KSRTC: ಭ್ರಷ್ಟಾಚಾರ ಬಯಲು ಮಾಡದಂತೆ ದೂರುದಾರನ ಬಾಯಿ ಮುಚ್ಚಿಸಲು ATI ಮೂಲಕ ₹20 ಸಾವಿರ ಕೊಟ್ಟರೇ ಡಿಸಿ, ಡಿಟಿಒ!
- ಟಿಸಿಗಳಿಂದ ಪ್ರತಿ ತಿಂಗಳು ₹1000 ಲಂಚ ಸಂಗ್ರಹಿಸಿ ತಮಗೆ ಕೊಡುತ್ತಿದ್ದವನ್ನೇ ಅಮಾನತು ಮಾಡಿದರು
- ತಮ್ಮ ಲಂಚಬಾಕತನ ಎಲ್ಲಿ ಬಯಲಾಗುತ್ತದೋ ಎಂದು ಹೆದರಿದ ತುಮಕೂರು ಡಿಸಿ, ಡಿಟಿಒಗಳು!
ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತುಮಕೂರು ವಿಭಾಗದ ಅಧಿಕಾರಿಗಳು ಹೇಳಿದಂತೆ ಪ್ರತಿ ತಿಂಗಳು ನಿಲ್ದಾಣಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಹುತೇಕ ಎಲ್ಲ ಸಂಚಾರ ನಿಯಂತ್ರಕರಿಂದ ಅಧಿಕಾರಿಗಳು ತಲಾ 1000 ರೂಪಾಯಿ ವಸೂಲಿ ಮಾಡುತ್ತಿದ್ದ ಬಗ್ಗೆ ವಿಜಯಪಥ ಕಳೆದ 2024ರ ಡಿಸೆಂಬರ್ 23ರಂದು ವರದಿ ಮಾಡಿತ್ತು.
ಈ ವರದಿಯಿಂದ ಎಚ್ಚೆತ್ತ ವಿಭಾಗದ ಅಧಿಕಾರಿಗಳು ನಾವೆಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೋ ಎಂಬ ಭಯದಲ್ಲಿ ತಮಗೆ ಹಣ ವಸೂಲಿ ಮಾಡಿಕೊಡುತ್ತಿದ್ದ ಅಮಾಯಕ ಬಸ್ ನಿಲ್ದಾಣದ ಸಂಚಾರಿ ನಿಯಂತ್ರಕ ಪುಟ್ಟರಾಜು ಎಂಬುವರನ್ನು ಅಮಾನತು ಮಾಡಿ ಜಾನ ನಡೆ ಅನುಸರಿಸಿದ್ದಾರೆ ಈ ವಿಭಾಗದ ಡಿಸಿ ಮತ್ತು ಡಿಟಿಒ.
ಡಿಸೆಂಬರ್ 23ರಂದು ತುಮಕೂರು ವಿಭಾಗದ ತುಮಕೂರಿನ ವಿಭಾಗದಲ್ಲಿರುವ ಉನ್ನತ ಅಧಿಕಾರಿಗಳಿಗೆ ಪ್ರತಿ ತಿಂಗಳು ಬಸ್ ನಿಲ್ದಾಣದ ಸಂಚಾರಿ ನಿಯಂತ್ರಕರು ಒಂದು ಸಾವಿರ ರೂ. ಲಂಚವನ್ನು ನೀಡಬೇಕೆಂದು ಒತ್ತಡ ಹಾಕುತ್ತಿದ್ದರು. ಈ ಕಾರಣದಿಂದ ಬಸ್ ನಿಲ್ದಾಣದ ಸಂಚಾರಿ ನಿಯಂತ್ರಕ ಪುಟ್ಟರಾಜು ಅವರು ಎಲ್ಲ ಸಂಚಾರ ನಿಯಂತ್ರಕರಿಂದ ಹಣ ವಸೂಲಿ ಮಾಡಿ ಕೊಡುತ್ತಿದ್ದರು. ಈ ಬಗ್ಗೆ ದಾಖಲೆಯ ಸಮೇತ ಕೇಂದ್ರ ಕಚೇರಿಗೆ ಗೂಳೂರು ನಾಗರಾಜ್ ಅವರು ದೂರು ಸಲ್ಲಿಸಿದ್ದಾರೆ.
ಇತ್ತ ವಿಜಯಪಥ ಮೀಡಿಯಾದಲ್ಲಿ ವರದಿ ಬಂದಿದ್ದು ಹಾಗೂ ನಾಗರಾಜು ಅವರು ದೂರು ನೀಡಿದ ಪರಿಣಾಮ ಅಧಿಕಾರಿಗಳಿಗೆ ನಿಯಂತ್ರಕರಿಂದ ಲಂಚ ವಸೂಲಿ ಮಾಡಿಕೊಡುತ್ತಿದ್ದ ಪುಟ್ಟರಾಜುವನ್ನೇ ಈಗ ಅದೇ ಅಧಿಕಾರಿಗಳು ಅಮಾನತು ಮಾಡಿದ್ದಾರೆ. ಈ ಮೂಲಕ ಪುಟ್ಟರಾಜುವನ್ನು ಬಲಿಪಶು ಮಾಡಲು ಹೊರಟಿದ್ದಾರೆ.
