ಬೆಳಗಾವಿ: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್ಸಿ) 2019ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷಾ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದ್ದು ಜಿಲ್ಲೆಯ ರಾಯಭಾಗ ತಾಲೂಕು ಕುಡಚಿಯ ಗಜಾನನ ಬಾಲೆ 663 ನೇ ರ‍್ಯಾಂಕ್ ಗಳಿಸಿ ಸಾಧನೆ ಮಾಡಿದ್ದಾರೆ.
ಯುಪಿಎಸ್‌ಸಿ ಪರಿಕ್ಷೆಯಲ್ಲಿ ನಾಲ್ಕು ಬಾರಿ ವಿಫಲವಾಗಿದ್ದ ಅವರು ಛಲ ಬಿಡದೆ ಐದನೇ ಬಾರಿಗೆ ಸಫಲರಾಗಿದ್ದಾರೆ ಇಂಜಿನಿಯರಿಂಗ್ ಪದವೀಧರರಾದ 28 ವರ್ಷದ ಗಜಾನನ ಕನ್ನಡವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದ್ದರು .
ಕನ್ನಡ ಪತ್ರಿಕೆಯನ್ನೂ ಓದುತ್ತಿದ್ದೆ: ಈ ಬಾರಿ ಮೇನ್ಸ್‌ನಲ್ಲಿ ಚೆನ್ನಾಗಿ ಮಾಡಿದ್ದೆ. ಆದ್ದರಿಂದ ಪಾಸ್ ಆಗುತ್ತೇನೆ ಎಂಬ ವಿಶ್ವಾಸವಿತ್ತು. ನಿತ್ಯ ಎಂಟು ತಾಸು ಓದುತ್ತಿದ್ದೆ. ಅದರಲ್ಲಿ ಮುಖ್ಯವಾಗಿ ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳಲು ದಿನಪತ್ರಿಕೆಗಳನ್ನು ಓದುತ್ತಿದ್ದೆ ಇಂಗ್ಲಿಷ್ ಪತ್ರಿಕೆಗಳೊಂದಿಗೆ ಕನ್ನಡಿಗರ ಮನೆಮಾತಾಗಿರುವ ಪ್ರಜಾವಾಣಿಯನ್ನು ನಿಯಮಿತವಾಗಿ ಓದುತ್ತಿದ್ದೆ. ಇದರಿಂದ ಪರೀಕ್ಷೆಯಲ್ಲಿ ಬಹಳ ಸಹಾಯವಾಯಿತು ಎಂದು ತಾವು ಪರೀಕ್ಷೆಗೆ ತಯಾರಾದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ
ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದೆ: ನ್ಯೂ ಡೆಲ್ಲಿಯಲ್ಲಿ ಮೇನ್ಸ್ ಕೋಚಿಂಗ್ ಪಡೆಯುತ್ತಿದ್ದ ವೇಳೆ ಅಲ್ಲಿನ ಖರ್ಚುಗಳಿಗಾಗಿ ಖಾಸಗಿ ಕಂಪನಿಯೊಂದರಲ್ಲಿ ಕಂಟೆಂಟ್ ಡಿಸೈನರ್ ಆಗಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದೆ. ನ್ಯೂಡೆಲ್ಲಿಯ ವಾಜಿರಾಮ್ ಕೋಚಿಂಗ್ ಸೆಂಟರ್, ಬೆಂಗಳೂರಿನ ಅನರ್ಘ್ಯ ಐಎಎಸ್ ಅಕಾಡೆಮಿ ಹಾಗೂ ಧಾರವಾಡದಲ್ಲಿ ಕೋಚಿಂಗ್ ಪಡೆದಿದ್ದೇನೆ.
ನ್ಯೂಡೆಲ್ಲಿಯಿಂದ ಜುಲೈ 25ರಂದು ಕುಡಚಿಗೆ ವಾಪಸ್ಸಾಗಿದ್ದೇನೆ. ಹೀಗಾಗಿ ಹೋಂ ಕ್ವಾರಂಟೈನ್ ನಲ್ಲಿದ್ದೇನೆ ಕ್ವಾರಂಟೈನ್ ಅವಧಿ ಇನ್ನೂ ಎರಡು ದಿನಗಳವರೆಗೆ ಇದೆ ಎಂದು ಮಾಹಿತಿ ನೀಡಿದರು
ಕನ್ನಡ ಮಾಧ್ಯಮ: ಎಸ್ಎಸ್ಎಲ್‌ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತಿರುವ ಅವರು ಗ್ರಾಮೀಣ ವಿದ್ಯಾರ್ಥಿಯೂ ಹೌದು. ತಂದೆ ಶಂಕರ್ ಉಗಾರ ಶುಗರ್ ಕಾರ್ಖಾನೆಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದಾರೆ ತಾಯಿ ಸುಜಾತ ಗೃಹಿಣಿ.
