ಶ್ರೀನಗರ್: ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಗಿರೀಶ್ ಚಂದ್ರ ಮುರ್ಮು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ಮತ್ತು ಆಲ್ ಇಂಡಿಯಾ ರೇಡಿಯೋ ಸುದ್ದಿ ಬಿತ್ತರಿಸಿವೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಮುರ್ಮು ಅವರು ರವಾನಿಸಿದ್ದಾರೆ. ಆದರೆ, ರಾಜೀನಾಮೆ ಅಂಗೀಕಾರವಾಗಿದೆಯೇ ಅಥವಾ ತಿರಸ್ಕಾರವಾಗಿದೆಯೇ ಎಂಬ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.
ಜಿ.ಸಿ. ಮುರ್ಮು 1985 ರ ಬ್ಯಾಚ್ ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವಿಸ್ (ಐಎಎಸ್) ಗುಜರಾತ್ ಕೇಡರ್ ಅಧಿಕಾರಿಯಾಗಿದ್ದು, ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಮೋದಿ ಪ್ರಧಾನಿಯಾದ ನಂತರ ಇರುವ ಕೇಂದ್ರ ಸರ್ಕಾರದ ಹಣಕಾಸು ಇಲಾಖೆಗೆ ನಿಯೋಜನೆಗೊಂಡಿದ್ದರು.
ಕಳೆದ ನವೆಂಬರ್ 30 ರಂದು ಮುರ್ಮು ನಿವೃತ್ತರಾಗಬೇಕಿತ್ತು. ಅಷ್ಟರೊಳಗೆ ಅಕ್ಟೋಬರ್‌ನಲ್ಲಿ ಅವರನ್ನು ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಲಾಗಿತ್ತು. ಸದ್ಯ ಪ್ರಸ್ತುತ ಭಾರತದ ಕಂಟ್ರೋಲರ್ ಆಡಿಟರ್ ಜನರಲ್ (ಸಿಎಜಿ) ಹುದ್ದೆಗೆ ಮುರ್ಮು ಮುಂಚೂಣಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ವರ್ಷ ಆಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆ 2019 ರ ಅಡಿಯಲ್ಲಿ ಹಿಂದಿನ ರಾಜ್ಯದ ವಿಶೇಷ ಸ್ಥಾನಮಾನ 370ನೇ ವಿಧಿಯನ್ನು ರದ್ದುಪಡಿಸಿ ನಂತರ ಅವರನ್ನು ಜಮ್ಮು ಮತ್ತು ಕಾಶ್ಮೀರದ ಮೊದಲ ಲೆಫ್ಟಿನೆಂಟ್-ಗವರ್ನರ್ ಆಗಿ ನೇಮಿಸಲಾಯಿತ್ತು.