ಬೆಂಗಳೂರು: ಕೋವಿಡ್-19 ಹಿನ್ನೆಲೆ ಕೇಂದ್ರ ಸರ್ಕಾರದ ನಿರ್ಧಾರಗಳ ಪ್ರಕಾರ ಆಗಸ್ಟ್ 15ರಂದು ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಹೀಗಾಗಿ ಯಾವುದೇ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ, ಪರೇಡ್(ಮಾರ್ಚ್ ಪಾಸ್ಟ್) ಇರದೆ ಅತ್ಯಂತ ಸರಳವಾಗಿ ಆಚರಣೆ ಮಾಡಲಾಗುತ್ತದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2020ರ ರಾಜ್ಯಮಟ್ಟದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ಕುರಿತು ಇಂದು ತಮ್ಮ ಅಧ್ಯಕ್ಷತೆಯಲ್ಲಿ ಪಾಲಿಕೆ ಕೇಂದ್ರ ಕಚೇರಿ ಸಭಾಂಗಣ-01ರಲ್ಲಿ ಆಯೋಜಿಸಿದ್ದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ, ಈ ಬಾರಿ ಹಲವಾರು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಆಗಸ್ಟ್ 15ರಂದು ಮುಖ್ಯಮಂತ್ರಿಗಳು ಬೆಳಗ್ಗೆ 9 ಗಂಟೆಗೆ ದ್ವಜಾರೋಹಣ ಮಾಡಲಿದ್ದಾರೆ. ಪ್ರತಿ ವರ್ಷ ದ್ವಜಾರೋಹಣ ಆದ ಬಳಿಕ ಮುಖ್ಯಮಂತ್ರಿಗಳು ತುಕಡಿಗಳ ತಪಾಸಣೆ ನಡೆಸುತ್ತಿದ್ದರು. ಆದರೆ, ಈ ಬಾರಿ ತುಕಡಿಗಳ ತಪಾಸಣೆ ಇರುವುದಿಲ್ಲ. ನೇರವಾಗಿ ಭಾಷಣ ಮಾಡಲಾಗುತ್ತದೆ. ಯಾವುದೇ ರೀತಿಯ ಮಾರ್ಚ್ ಪಾ ಸ್ಟ್, ಸಾಂಸ್ಕೃತಿಕ ಕಾರ್ಯಕ್ರಮವಾಗಲಿ, ಹೆಲಿಕಾಫ್ಟರ್ ಮೂಲಕ ಪುಷ್ಪಾರ್ಚನೆ ಮಾಡುವುದಾಗಲಿ ಇರುವುದಿಲ್ಲ. ಮುಖ್ಯಮಂತ್ರಿಗಳ ಭಾಷಣ ಮುಗಿದ ನಂತರ ನಾಡಗೀತೆ, ರೈತ ಗೀತೆ, ಎರಡು ದೇಶಭಕ್ತಿ ಗೀತೆಗಳು ಮಾತ್ರ ಇರಲಿವೆ ಎಂದರು.
ಈ ಬಾರಿ ವಿಶೇಷವಾಗಿ ಸಮಾರಂಭಕ್ಕೆ 75 ಮಂದಿ ಕೊರೊನಾ ವಾರಿಯರ್ಸ್ ಹಾಗೂ 25 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾದವರನ್ನು ಆಹ್ವಾನಿಸಲಾಗುತ್ತಿದ್ದು, ಪ್ರತ್ಯೇಕ ಹಾಸನಗಳ ವ್ಯವಸ್ಥೆ ಮಾಡಲಾಗುತ್ತದೆ. ಜತೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮಾತ್ರ ಸೀಮಿತಗೊಳಿಸಿ, ಸುಮಾರು 200 ಮಂದಿ ಮೀರದಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸಮಾರಂಭವನ್ನು ಸರಳವಾಗಿ ಆಯೋಜನೆ ಮಾಡಲಾಗುತ್ತದೆ ಎಂದು ಹೇಳಿದರು.
ಸಮಾರಂಭಕ್ಕೆ ಬರುವವರೆಲ್ಲರಿಗೂ ರ‍್ಯಾಪಿ ಡ್ ಆಂಟಿಜೆನ್ ಟೆಸ್ಟ್(RAT) ಮಾಡಲು ಕಿಯೋಸ್ಕ್ ಗಳ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೆ ಆ ದಿನ ಸಮಾರಂಭಕ್ಕೆ ಬರುವವರೆಲ್ಲರೂ ಕಡ್ಡಾಯವಾಗಿ ಮಾಸ್ಕ್ (ಮುಖಗವಸು) ಧರಿಸಿರಬೇಕು. ಮುಖ್ಯದ್ವಾರಗಳ ಬಳಿ ಪಾಲಿಕೆ ಸಿಬ್ಬಂದಿಯನ್ನು ನಿಯೋಜನೆ ಮಾಡಿ ಬರುವವರೆಲ್ಲರಿಗೂ ಥರ್ಮಲ್ ಸ್ಕ್ಯಾನಿಂಗ್ ಹಾಗೂ ಪಲ್ಸ್ ಅಕ್ಸಿಮೀಟರ್ ನಲ್ಲಿ ತಪಾಸಣೆ ಮಾಡುವುದು ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ವಿವರಿಸಿದರು.
ಈ ವೇಳೆ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಶಿವಮೂರ್ತಿ, ವಿಶೇಷ ಆಯುಕ್ತರು (ಆಡಳಿತ) ಅನ್ಬುಕುಮಾರ್, ಉಪ ಆಯುಕ್ತರು (ಆಡಳಿತ) ಲಿಂಗಮೂರ್ತಿ, ಪೂರ್ವ ವಲಯ ಜಂಟಿ ಆಯುಕ್ತೆ ಪಲ್ಲವಿ, ಪೂರ್ವ ವಲಯ ಮುಖ್ಯ ಅಭಿಯಂತರ ಪ್ರಭಾಕರ್, ಪೊಲೀಸ್ ಹಾಗೂ ಇತರ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.