ಉಗಾರ ಖುರ್ದ್‌ನ ಶ್ರೀಹರಿ ವಿದ್ಯಾಲಯದಲ್ಲಿ ಎಸ್ಸೆಸ್ಸೆಲ್ಸಿ , ಧಾರವಾಡದ ಜೆಎಸ್ಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ್ದಾರೆ. ಬೆಳಗಾವಿಯ ಜಿಐಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ (ಇ ಅಂಡ್ ಸಿ ವಿಭಾಗ) ಪದವಿ ಪಡೆದಿದ್ದಾರೆ ಎಲ್ಲಾ ಪರೀಕ್ಷೆಗಳಲ್ಲೂ ಅವರು ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆ ಹೊಂದಿದ್ದಾರೆ. 2013 ರಲ್ಲಿ ಬಿಇ ಮುಗಿಸಿ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದೆ. ಪರೀಕ್ಷೆ ಕ್ಲಿಯರ್ ಮಾಡಿದ್ದಕ್ಕೆ ಬಹಳ ಖುಷಿಯಾಗಿದೆ. ನಾವು ಆರ್ಥಿಕವಾಗಿ ಅಷ್ಟೇನೂ ಸ್ಥಿತಿವಂತರಲ್ಲ ತಂದೆ ತಾಯಿ ನನ್ನನ್ನು ಕಷ್ಟಪಟ್ಟು ಬೆಳೆಸಿದ್ದಾರೆ ಅವರ ಪರಿಶ್ರಮಕ್ಕೆ ತಕ್ಕಂತೆ ಪ್ರತಿಫಲ ತಂದುಕೊಟ್ಟ ತೃಪ್ತಿ ಇದೆ. ಅವರ ಸಹಕಾರದಿಂದ ಇದೆಲ್ಲವೂ ಸಾಧ್ಯವಾಗಿದೆ ಎಂದು ಗಜಾನನ ಹೇಳಿದರು.
ಅಣ್ಣಾಮಲೈ ಸ್ಫೂರ್ತಿ: ಇಂಜಿನಿಯರಿಂಗ್ ಸೇರಿದ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಆಸಕ್ತಿ ಬಂತು ಎಸ್ಸೆಸ್ಸೆಲ್ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ್ದು ಪರೀಕ್ಷೆ ವೇಳೆ ಸಹಕಾರಿಯಾಯಿತು. ಐಪಿಎಸ್ ಅಧಿಕಾರಿ ರವಿ ಚನ್ನಣ್ಣವರ ಮತ್ತು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅಂಥವರನ್ನು ನೋಡಿದಾಗ ನಾನು ಹೀಗಾಗಬೇಕು ಎಂದುಕೊಳ್ಳುತ್ತಿದ್ದೆ. ನನ್ನ ಛಲವೇ ಹೆಚ್ಚು ಸ್ಫೂರ್ತಿ ನೀಡಿತು. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದುಕೊಳ್ಳುತ್ತಿದ್ದೆ. ಈಗ ನಾನು ಪಡೆದಿರುವ ರ‍್ಯಾಂಕ್ ಗೆ ಐಪಿಎಸ್ ಸಿಕ್ಕರೆ ಹೆಚ್ಚು ಖುಷಿಯಾಗುತ್ತದೆ ಎಂದು ಸಂತಸ ಹಂಚಿಕೊಂಡರು.
ಕೈಲಾದಷ್ಟು ಸಮಾಜ ಸೇವೆ: ಬಡವರಿಗೆ, ನೆರವಾಗಬೇಕು ಎನ್ನುವ ಕನಸಿದೆ ಸರ್ಕಾರದ ಯೋಜನೆಗಳ ಲಾಭವನ್ನು ಸಮರ್ಥವಾಗಿ ಅನುಷ್ಠಾನಕ್ಕೆ ತರಬೇಕು. ಫಲಾನುಭವಿಗಳಿಗೆ ಅದನ್ನು ತಲುಪಿಸಬೇಕು ಎಂಬ ಆಸೆಯಿದೆ. ಬದ್ಧತೆಯಿಂದ ಕೆಲಸ ಮಾಡಬೇಕು ಎಂದುಕೊಂಡಿದ್ದೇನೆ. ನಮ್ಮ ಕೈಲಾದಷ್ಟು ಸಹಾಯ ಮಾಡಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.
ಹೆಚ್ಚು ಶ್ರಮ, ಸಹನೆ ಮುಖ್ಯ: ಫೇಸ್ ಫೇಸ್ ಬುಕ್ ಅಕೌಂಟ್ ಇದೆಯಾದರೂ ಹೆಚ್ಚು ಬಳಸುತ್ತಿರಲಿಲ್ಲ ಹೆಚ್ಚು ಸಮಯ ಓದುವುದಕ್ಕೆ ಮೀಸಲಿಟ್ಟಿದ್ದೆ ಎನ್ನುವ ಅವರು, ಯುಪಿಎಸ್ಸಿ ಪರೀಕ್ಷೆ ಕ್ಲಿಯರ್ ಮಾಡಲು ಬದ್ಧತೆಯಿಂದ ಓದಬೇಕು ಹೆಚ್ಚು ಶ್ರಮ ಪಡಬೇಕು ಸಹನೆ ಮುಖ್ಯವಾಗಿ ಬೇಕು ಎಂದು ಭವಿಷ್ಯದ ಅಭ್ಯರ್ಥಿಗಳಿಗೆ ಸಲಹೆ ನೀಡಿದ್ದಾರೆ. ಮಗ ಯುಪಿಎಸ್ಸಿ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಗಳಿಸಿರುವುದಕ್ಕೆ ಖುಷಿಯಾಗಿದೆ. ಆತ ಅಧಿಕಾರಿಯಾಗಿ ಜನಸೇವೆ ಮಾಡಿದರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ ಎಂದು ತಂದೆ ಶಂಕರ್ ಮಗನ ಸಾಧನೆಯನ್ನು ಸಂತಸದಿಂದ ಹಂಚಿಕೊಂಡಿದ್ದಾರೆ.
Super