ಬೆಂಗಳೂರು: ರಾಜ್ಯದಲ್ಲಿ ಈವರೆಗೆ 80,643 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, ಅದರಲ್ಲಿ 695 ಅಂದರೆ ಶೇ. 0.86% ಸೋಂಕಿತರು ಮಾತ್ರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರ ಚಿಕಿತ್ಸೆಗೆ ಮೂಲಭೂತ ಸೌಕರ್ಯವನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದ್ದು ಯಾವುದೇ ಕೊರತೆಯಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಪ್ರತಿಯೊಬ್ಬ ರೋಗಿಗೂ ಸೂಕ್ತ ಚಿಕಿತ್ಸೆ ದೊರಕಿಸುವುದು ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ಇದಕ್ಕಾಗಿ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಎಲ್ಲಾ ರೀತಿಯ ಸಹಕಾರ ಮತ್ತು ನೆರವು ನೀಡಲು ಬದ್ಧವಾಗಿದೆ. ಕೊರೊನಾ ಚಿಕಿತ್ಸೆಗೆ ಮೂಲಸೌಕರ್ಯ ಒದಗಿಸುವುದು ದೊಡ್ಡ ಸವಾಲು ನಿಜ. ಆದರೆ ಅದನ್ನು ಹಿಮ್ಮೆಟ್ಟಿಸುವ ನಮ್ಮ ಸಂಕಲ್ಪ ಅದಕ್ಕಿಂತ ಬಲವಾಗಿದೆ ಎಂದು ಹೇಳಿದ್ದಾರೆ.
ನಿನ್ನೆ ರಾತ್ರಿ ಕಿಮ್ಸ್ ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇರುವುದು ನನ್ನ ಗಮನಕ್ಕೆ ಬಂದ ಕೂಡಲೇ ಹೆಚ್ಚು ರೋಗಿಗಳನ್ನು ವಿಕ್ಟೊರಿಯಾ, ಬೌರಿಂಗ್ & ರಾಜೀವ್ ಗಾಂಧಿ ಆಸ್ಪತ್ರೆಗೆ ರವಾನಿಸಲು ಆಂಬುಲನ್ಸ್ ವ್ಯವಸ್ಥೆ ಮಾಡಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಚಿಕಿತ್ಸೆಗೆ 20 ಭಾರಿ ಗಾತ್ರದ ಆಕ್ಸಿಜನ್ ಸಿಲಿಂಡರ್ ಗಳನ್ನು ಕಿಮ್ಸ್ ಗೆ ಕಳುಹಿಸಲಾಗಿದೆ ಎಂದು ವಿವರಿಸಿದ್ದಾರೆ.
ಇನ್ನು ಕಿಮ್ಸ್ ಆಸ್ಪತೆಯಿಂದ 14 ರೋಗಿಗಳನ್ನು ವಿಕ್ಟೊರಿಯಾ ಆಸ್ಪತ್ರೆಗೆ ಮತ್ತು 15 ರೋಗಿಗಳನ್ನು ಬೌರಿಂಗ್ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಸುರಕ್ಷಿತವಾಗಿ ರವಾನಿಸಲಾಗಿದೆ. ತುರ್ತು ಪರಿಸ್ಥಿತಿಗಾಗಿ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ 40 ಆಕ್ಸಿಜನ್ ಬೆಡ್ ಗಳನ್ನು ಸಿದ್ಧ ಪಡಿದಲಾಗಿದೆ ಎಂದು ತಿಳಿಸಿದ್ದಾರೆ.
ಕಿಮ್ಸ್ ಆಸ್ಪತೆಯಿಂದ 14 ರೋಗಿಗಳನ್ನು ವಿಕ್ಟೊರಿಯಾ ಆಸ್ಪತ್ರೆಗೆ ಮತ್ತು 15 ರೋಗಿಗಳನ್ನು ಬೌರಿಂಗ್ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲಕ ಸುರಕ್ಷಿತವಾಗಿ ರವಾನಿಸಲಾಗಿದೆ. ತುರ್ತು ಪರಿಸ್ಥಿತಿಗಾಗಿ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ 40 ಆಕ್ಸಿಜನ್ ಬೆಡ್ ಗಳನ್ನು ಸಿದ್ಧ ಪಡಿದಲಾಗಿದೆ.
— Dr Sudhakar K (@mla_sudhakar) August 17, 2020