ಇನ್ನೊಂದು ಭಾರಿ ಕುತೂಹಲಕಾರಿ ವಿಷಯವೆಂದರೆ ಈ ಪ್ರಕರಣದ ಬಗ್ಗೆ ಯಾವುದೇ ಮುಂದಿನ ಕ್ರಮ ಕೈಗೊಳ್ಳದಂತೆ ದೂರುದಾರರಾದ ಗೂಳೂರು ಸಿ.ನಾಗರಾಜ ಅವರಿಗೆ ತುಮಕೂರು ಬಸ್ ನಿಲ್ದಾಣದ ಸಹಾಯಕ ಸಂಚಾರಿ ನಿರೀಕ್ಷಕ ನಾಗರಾಜ್ ಅವರ ಮೂಲಕ ಇದೆ ವಿಭಾಗೀಯ ನಿಯಂತ್ರಣಧಿಕಾರಿ ಚಂದ್ರಶೇಖರ್ ಹಾಗೂ ವಿಭಾಗಿಯ ಸಂಚಲನಾಧಿಕಾರಿ ಬಸವರಾಜ್ ಅವರು 20 ಸಾವಿರ ರೂಪಾಯಿ ಲಂಚಕೊಟ್ಟು ಬಾಯಿ ಮುಚ್ಚಿಸಲು ಯತ್ನಿಸಿದರು ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿರಿ: KSRTC: ಟಿಸಿಗಳಿಂದ ಪ್ರತಿ ತಿಂಗಳು ಸಾವಿರ ರೂ. ಭಿಕ್ಷೆ ಬೇಡುತ್ತಿರುವ ಡಿಸಿ, ಡಿಟಿಒಗಳು..!
ಕೆಎಸ್ಅರ್ಟಿಸಿ ವಿಭಾಗೀಯ ನಿಯಂತ್ರಣಧಿಕಾರಿ ಚಂದ್ರಶೇಖರ್ ಹಾಗೂ ವಿಭಾಗಿಯ ಸಂಚಲನಾಧಿಕಾರಿ ಬಸವರಾಜ್ ಅವರು 20000 ಹಣ ನೀಡಿ ನನ್ನನ್ನು ಕೊಂಡುಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಆದರೆ ನಾನು ಅದಕ್ಕೆ ಬಗ್ಗಲಿಲ್ಲ ನ್ಯಾಯ ಸಿಗಬೇಕು ಅಷ್ಟೇ ಎಂದು ಹೇಳಿದ್ದಾಗಿ ವಿಡಯೋ ಸಹಿತ ಗೂಳೂರು ನಾಗರಾಜ್ ಅ ಆರೋಪಿಸಿದ್ದಾರೆ.
ಇನ್ನು ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿರುವ ಈ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು. ವಿಭಾಗ ನಿಯಂತ್ರಣ ಅಧಿಕಾರಿ ಹಾಗೂ ವಿಭಾಗೀಯ ಸಂಚಲನಾಧಿಕಾರಿಗಳ ಲಂಚಗುಳಿತನ ಹಾಗೂ ಭ್ರಷ್ಟಾಚಾರ ಮಿತಿ ಮೀರಿದ್ದುಈ ಬಗ್ಗೆ ಈಗಾಗಲೇ ಕೇಂದ್ರ ಕಚೇರಿ ಅಧಿಕಾರಿಗಳಿಗೆ, ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ ಹಾಗೂ ಸಾರಿಗೆ ಸಚಿವರಿಗೆ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಒಟ್ಟಾರೆ KSRTC ತುಮಕೂರು ವಿಭಾಗಕ್ಕೆ ಬರುವ ಅಧಿಕಾರಿಗಳು ಲಂಚ, ಭ್ರಷ್ಟಾಚಾರಕ್ಕೆ ಭಾರಿ ಹೆಸರುವಾಸಿ ಆಗುತ್ತಿದ್ದಾರೆ. ಆದರೂ ಇಂಥ ಭ್ರಷ್ಟರ ಹೆಡೆಮುರಿ ಕಟ್ಟುವುದಕ್ಕೆ ಮಾತ್ರ ಸಾರಿಗೆ ಸಚಿವರು ಹಾಗೂ ಎಂಡಿ ಹಿಂದೆಟುಹಾಕುತ್ತಿದ್ದಾರೆ. ಹೀಗೆ ಏಕೆ ಮಾಡುತ್ತಿದ್ದಾರೆ ಇವರು ಎಂಬುವುದು ಈವರೆಗೂ ಗೊತ್ತಾಗುತ್ತಿಲ್ಲ. ಇನ್ನಾದರೂ ಇಂಥ ಭ್ರಷ್ಟ ಅಧಿಕಾರಿಗಳಿಗೆ ಕಾನೂನಿನ ರೀತಿ ತಕ್ಕ ಪಾಠ ಕಲಿಸಬೇಕು ಎಂದು ಗೂಳೂರು ನಾಗರಾಜ ಆಗ್ರಹಿಸಿದ್ದಾರೆ.