ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಬೇಡಿಕೆಗಳ ಈಡೇರಿಕಗಾಗಿ ಜಂಟಿ ಕ್ರಿಯಾ ಸಮಿತಿ ಇದೇ ಡಿ.31ರಂದು ಮುಷ್ಕರಕ್ಕೆ ಕರೆ ನೀಡಿದೆ.
ಅದರ ಮುಂದುವರಿದ ಭಾಗವಾಗಿ ಇಂದು ಡಿ.13ರಂದು ಜಂಟಿ ಕ್ರಿಯಾ ಸಮಿತಿಯ ಪರವಾಗಿ ಫೆಡರೇಷನ್ ಜಂಟಿ ಕಾರ್ಯದರ್ಶಿ ಹಾಗೂ ಡಿಆರ್‌ಬಿಎಫ್ ಸೆಕ್ರೆಟರಿ ಮಂಜುಳಾ ಮತ್ತು ಭವಿಷ್ಯ ನಿಧಿ ಧರ್ಮದರ್ಶಿ ಶಶಿರೇಖಾ ಅವರು ಕೂಟದ ಕಚೇರಿಗೆ ಭೇಟಿ ನೀಡಿ ಮುಷ್ಕರಕ್ಕೆ ಬೆಂಬಲ ನೀಡುವಂತೆ ಕೋರಿ ಮನವಿ ಪತ್ರ ಸಲ್ಲಿಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಕೂಟದ ಕಚೇರಿಗೆ ಭೇಟಿ ನೀಡಿದಾಗ ಕಚೇರಿಯು ಬಾಗಿಲು ಹಾಕಿದ ಕಾರಣ ಕೂಟದ ಅಧ್ಯಕ್ಷ ಚಂದ್ರಶೇಖರ್ ಅವರಿಗೆ ಫೋನ್ ಮೂಲಕ ಕರೆ ಮಾಡಿ ವಿಷಯವನ್ನು ತಿಳಿಸಿದ್ದು, ಆ ವೇಳೆ ಚಂದ್ರು ಕಚೇರಿಯ ಕಿಟಕಿಯ ಮೂಲಕ ಒಳಗೆ ಹಾಕಿ ಹೋಗಿ ಎಂದು ಹೇಳಿದ ಕಾರಣ ಅದೇ ರೀತಿ ಮಾಡಲಾಗಿದೆ ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಇತ್ತ ಜಂಟಿ ಕ್ರಿಯಾ ಸಮಿತಿ ಡಿ.31ರಂದು ಮುಷ್ಕರಕ್ಕೆ ಕರೆ ನೀಡಿದೆ. ಆದರೆ ಇವರು ಮಾಡಿಸಲು ಹೊರಟಿರುವ ನಾಲ್ಕೂ ವರ್ಷಕ್ಕೊಮ್ಮೆ ಅಗ್ರಿಮೆಂಟ್‌ಗೆ ನಮ್ಮ ಬೆಂಬಲವಿಲ್ಲ ಎಂದು ನಾಲ್ಕೂ ಸಾರಿಗೆಯ ಬಹುತೇಕ ನೌಕರರು ಹಾಗೂ 100ಕ್ಕೆ 100ರಷ್ಟು ಅಧಿಕಾರಿಗಳು ಈಗಾಗಲೇ ಮಾಧ್ಯಮಗಳಲ್ಲಿಯೇ ಹೇಳಿಕೆ ನೀಡಿದ್ದಾರೆ.
