ ಸಂಘಟನೆಗಳ ಸಭೆಯಲ್ಲಿ ಸೇವಾವಿಮುಕ್ತಿ ಹೊಂದಿದ ನೌಕರರಿಗೆ 2020ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಉಪಧನ ಹಾಗೂ ಗಳಿಕೆ ರಜೆ ನಗದೀಕರಣದ ವ್ಯತ್ಯಾಸದ ಮೊತ್ತ ರೂ.224.05 ಕೋಟೆಗಳನ್ನು ನವೆಂಬರ್-2024ರೊಳಗಾಗಿ ಪಾವತಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಈ ಮೊತ್ತವನ್ನು ಸಹ ಪಾವತಿಸಲು ಕಷ್ಟಸಾಧ್ಯವಾಗಿದೆ.
ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ, ಸಾರಿಗೆ ಸಂಸ್ಥೆಗಳಿಗೆ ನಿವೃತ್ತ ನೌಕರರ ಬಾಕಿ ಹೊಣೆಗಾರಿಕೆ ಪಾವತಿಗಾಗಿ ವಿಶೇಷ ಅನುದಾನದ ಅವಶ್ಯಕತೆವಿದ್ದು, ಸದ್ಯದ ನಿಗಮಗಳ ಆರ್ಥಿಕ ಪರಿಸ್ಥಿತಿಯಲ್ಲಿ ಈ ಹೊಣೆಗಾರಿಕೆಗಳನ್ನು ಸಂಸ್ಥೆಗಳ ಅಂತರಿಕ ಸಂಪನ್ಮೂಲಗಳಿಂದ ಪಾವತಿಸಲು ಸಾಧ್ಯವಾಗದೇ ಇರುವುದರಿಂದ 01.01.2020 ರಿಂದ 28.02.2023ರ ಅವಧಿಯಲ್ಲಿ ಸೇವಾವಿಮುಕ್ತಿ ಹೊಂದಿದ ಅಧಿಕಾರಿ ಮತ್ತು ನೌಕರರಿಗೆ ಪಾವತಿಸಬೇಕಾದ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಉಪಧನ ಹಾಗೂ ಗಳಿಕೆ ರಜೆ ನಗದೀಕರಣ ಪಾವತಿಗಾಗಿ ರೂ.224.05 ಕೋಟಿಗಳ ವಿಶೇಷ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಕೋರಿದ್ದರು.
ಎಂಡಿ ಅವರು ಕೋರಿರುವಂತೆ ನಿವೃತ್ತ ಹೊಂದಿದ ಅಧಿಕಾರಿ ಮತ್ತು ನೌಕರರಿಗೆ ಪಾವತಿಸಬೇಕಾದ ಉಪಧನ ಹಾಗೂ ಗಳಿಕೆ ರಜೆ ನಗದೀಕರಣ ಮೊತ್ತಕ್ಕೆ ರೂ.224.05 ಕೋಟಿಗಳನ್ನು ಸರ್ಕಾರ ಮಂಜೂರು ಮಾಡಿ ಆದೇಶಿಸಿದೆ.
ಇನ್ನು ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ನಾಲ್ಕೂ ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಿಗೆ 01.01.2020ರಿಂದ 28.02.2023ರವರೆಗಿನ ಅವಧಿಯಲ್ಲಿ ಸೇವಾವಿಮುಕ್ತಿ ಹೊಂದಿದ ಅಧಿಕಾರಿ ಮತ್ತು ನೌಕರರಿಗೆ 01.01.2020ರ ಪರಿಷ್ಕೃತ ವೇತನ ಶ್ರೇಣಿಯನ್ವಯ ಪಾವತಿಸಬೇಕಾದ ಉಪಧನ ಹಾಗೂ ಗಳಿಕೆ ರಜೆ ನಗದೀಕರಣದ ವ್ಯತ್ಯಾಸ ಮೊತ್ತದ ಪಾವತಿಗಾಗಿ ಒಟ್ಟು ರೂ.224.05 ಕೋಟೆಗಳನ್ನು ಸಂಸ್ಥೆಗಳಿಗೆ ನಿಗಮವಾರು ಬಿಡುಗಡೆಗೊಳಿಸಿ ಆದೇಶಿಸಿದೆ.