BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು: ಅಪಘಾತದಲ್ಲಿ ಮೃತಪಟ್ಟ ಬೆಂಗಳೂರು ಮಹಾನಗರ ಸಾರಿಗೆ ನಿಗಮದ ನೌಕರರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ವಿಮೆ ಮೊತ್ತದ ಚೆಕ್ಕನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿತರಿಸಿದರು.
ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಮೃತ ನೌಕರರ ಕುಟುಂಬದವರಿಗೆ ಚೆಕ್ ವಿತರಿಸಿ ಮಾತನಾಡಿದ ಅವರು, ಇಂದು 1 ಕೋಟಿ ರೂ. ಮೊತ್ತದ ಚೆಕ್ ವಿತರಿಸಲಾಗಿದೆ. ಕಾರಣ ಇವರೆಲ್ಲ ಅಕ್ಟೋಬರ್ 25ಕ್ಕೂ ಮುಂಚೆ ಅಪಘಾತದಲ್ಲಿ ಜೀವಕಳೆದುಕೊಂಡಿದ್ದರು.
ಇನ್ನು 2024 ಅಕ್ಟೋಬರ್ 25ರಿಂದ 1.5 ಕೋಟಿ ರೂಪಾಯಿ ಅಪಘಾತ ವಿಮೆ ಪರಿಹಾರ ದೊರಕಲಿದೆ. ಇದು ನೌಕರರ ಅವಲಂಬಿತರಿಗೆ ತುಂಬಾ ಉಪಯೋಗಕ್ಕೆ ಬರುತ್ತದೆ ಎಂದು ಸಚಿವರು ತಿಳಿಸಿದರು.
ಅಪಘಾತ ವಿಮೆ 1.5 ಕೋಟಿ ರೂ. ನೀಡುವ ಯೋಜನೆಗೆ ಸಂಬಂಧಿಸಿದಂತೆ ಬಿಎಂಟಿಸಿ ಮತ್ತು ಕೆನರಾ ಬ್ಯಾಂಕ್ ಮಧ್ಯೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅಪಘಾತದಲ್ಲಿ ನೌಕರರು ಮೃತಪಟ್ಟ ಪ್ರಕರಣಗಳಲ್ಲಿ ಅವರ ಕುಟುಂಬಕ್ಕೆ ವಿಮೆ ಭದ್ರತೆ 1 ಕೋಟಿ ರೂ. ಹಾಗೂ ಸಂಸ್ಥೆಯಿಂದ 50 ಲಕ್ಷ ರೂಪಾಯಿ ಪರಿಹಾರ ದೊರೆಯಲಿದೆ ಎಂದರು.
ಅಪಘಾತ ಹೊರತುಪಡಿಸಿ ಅನಾರೋಗ್ಯ, ಇನ್ನಿತರ ಕಾರಣದಿಂದ ನೌಕರರು ಮೃತಪಟ್ಟರೆ ಅವರ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಲಾಗುತ್ತಿದ್ದು ಇಂದು ಅಂಥವ ಕುಟುಂಬದವರಿಗೂ ಪರಿಹಾರದ ಚೆಕ್ ವಿತರಿಸಲಾಯಿತು ಎಂದು ಹೇಳಿದರು.
ಬಿಎಂಟಿಸಿಯಲ್ಲಿ ಜಾರಿಯಲ್ಲಿದ್ದ ಗುಂಪು ವಿಮಾ ಯೋಜನೆಯನ್ನು ಪರಿಷ್ಕರಿಸಿ 2024ರ ಫೆ.19ರಂದು ಜಾರಿ ಮಾಡಲಾಗಿತ್ತು. ಅ ನಂತರದ ಅವಧಿಯಲ್ಲಿ ಈವರೆಗೆ 86 ನೌಕರರು ಮೃತಪಟ್ಟಿದ್ದಾರೆ. ಪರಿಶೀಲನೆ ಹಂತದಲ್ಲಿ 31 ಪ್ರಕರಣಗಳಿದ್ದು, ಉಳಿದವರಿಗೆ ಪರಿಹಾರ ವಿಮೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದರು..
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್., ನಿರ್ದೇಶಕಿ ಶಿಲ್ಪಾ ಎಂ., ಪ್ರಧಾನ ವ್ಯವಸ್ಥಾಪಕ ಮಹೇಶ್ ಪೈ ಹಾಗೂ ಇತರರು ಉಪಸ್ಥಿತರಿದ್ದರು.