ಬೆಂಗಳೂರು: ಕೊರೊನಾ ಸೋಂಕಿನಿಂದ ಉಂಟಾಗಿರುವ ಲಾಕ್ಡೌನ್ನಿಂದಾಗಿ ಹೊರ ರಾಜ್ಯಗಳಲ್ಲಿ ಸಿಲುಕಿರುವ ಕನ್ನಡಿಗರ ಸಮಸ್ಯೆ ಆಲಿಸಲು ರಾಜ್ಯ ಸರ್ಕಾರ ಸಹಾಯವಾಣಿ ಆರಂಭಿಸಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದ್ದಾರೆ.
ಮುಂಬೈ ಕನ್ನಡಿಗರು ಸೇರಿ ಹೊರ ರಾಜ್ಯಗಳಲ್ಲಿರುವ ಕನ್ನಡಿಗರ ಸಮಸ್ಯೆ ಆಲಿಸಲು ತುರ್ತಾಗಿ ಸಹಾಯವಾಣಿಯನ್ನು ಆರಂಭಿಸಬೇಕು ಎಂದು ಕೋರಿ ರಾಜ್ಯ ಮುಜರಾಯಿ, ಮೀನುಗಾರಿಕೆ ಖಾತೆ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮುಖ್ಯಮಂತ್ರಿಗೆ ಏ.24ರಂದು ಪತ್ರ ಬರೆದು ಮನವಿ ಮಾಡಿದ್ದರು. ಇದಕ್ಕೆ ತುರ್ತಾಗಿ ಸ್ಪಂದಿಸಿರುವ ಮುಖ್ಯಮಂತ್ರಿ ಸೋಮವಾರ ಸಹಾಯ ವಾಣಿ ಸ್ಥಾಪಿಸಿದ್ದಾರೆ. ಕಾರ್ಮಿಕ ಇಲಾಖೆಯ ಅಧೀನದಲ್ಲಿ ಸಹಾಯವಾಣಿ ಕಾರ್ಯ ನಿರ್ವಹಿಸಲಿದೆ. ಸಹಾಯವಾಣಿ ಚಾಲನೆ ಸಂದರ್ಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಟಾರ್ ಉಪಸ್ಥಿತರಿದ್ದರು.
ಲಾಕ್ಡೌನ್ ಸಮಸ್ಯೆಯಿಂದ ಪ್ರಯಾಣ ಮಾಡಲು ಸಾಧ್ಯವಾಗದೆ ಹೊರರಾಜ್ಯಗಳಲ್ಲಿ ಉಳಿದು ಸಮಸ್ಯೆಗೆ ಸಿಲುಕಿರುವ ರಾಜ್ಯದ ಕಾರ್ಮಿಕರಿಗಾಗಿ ಹಾಗೂ ಆಹಾರ ಮತ್ತು ಇತರ ಮೂಲಭೂತ ಸಮಸ್ಯೆಗಳ ಬಗ್ಗೆ ಶೀಘ್ರ ಪರಿಹಾರ ಕಲ್ಪಿಸುವ ದೃಷ್ಟಿಯಿಂದ ದೂರು ಬಂದ ಕೂಡಲೇ ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಲು ಸಹಾಯವಾಣಿ ಕಾರ್ಯಪ್ರವೃತ್ತವಾಗಲಿದೆ.
ಫೋನ್–ಇನ್ನಲ್ಲಿ ಉಲ್ಲೇಖ
ಲಾಕ್ಡೌನ್ನಿಂದಾಗಿ ಹೊರ ರಾಜ್ಯಗಳಲ್ಲಿ ಸಿಲುಕಿರುವ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಆಪ್ತ ಸಹಾಯವಾಣಿಯೊಂದನ್ನು ಸ್ಥಾಪಿಸುವ ತುರ್ತು ಆವಶ್ಯಕತೆಯ ಬಗ್ಗೆ ಇತ್ತೀಚೆಗೆ “ಉದಯವಾಣಿ’ ವತಿಯಿಂದ ಜಿಲ್ಲಾಧಿಕಾರಿಯವರ ಜತೆ ಆಯೋಜಿಸಿದ್ದ “ಫೋನ್- ಇನ್’ ಕಾರ್ಯಕ್ರಮದಲ್ಲಿ ಗಮನ ಸೆಳೆಯಲಾಗಿತ್ತು. ಅದಕ್ಕೆ ಸ್ಪಂದಿಸಿದ್ದ ಜಿಲ್ಲಾಧಿಕಾರಿಗಳು, ಹೊರ ದೇಶ ಹಾಗೂ ರಾಜ್ಯಗಳಲ್ಲಿ ಲಾಕ್ಡೌನ್ನಿಂದಾಗಿ ಸಿಲುಕಿಕೊಂಡಿರುವ ಕರಾವಳಿಗರ ಸಹಿತ ಕನ್ನಡಿಗರಿಗೆ ಆತ್ಮ ಸ್ಥೈರ್ಯ ತುಂಬುವ ಉದ್ದೇಶದಿಂದ ಆಪ್ತ ಸಹಾಯವಾಣಿ ಪ್ರಾರಂಭಿಸುವ ಬಗ್ಗೆ ಚಿಂತನೆ ನಡೆಸುವುದಾಗಿ ಭರವಸೆ ನೀಡಿದ್ದರು. ಇದೀಗ ಜಿಲ್ಲಾ ಉಸ್ತುವಾರಿ ಸಚಿವರು ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸುವ ಮೂಲಕ ಹೊರನಾಡ ಕನ್ನಡಿಗರ ಅಹವಾಲು ಆಲಿಸುವ ಪ್ರತ್ಯೇಕ ಸಹಾಯವಾಣಿ ಪ್ರಾರಂಭಿಸುವಲ್ಲಿ ನೆರವಾಗಿರುವುದು ಗಮನಾರ್ಹ.
080-22636800 ಸಹಾಯವಾಣಿಗೆ ಕರೆ ಮಾಡಿ
ಲಾಕ್ಡೌನ್ನಿಂದಾಗಿ ಹೊರ ರಾಜ್ಯಗಳಲ್ಲಿ ಸಮಸ್ಯೆಗೆ ಸಿಲುಕಿರುವ ಕನ್ನಡಿಗರು 080-22636800 ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. ಸಹಾಯ ವಾಣಿಯು ಬೆಂಗಳೂರಿನ ಡೈರಿ ವೃತ್ತದಲ್ಲಿರುವ ಕಲ್ಯಾಣ ಸುರಕ್ಷಾ ಭವನದಲ್ಲಿ ಕಾರ್ಯ ನಿರ್ವಹಿಸಲಿದೆ. ಕೇಂದ್ರದಲ್ಲಿ ಪ್ರತಿಪಾಳಿಯಲ್ಲಿ 50 ಮಂದಿ ಯಂತೆ 3 ಪಾಳಿಗಳಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.