ಇದೆಲ್ಲವನ್ನು ಗಮನಿಸಿದರೆ ಡಿ.31ಕ್ಕೆ ಹಮ್ಮಿಕೊಂಡಿರುವ ಮುಷ್ಕರ ನಡೆಯುವ ಡೌಟು ಎಂದು ಜಂಟಿ ಕ್ರಿಯಾ ಸಮಿತಿಯ ಕೆಲ ಪದಾಧಿಕಾರಿಗಳೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆ ಅಧಿಕಾರಿಗಳ ಬಿಟ್ಟು ನೌಕರರಿಗಷ್ಟೇ ವೇತನ ಹೆಚ್ಚಳವಾಗುತ್ತದೆ ಎಂಬಂತೆ ಮುಷ್ಕರ ನಡೆಯಲಿದೆ ಎಂದು ಹೇಳಿಕೊಂಡು ಹೊರಟಿರುವ ಸಮಿತಿಯ ನಡೆ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನು ಈವರೆಗೂ ನಾಲ್ಕೂ ಸಾರಿಗೆ ನಿಗಮಗಳ ಅಧಿಕಾರಿಗಳು ಹೋರಾಟ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಜಂಟಿ ಕ್ರಿಯಾ ಸಮಿತಿಯ ಭಾಗವಾಗಿರುವ ಅನಂತ ಸುಬ್ಬರಾವ್ ಅವರು ಹೇಳಿಕೆ ಕೊಡುತ್ತಿದ್ದಾರೆ. ಆದರೆ ಅವರು ಏಕೆ ಹೋರಾಟ ಮಾಡಬಾರದು ಎಂಬುದಕ್ಕೆ ಸಮಂಜವಾದ ಉತ್ತರ ಕೊಡುತ್ತಿಲ್ಲ.
ನಮ್ಮ ಭಾರತ ಸಂವಿಧಾನವೇ ಹೇಳುತ್ತದೆ ನಿಮ್ಮ ಹಕ್ಕು ಪಡೆಯುವುದಕ್ಕೆ ಹೋರಾಟ ಅನಿವಾರ್ಯವಾದರೆ ನೀವು ಹೋರಾಟಕ್ಕೆ ಇಳಿಯ ಬಹುದು ಎಂದು. ಆದರೆ ಅನಂತ ಸುಬ್ಬರಾವ್ ಅವರು ಮಾತ್ರ ಅಧಿಕಾರಿಗಳು ಹೋರಾಟ ಮಾಡುವುದಕ್ಕೆ ಆಗುವುದಿಲ್ಲ ಎಂದು ಹೇಳುತ್ತಾರೆ.
ಇನ್ನು ರಾಜ್ಯ ಸರ್ಕಾರದ ಅಧಿಕಾರಿಗಳು/ನೌಕರರು ಒಟ್ಟಾಗಿ ಹೋರಾಟಕ್ಕೆ ಕರೆ ನೀಡಿದ್ದರಿದಲೇ ಸರ್ಕಾರ ಅವರಿಗೆ ಶೇ.27.5ರಷ್ಟು ವೇತನ ಹೆಚ್ಚಳ ಮಾಡಿ ಆದೇಶ ಹೊರಡಿದ್ದು ಅದು ಕೂಡ ತರಾತುರಿಯಲ್ಲಿ ವೇತನ ಹೆಚ್ಚಳದ ಆದೇಶ ಮಾಡಿದ್ದು ನಮ್ಮ ಮುಂದೆಯೇ ಇದೆ. ಸರ್ಕಾರಿ ಅಧಿಕಾರಿಗಳು/ನೌಕರರಿಗೆ ಮುಷ್ಕರ ಮಾಡಲು ಹಕ್ಕಿದೆ ಎಂದ ಮೇಲೆ ಸಾರಿಗೆ ಅಧಿಕಾರಿಗಳು ಏಕೆ ಮುಷ್ಕರ ಮಾಡಬಾರದು?
ಇದನ್ನು ನೋಡಿದರೆ ಎಲ್ಲೋ ಅಧಿಕಾರಿಗಳ ದಾರಿ ತಪ್ಪಿಸುವ ಕೆಲಸಕ್ಕೆ ಅನಂತ ಸುಬ್ಬರಾವ್ ಅವರು ಮುಂದಾಗಿದ್ದಾರೆ ಎನಿಸುತ್ತಿದೆ. ಅಲ್ಲದೆ ಜಂಟಿ ಕ್ರಿಯಾ ಸಮಿತಿ ಕರೆ ನೀಡಿರುವ ಮುಷ್ಕರಕ್ಕೆ ಬಹುತೇಕ ನೌಕರರ ವಿರೋಧವಿದೆ. ಆದರೂ ಯಾವ ಧೈರ್ಯದ ಮೇಲೆ ಇರುವ ಕೆರೆ ನೀಡಿದ್ದಾರೋ ಗೊತ್ತಿಲ್ಲ. ಇದು ಗೊತ್ತಾಗಬೇಕಾದರೆ ಎಲ್ಲರೂ ಡಿ.31ರವರೆಗೂ ಕಾಯಬೇಕಿದೆ.