ಬೆಂಗಳೂರು: ಕೊರೊನಾ ಸೋಂಕಿತ ಒಂದು ವರ್ಷ ನಾಲ್ಕು ತಿಂಗಳ ಮಗುವಿನ ಆರೈಕೆಗೆ 6 ಸಾವಿರ ರೂ. ಕೊಡುವಂತೆ ಬಿಬಿಎಂಪಿ ಬೇಡಿಕೆ ಇಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಶ್ರೀಕಂಠೇಶ್ವರ ನಗರದ ನಿವಾಸಿಯಾಗಿರುವ ತಂದೆ ಮತ್ತು ಮಗುವಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಆದರೆ ಆ ಮಗುವೊಂದನ್ನೇ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಮಗುವಿನ ಜತೆ ಅದರ ಅಮ್ಮವಿರುವುದಕ್ಕೆ ದಿನಕ್ಕೆ 6ಸಾವಿರ ರೂ. ಕಟ್ಟಬೇಕು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ನಿತ್ಯ ಆರು ಸಾವಿರ ರೂ. ಕಟ್ಟುವುದಕ್ಕೆ ಶಕ್ತರಿಲ್ಲ ನಾವು ಏನು ಮಾಡುವುದು ಎಂದು ತಾಯಿ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ.
ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು ಮಗುವನ್ನು ಹೋಂ ಐಸೋಲೇಷನಲ್ಲಿ ಇಟ್ಟಿದ್ದಾರೆ.
ಇದಕ್ಕೂ ಮೊದಲು ಮಗುವನ್ನು ನೋಡಿಕೊಳ್ಳುಲು ಹಿಂದೇಟು ಹಾಕಿದ್ದು ಅಲ್ಲದೆ, ಒಂದು ವೇಳೆ ಮಗುವಿಗೆ ಏನಾದರು ಹೆಚ್ಚುಕಡಿಮೆ ಆದರೆ ನಾವು ಜವಾಬ್ದಾರರಲ್ಲ ಎಂದು ಹೇಳಿ ಕೈ ತೊಳೆದುಕೊಂಡಿದ್ದರು.
ಮಗುವಿನ ಜತೆಗೆ ತಾಯಿಯು ಇರಬೇಕು ಅಂದರೆ ದಿನಕ್ಕೆ 6 ಸಾವಿರ ರೂಪಾಯಿಯನ್ನು ಬೆಡ್, ಊಟದ ವ್ಯವಸ್ಥೆ ಕಲ್ಪಿಸಲು ಕಟ್ಟಬೇಕು ಎಂದು ತಿಳಿಸಿದ್ದರು. ತಂದೆಗೂ ಕೊರೊನಾ ಪಾಸಿಟಿವ್ ಆಗಿದೆ. ಅವರು ಕೋವಿಡ್ ಆಸ್ಪತ್ರೆಗೆ ದಾಖಲಾಗಬೇಕು. ಇದರ ಜತೆಗೆ ನಾವು ಬಡವರಾಗಿದ್ದು, ದಿನಕ್ಕೆ ಆರು ಸಾವಿರ ಕಟ್ಟಲು ಸಾಧ್ಯವಿಲ್ಲ ಎಂದು ಗೋಳಾಡುತ್ತಿದ್ದರು.
ಸದ್ಯ ಮಗುವನ್ನು ಹೋಂ ಐಸೋಲೇಷನ್‌ನಲ್ಲಿ ಇಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಅದರ ಜತೆಗೆ ಆ ಮಗುವನ್ನು ನಿತ್ಯ ಬಂದು ನೋಡಿಕೊಳ್ಳುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೆಕಿದೆ.